-ಯಡಿಯೂರಪ್ಪ ಕೆಜೆಪಿ ಕಟ್ಟದಿದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ
ರಾಯಚೂರು: ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಇನ್ನೂ ಬಗೆಹರಿದಿಲ್ಲ, ಗೊಂದಲ ಬಗೆಹರಿಸಲು ನೇಮಿಸಿದ್ದ ಸಮಿತಿ ಸಮಸ್ಯೆ ನಿವಾರಣೆಗೆ ಪ್ರಯತ್ನ ಮಾಡುತ್ತಿಲ್ಲ ಅಂತ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಯಚೂರಿನಲ್ಲಿ ಮೇ 8 ರಂದು ನಡೆಯಲಿರುವ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಅಭ್ಯಾಸ ವರ್ಗದ ಕಾರ್ಯಕ್ರಮ ಸಿದ್ದತೆ ವೀಕ್ಷಣೆ ಮುನ್ನ ಈಶ್ವರಪ್ಪ ಮಾತನಾಡಿದರು. ಫೆ.10 ಕ್ಕೆ ವರದಿ ಸಿದ್ದಪಡಿಸಿ ಸಮಸ್ಯೆ ಬಗೆಹರಿಸಲು ಅಮಿತ್ ಶಾ ತಿಳಿಸಿದ್ದರು. ಆದ್ರೆ ಸಮಿತಿ ಯಾವ ಜಿಲ್ಲೆಗೂ ಭೇಟಿ ನೀಡಿ ಗೊಂದಲ ಬಗ್ಗೆ ಮಾಹಿತಿ ಪಡೆದಿಲ್ಲ. ಇದು ಅತೃಪ್ತಿ ಮುಂದುವರೆಯಲು ಕಾರಣವಾಗಿದೆ. ಇನ್ನೂ ಬ್ರಿಗೇಡ್‍ಗೆ ಹೋದರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಕೆಲ ನಾಯಕರು ಹೇಳುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ ಅಂತ ಈಶ್ವರಪ್ಪ ಹೇಳಿದರು.
Advertisement
Advertisement
ನನ್ನ ರಕ್ತದ ಕಣಕಣದಲ್ಲೂ ಬಿಜೆಪಿಯಿದೆ: ಯಡಿಯೂರಪ್ಪ ಅವರು ಕೆಜೆಪಿ ಕಟ್ಟದಿದ್ದರೇ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ ಅಂತ ಬಿಎಸ್‍ವೈ ವಿರುದ್ದ ಈಶ್ವರಪ್ಪ ಕಿಡಿಕಾರಿದ್ರು. ನನ್ನ ರಕ್ತದ ಕಣಕಣದಲ್ಲೂ ಬಿಜೆಪಿಯಿದೆ ಅದಕ್ಕೆ ನಾನು ಅಪ್ಪ ಅಮ್ಮನಿಗೆ ಹುಟ್ಟಿದ್ದು ಅಂತ ಹೇಳಿದ್ದು ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದರು. ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾತಿನಂತೆ ಬಡವರು, ಧೀನ ದಲಿತರಿಗಾಗಿ ಬ್ರಿಗೇಡ್ ಮುಂದುವರೆಸುತ್ತಿದ್ದೇವೆ. ಯಾವುದೇ ರಾಜಕೀಯ ಚಟುವಟಿಕೆ ನಡೆಸುತ್ತಿಲ್ಲ. ಆದ್ರೆ ಸಂಘಟನೆ ಉಳಿಸೋಣ ಬನ್ನಿ ಕಾರ್ಯಕ್ರಮದಲ್ಲಿ ಬ್ರಿಗೇಡ್ ಹಿಂದೆ ಸಂತೋಷ್ ಇದ್ದಾರೆ ಅಂತ ಯಡಿಯೂರಪ್ಪ ಹೇಳಿರುವುದು ನೋವು ತಂದಿದೆ. ಕಾಂಗ್ರೆಸ್, ಜೆಡಿಎಸ್ ನಿಂದ ಹಣ ತೆಗೆದುಕೊಂಡು ಅವರಿಗೆ ಬೆಂಬಲಿಸುತ್ತಿದ್ದೇನೆ ಅಂತ ಕೆಲ ನಾಯಕರು ಸುಳ್ಳು ಹಬ್ಬಿಸುತ್ತಿರುವುದು ಸರಿಯಲ್ಲ ಎಂದರು.
Advertisement
Advertisement
ರಾಷ್ಟ್ರಾಧ್ಯಕ್ಷರು ಹೇಳಿರುವಂತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತೆ, ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ. ಆದ್ರೆ ಎಂಥಹ ಮುಖ್ಯಮಂತ್ರಿ ನಮಗೆ ಬೇಕು ಅನ್ನೋದು ಗೊಂದಲದಲ್ಲಿದೆ ಎಂದರು. ರೆಸಾರ್ಟ್ ರಾಜಕಾರಣ ಮಾಡುವ ಶಾಸಕರಿಂದ ಆಯ್ಕೆಯಾಗುವ ಮುಖ್ಯಮಂತ್ರಿ ಬೇಡ, ಸಂಘಟನೆ ಹೋರಾಟದ ಮೂಲಕ ಬಂದ ಶಾಸಕರಿಂದ ಆಯ್ಕೆಯಾಗುವ ಮುಖ್ಯಮಂತ್ರಿ ಬೇಕು ಎಂದು ಹೇಳಿದರು.
ಮೇ 6 ಮತ್ತು 7ರಂದು ಮೈಸೂರಿನಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಬಂದಮೇಲೆ ಹೋಗುವುದರ ಬಗ್ಗೆ ಯೋಚಿಸುತ್ತೇನೆ ಅಂತ ಈಶ್ವರಪ್ಪ ತಿಳಿಸಿದ್ದಾರೆ. ರಾಯಚೂರಿಗೆ ಆಗಮಿಸುವ ಮುನ್ನ ಮಂತ್ರಾಲಯಕ್ಕೆ ತೆರಳಿದ್ದ ಈಶ್ವರಪ್ಪ ರಾಯರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬ್ರಿಗೇಡ್‍ಗೆ ಶಕ್ತಿ: ವಿವಾದಗಳ ನಡುವೆಯೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ಗೆ ಶಕ್ತಿ ತುಂಬಲು ರಾಯಚೂರಿನಲ್ಲಿ ಮೇ 8 ರಂದು ಅಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಬ್ರಿಗೇಡ್ ಹಾಗೂ ಯುವ ಬ್ರಿಗೇಡ್‍ನ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅಭ್ಯಾಸ ವರ್ಗದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಸೂದೆ ಕುರಿತು ಹಾಗೂ ಬ್ರಿಗೇಡ್‍ನ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.
ಇನ್ನೂ ಅಭ್ಯಾಸ ವರ್ಗ ಕಾರ್ಯಕ್ರಮ ಸಿದ್ದತೆ ವೀಕ್ಷಣೆಯಲ್ಲಿದ್ದ ಬ್ರಿಗೇಡ್ ರಾಜ್ಯಾಧ್ಯಕ್ಷ ಕೆ.ವಿರುಪಾಕ್ಷಪ್ಪ ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ಕಾರ್ಯಕಾರಣಿ ಸಭೆ ಮಾಡುತ್ತೇವೆ ಎಂದಿದ್ದಾರೆ. ಸಂತೋಷ್‍ಜೀ ಮೊದಲಿನಿಂದ ಪರಿಚಯವಿದ್ದಿದ್ದರಿಂದ ನಿನ್ನೆ ಭೇಟಿಯಾಗಿ ಬಂದಿದ್ದೇನೆ ಬ್ರಿಗೇಡ್ ಬಗ್ಗೆ ಚರ್ಚಿಸಿಲ್ಲ ಅಂತ ವಿರುಪಾಕ್ಷಪ್ಪ ತಿಳಿಸಿದ್ದಾರೆ.