ವಿಜಯಪುರ: ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿದ ಘಟನೆ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಲೂಟಗೆರಿ ಗ್ರಾಮದ ಬಳಿ ನಡೆದಿದೆ.
ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ನೀರು ಬಿಡಲಾಗಿದೆ. ಹೀಗಾಗಿ ಕಾಲುವೆ ಮೈದುಂಬಿ ಹರಿಯುತ್ತಿದ್ದು, ಮಂಗಳವಾರ ಮಧ್ಯಾಹ್ನ ಲೂಟಗೆರಿ ಸಮೀಪದಲ್ಲಿ ಕಾಲುವೆಯ ಒಂದು ಬದಿಯ ದಂಡೆ ಒಡೆದಿದೆ. ಹೀಗಾಗಿ ನೂರಾರು ರೈತರಿಗೆ ಸೇರಿದ್ದ ಸುಮಾರು 300 ಎಕರೆ ಜಮೀನಿಗೆ ನೀರು ನುಗ್ಗಿದ್ದು ತೊಗರಿ, ಹೆಸರು ಕಾಳು, ಈರುಳ್ಳಿ ಬೆಳೆಗಳು ಸಂಪೂರ್ಣ ನಾಶವಾಗಿವೆ.
Advertisement
Advertisement
ನೀರು ಬಿಡುವ ಮೊದಲೇ ಕಾಲುವೆ ಬಿರುಕು ಬಿಟ್ಟಿತ್ತು. ನೀರಿನ ರಭಸಕ್ಕೆ ಕೊರೆತ ಉಂಟಾಗಿ, ಕಾಲುವೆ ಒಡೆದಿದೆ. ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿ ಬೆಳೆ ನಾಶವಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ. ನೀರಾವರಿ ಅಧಿಕಾರಿಗಳಿಗೆ ಕಾಲುವೆ ಒಡೆದಿರುವ ಮಾಹಿತಿ ತಿಳಿಯುತ್ತಿದ್ದಂತೆ ನೀರಿನ ಹರಿವಿನ ಮಟ್ಟವನ್ನು ಕಡಿಮೆ ಮಾಡಿದ್ದಾರೆ.
Advertisement
ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಗೆ ಸೂಕ್ತ ಕಾರಣ ನೀಡುವಂತೆ ನೀರಾವರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಹಾನಿಗೆ ಒಳಗಾದ ರೈತರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದರು.