ಮುಂಬೈ: ಬಾಲಿವುಡ್ ಬಬ್ಲಿ ಗರ್ಲ್ ಆಲಿಯಾ ಭಟ್ ತಮ್ಮ ಡ್ರೈವರ್ ಹಾಗು ಸಹಾಯಕನ ಕನಸನ್ನು ನನಸಾಗಿಸಲು ಬರೋಬ್ಬರಿ 1 ಕೋಟಿ ರೂ. ಖರ್ಚು ಮಾಡಿದ್ದಾರೆ.
ಎಲ್ಲರು ಸ್ವಂತ ಮನೆ ಹೊಂದಬೇಕು ಎಂಬ ಕನಸನ್ನು ಹೊಂದಿರುತ್ತಾರೆ. ಹಾಗೆಯೇ ಆಲಿಯಾರ ಡ್ರೈವರ್ ಹಾಗೂ ಸಹಾಯಕ ತಮಗೊಂದು ಗೂಡು ನಿರ್ಮಿಸಿಕೊಳ್ಳಲು ತವಕಿಸುತ್ತಿದ್ದರು. ತನ್ನ ಕೆಲಸಗಾರರ ಮನದಾಳವನ್ನು ಅರಿತ ಆಲಿಯಾ ಭಟ್, ತಮ್ಮ ಹುಟ್ಟುಹಬ್ಬದ ದಿನ ಮಾರ್ಚ್ 15ರಂದು ಇಬ್ಬರಿಗೂ ತಲಾ 50 ಲಕ್ಷದ ಚೆಕ್ ನೀಡಿದ್ದಾರೆ.
ಈ ಇಬ್ಬರು ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದಿಂದ ಆಲಿಯಾ ಬಳಿ ಕೆಲಸ ಮಾಡಿಕೊಂಡಿದ್ದು, ಭಟ್ ಕುಟುಂಬಕ್ಕೆ ಹತ್ತಿರವಾಗಿದ್ದಾರೆ. ಇತ್ತ ಆಲಿಯಾರಿಂದ ಚೆಕ್ ಪಡೆದು ಇಬ್ಬರು ಮುಂಬೈನಲ್ಲಿ ಒಂದು ಬಿಹೆಚ್‍ಕೆ ಫ್ಲ್ಯಾಟ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಆಲಿಯಾ ಭಟ್ ನಟನೆಯ ಎಲ್ಲ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದು, ತಮ್ಮ ನಟನೆ ಹಾಗು ಬಬ್ಲಿ ಮಾತುಗಳಿಂದ ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಆಲಿಯಾ ನಟನೆಯ ‘ಗಲ್ಲಿ ಬಾಯ್’ ಚಿತ್ರ ಕಮಾಲ್ ಮಾಡಿತ್ತು. ಕರಣ್ ಜೋಹರ್ ನಿರ್ಮಾಣದ ‘ಕಳಂಕ್’ ಚಿತ್ರದಲ್ಲಿ ಆಲಿಯಾ ನಟಿಸಿದ್ದು, ಟ್ರೇಲರ್ ಹಾಗು ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊಸದಾದ ಕ್ರೇಜ್ ಹುಟ್ಟುಹಾಕಿವೆ.