ದಾವಣಗೆರೆ: ರಾಜ್ಯಾದ್ಯಂತ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ನಿನ್ನೆಯಿಂದ ಮದ್ಯದಂಗಡಿಗಳು ಓಪನ್ ಆಗಿವೆ. ಆದರೆ ಗ್ರೀನ್ ಝೋನ್ ದಾವಣಗೆರೆಯಲ್ಲಿ ಮಾತ್ರ ಇನ್ನೂ 14 ದಿನ ಎಣ್ಣೆಗೆ ನಿಷೇಧ ಹೇರಲಾಗಿದೆ.
ಹೌದು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ದಾವಣಗೆರೆ ಮುಕ್ಕಾಲು ಪ್ರಮಾಣದಷ್ಟು ಓಪನ್ ಆಗಬೇಕಿತ್ತು. ಮೊದಲು 2 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅಷ್ಟೇ ಬೇಗ ಗುಣಮುಖರಾಗಿದ್ರು. ಅತ್ಯಂತ ಯಶಸ್ವಿಯಾಗಿ ಕೊರೊನಾ ನಿಭಾಯಿಸಿದ ಕೀರ್ತಿ ದಾವಣಗೆರೆ ಪಡೆದಿತ್ತು. ಆದರೆ ಆ ಎಲ್ಲಾ ಹೆಗ್ಗಳಿಕೆಯನ್ನು ಈಗಿನ 2 ಪ್ರಕರಣಗಳು ಹುಸಿ ಮಾಡಿಬಿಟ್ಟವು. ಒಂದೇ ದಿನ ಬರೋಬ್ಬರಿ 21 ಪ್ರಕರಣಗಳು ಪತ್ತೆಯಾಗಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿವೆ.
Advertisement
Advertisement
ರೋಗಿ ನಂ 533 ಮತ್ತು 556ರ ಟ್ರಾವೆಲ್ ಹಿಸ್ಟರಿ ನಿಖರವಾಗಿ ಇದುವರೆಗೂ ಪತ್ತೆಯಾಗಿಲ್ಲ. ಈಗಾಗಲೇ ಕೊರೊನಾಗೆ ದಾವಣಗೆರೆ ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಈವರೆಗೆ 28 ಪ್ರಕರಣಗಳು ಸಕ್ರಿಯವಾಗಿದ್ದು, 293 ಮಂದಿಯ ಸ್ಯಾಂಪಲ್ಸ್ ನ್ನು ಟೆಸ್ಟ್ ಗೆ ಕಳುಹಿಸಲಾಗಿದೆ. ಕೇಸ್ ನಂಬರ್ 533 ವೃತ್ತಿಯಲ್ಲಿ ನರ್ಸ್ ಆಗಿದ್ದು, ಬರೋಬ್ಬರಿ 56 ಮನೆಗೆ ತೆರಳಿ ಸರ್ವೆ ಮಾಡಿದ್ದರು ಎನ್ನಲಾಗುತ್ತಿದೆ. ನರ್ಸ್ ದ್ವಿತೀಯ ಸಂಪರ್ಕಿತರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ.
Advertisement
Advertisement
ಈ ಮಧ್ಯೆ ಇನ್ನೊಂದು ಪ್ರಕರಣ ತಲೆನೋವು ತಂದಿಟ್ಟಿದೆ. ದಾವಣಗೆರೆ ನಗರದ ಬೇತೂರಿನ ನಿವಾಸಿ ರೋಗಿ ನಂಬರ್ 623, 38 ವರ್ಷ ವ್ಯಕ್ತಿ ಬೇರೆ ಕಡೆಗೆ ಹೋಗಿ ಈರುಳ್ಳಿ ಮಾರಾಟ ಮಾಡಿದ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈರುಳ್ಳಿ ಖರೀದಿಗೆ ಬಾಗಲಕೋಟೆ, ಬಿಜಾಪುರಕ್ಕೂ ಹೋಗಿದ್ದರು ಎನ್ನಲಾಗಿದೆ.
ದಾವಣಗೆರೆಯಲ್ಲಿ ಸೋಂಕು ಹೆಚ್ಚಾದ್ದರಿಂದ ಎಲ್ಲಾ ವಿನಾಯ್ತಿಗಳನ್ನು ತಡೆಹಿಡಿಯಲಾಗಿದೆ. ನಗರದಾದ್ಯಂತ ಲಾಕ್‍ಡೌನ್ ಮುಂದುವರಿಸಿದ್ದು, ವ್ಯಾಪಾರಿಗಳು ಇಂದಿನಿಂದ ಕೃಷಿ ಮಾರುಕಟ್ಟೆ ಬಂದ್ ಮಾಡಲಿದ್ದಾರೆ. 14 ದಿನ ನಗರ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ.