Connect with us

Districts

ಅಭ್ಯರ್ಥಿಗಳು ಚುನಾವಣೆ ಖರ್ಚು ಮಾಡಿರೋದು 70 ಲಕ್ಷನಾ, 70 ಕೋಟಿನಾ ಪ್ರಮಾಣ ಮಾಡಲಿ: ವಾಟಾಳ್

Published

on

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಚುನಾವಣಾ ಖರ್ಚು ಎಂದು 70 ಲಕ್ಷದ ವೆಚ್ಚ ತೋರಿಸ್ತಾರಲ್ಲ, ಇವರೆಲ್ಲಾ ಅವರವರ ಮನೆಯ ದೇವರ ಮುಂದೆ ಹೋಗಿ 70 ಲಕ್ಷ ಖರ್ಚು ಮಾಡಿದ್ದಾರಾ, 70 ಕೋಟಿ ಖರ್ಚು ಮಾಡಿದ್ದಾರಾ ಎಂದು ಪ್ರಮಾಣ ಮಾಡಲಿ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಸವಾಲು ಹಾಕಿದ್ದಾರೆ.

ರಾಜ್ಯದಲ್ಲಿ ಸಮಗ್ರ ಚುನಾವಣೆ ವ್ಯವಸ್ಥೆ ಬದಲಾಗಬೇಕೆಂದು ಆಗ್ರಹಿಸಿ ರಾಮನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಇಂದು ಅವರು ಪ್ರತಿಭಟನೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚುನಾವಣಾ ಆಯೋಗದ ನಿಯಮಗಳ ವಿರುದ್ಧ ಕಿಡಿಕಾರಿದರು.

ಈ ಬಾರಿ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಪ್ರತಿ ಅಭ್ಯರ್ಥಿಗಳು 50 ಕೋಟಿಯಷ್ಟು ಹಣವನ್ನ ಚುನಾವಣೆಗಾಗಿ ಖರ್ಚು ಮಾಡಿದ್ದಾರೆ. ಅಂದರೆ ಒಟ್ಟಾರೆ ರಾಜ್ಯದಲ್ಲಿ 4500 ಕೋಟಿಗೂ ಅಧಿಕ ಹಣ ಚುನಾವಣೆಗೆ ಖರ್ಚಾಗಿದೆ ಎಂದು ಆರೋಪಿಸಿದರು.

ಚುನಾವಣೆ ವೇಳೆ ಅನೇಕರು ದೇವಾಲಯಕ್ಕೆ ಹೋಗಿ ಪೂಜೆ ಪುನಸ್ಕಾರ ಮಾಡಿಸಿದ್ದಾರೆ. ಹರಕೆ ಹೊತ್ತು ತಾವೇ ಗೆಲ್ತೇವೆ ಎಂದು ಹೇಳಿದ್ದಾರೆ. ಹಾಗಾದರೆ ಅವರು ಚುನಾವಣೆಗೆ 70 ಲಕ್ಷ ಖರ್ಚು ಮಾಡಿದ್ದಾರಾ ಇಲ್ಲಾ 70 ಕೋಟಿ ಖರ್ಚು ಮಾಡಿದ್ದಾರಾ ಎಂಬುದನ್ನ ಅವರ ಮನೆಯ ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ಸವಾಲು ಎಸೆದರು.

ಅಭ್ಯರ್ಥಿಗಳಿಗೆ ಚುನಾವಣೆ ಆಯೋಗ 70 ಲಕ್ಷ ಖರ್ಚು ಹಾಗೂ 25 ಸಾವಿರ ಠೇವಣಿ ಮಾಡಲು ಸೂಚಿಸಿರುವುದು ಸರಿಯಲ್ಲ. ಹೀಗೆ ಮಾಡಿದರೆ ಹಣವಿದ್ದವರು ರಾಜಕೀಯ ಮಾಡುತ್ತಾರೆ. ಸಾಮಾನ್ಯ ಜನರು ಎಲ್ಲಿಂದ ಹಣ ತಂದು ಚುನಾವಣೆ ಎದುರಿಸ್ತಾರೆ ಎಂದು ಪ್ರಶ್ನಿಸಿದರು. ಹಾಗೆಯೇ ಮತ ಚೀಟಿಯನ್ನ ಸರ್ಕಾರವೇ ಮನೆಗಳಿಗೆ ಹಂಚಬೇಕು, ಕಡ್ಡಾಯ ಮತದಾನ ಪದ್ದತಿ ಜಾರಿಯಾಗಬೇಕು. ಅಲ್ಲದೇ ಮತದಾನದ ಅವಧಿ ಹೆಚ್ಚಾಗಬೇಕು ಎಂದು ಅವರು ಆಗ್ರಹಿಸಿದರು.

Click to comment

Leave a Reply

Your email address will not be published. Required fields are marked *