ಬೆಂಗಳೂರು: ಮಂಡ್ಯದಲ್ಲಿ ಹಣದ ಜೊತೆಗೆ ಮದ್ಯದ ಹೊಳೆಯೂ ಹರಿದಿದೆ ಎನ್ನುವ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಮಂಡ್ಯ ಚುನಾವಣಾ ರಣಕಣದಲ್ಲಿ ಮೊದಲಲ್ಲ, ಮದ್ಯ ಪ್ರಿಯರ ಲಿಸ್ಟ್ ನಲ್ಲೂ ಮೊದಲಂತೆ. ಬಾಡೂಟ, ಬಾಟಲ್‍ನ ಸರ್ಕ್ಯೂಲೇಷನ್ ಲೀಡ್ ಲಿಸ್ಟ್ ನಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಇದೆ. ದಶಕದಲ್ಲಿಯೇ ಮೊದಲ ಬಾರಿಗೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮದ್ಯ ಮಾರಾಟ ಆಗಿದೆ ಎನ್ನಲಾಗಿದೆ.
ಹಣದ ಹೊಳೆಯ ನಡುವೆ ಅಭ್ಯರ್ಥಿಗಳು ಮದ್ಯದ ಹೊಳೆಯನ್ನು ಹರಿಸಿದ್ದಾರೆ. ಈ ಮೂಲಕ 14 ವರ್ಷದ ದಾಖಲೆಯನ್ನು ಚಿಂದಿ ಉಡಾಯಿಸಿದೆ. ಅಭ್ಯರ್ಥಿಗಳು ಬೆಂಬಲಿಗರಿಗೆ ತಲಾ 300 ರೂ. ಬಿರಿಯಾನಿ ಊಟ, ಡ್ರಿಂಕ್ಸ್ ನ ಟ್ರೆಟ್ರಾ ಪ್ಯಾಕ್‍ನ ಪರಿಣಾಮವಾಗಿ 46.35 ಲಕ್ಷ ಲೀಟರ್ ಎಣ್ಣೆ ಮಾರಾಟ ಆಗಿದೆ. ಅದರಲ್ಲಿ 180 ಎಂಎಲ್ ಇರುವ ಟ್ರೆಟ್ರಾ ಪ್ಯಾಕ್‍ಗಳೇ ಹೆಚ್ಚು ಮಾರಾಟ ಆಗಿದೆ ಎಂಬುದಾಗಿ ತಿಳಿದುಬಂದಿದೆ.
2019 ಫೆಬ್ರವರಿಯಂದು 44.61 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ. ಮಾರ್ಚ್ 2019ರಲ್ಲಿ 44.11 ಲಕ್ಷ ಲೀಟರ್ ಸೇಲ್ ಆಗಿದ್ದು, 2019 ಏಪ್ರಿಲ್‍ನಲ್ಲಿ 46.36 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಅಂದರೆ ಏಪ್ರಿಲ್ ತಿಂಗಳಲ್ಲಿ ಸುಮಾರು 34 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.