ಬೆಂಗಳೂರು: ತಾಂತ್ರಿಕ ಕಾರಣದಿಂದ ಎಡವಟ್ಟು ಆಗಿದೆ ಎಂದು ನಿರೂಪಕ ಅಕುಲ್ ಬಾಲಾಜಿ ಪಬ್ಲಿಕ್ ಟಿವಿ ಮೂಲಕ ರಾಜ್ಯದ ಜನತೆ ಬಳಿ ಕ್ಷಮೆ ಕೇಳಿದರು.
ಅಪ್ಪುಗೆ ‘ಏಕ್ ಲವ್ ಯಾ’ ಚಿತ್ರತಂಡ ಅಪಮಾನ ಮಾಡಿದೆ ಎಂಬ ಆರೋಪ ಸಂಬಂಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅಕುಲ್ ಬಾಲಾಜಿ, ಇದನ್ನು ನಾವು ಬೇಕು ಎಂದು ಮಾಡಿಲ್ಲ. ತಾಂತ್ರಿಕ ಕಾರಣದಿಂದ ಸಣ್ಣ ಎಡವಟ್ಟು ಆಗಿದೆ. ಇದಕ್ಕೆ ರಾಜ್ಯದ ಜನತೆಗೆ ತಂಡದ ಪರವಾಗಿ ನಾನು ಕ್ಷಮೆಯನ್ನು ಕೇಳುತ್ತೇನೆ ಎಂದು ತಿಳಿಸಿದರು.
ಯಾರು ಸಹ ಉದ್ದೇಶಪೂರ್ವಕವಾಗಿ ಮಾಡುವುದಿಲ್ಲ. ಅದು ಅಲ್ಲದೇ ಅಪ್ಪುವನ್ನು ಕಳೆದುಕೊಂಡು 15 ದಿನಗಳಾಗಿರುವ ಈ ಸಮಯದಲ್ಲಿ ಯಾರು ಈ ರೀತಿ ಮಾಡುವುದಿಲ್ಲ. ಆದರೆ ತಾಂತ್ರಿಕ ಕಾರಣದಿಂದ ಈ ಸಮಸ್ಯೆ ಸಂಭವಿಸಿದೆ. ಅಪ್ಪುವಿಗೆ ಶ್ರದ್ಧಾಂಜಲಿ ಅರ್ಪಿಸಿ ನಂತರ ನಾವು ಕಾರ್ಯಕ್ರಮವನ್ನು ಮಾಡಿದ್ದೇನೆ. ಎಲ್ಲರಿಗೂ ಈ ವಿಚಾರ ನೋವಾಗಿದೆ. ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ನಾವು ಮುಂದೆ ಹೋಗುತ್ತೇವೆ ಎಂದು ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೆವು ಎಂದು ತಿಳಿಸಿದರು. ಇದನ್ನೂ ಓದಿ: ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ: ಪ್ರೇಮ್ ಕ್ಷಮೆ
ರಕ್ಷಿತಾ ಅವರು ಶ್ಯಾಂಪೇನ್ ಓಪನ್ ಮಾಡುವಾಗ ಸಾಂಗ್ ಬರಬೇಕಿತ್ತು. ಆದರೆ ಸಾಂಗ್ ಗೂ ಮೊದಲು ಪ್ರೇಮ್ ಅವರು ಅಪ್ಪು ಬಗ್ಗೆ ಅದ್ಭುತವಾಗಿ ಹೇಳಿದಂತಹ ಮಾತುಗಳು ಬರುತ್ತೆ ಎಂದು ತಿಳಿದುಕೊಂಡಿರಲಿಲ್ಲ. ಅದಕ್ಕೆ ಶ್ಯಾಂಪೇನ್ ಓಪನ್ ಮಾಡಿದ್ದು ಹೊಂದಾಣಿಕೆಯಾಗಿಲ್ಲ ಎಂದು ತಿಳಿಸಿದರು.
ಸಣ್ಣ ಪುಟ್ಟ ದೋಷಗಳು ಇರುತ್ತೆ!
ನಾನು ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಹೋಗಿದ್ದೆ. ಇದು ಪೂರ್ತಿ ತಂಡ ನಿರ್ಧರಿಸಿದೆ. ಇದು ಲೈವ್ ಆಗಿದ್ದರಿಂದ ನಮ್ಮ ಕೈಯಲ್ಲಿ ಏನೂ ಇರಲಿಲ್ಲ. ನಾವು ರೆಕಾರ್ಡ್ ಶೋ ಆಗಿದ್ದರೆ ಏನಾದರೂ ಮಾಡಬಹುದಿತ್ತು. ಎಲ್ಲ ಕಾರ್ಯಕ್ರಮದಲ್ಲಿಯೂ ಸಣ್ಣ ಪುಟ್ಟ ದೋಷಗಳು ಇರುತ್ತೆ. ರೆಕಾರ್ಡ್ ಆಗಿದ್ದರೆ ಎಡಿಟಿಂಗ್ ಸಮಯದಲ್ಲಿ ಬದಲಾವಣೆ ಮಾಡುತ್ತಾರೆ. ಆದರೆ ಇದು ಲೈವ್ ಆಗಿದ್ದರಿಂದ ಆ ರೀತಿ ಮಾಡಲು ಸಾಧ್ಯವಾಗಲಿಲ್ಲ. ಇದು ತಾಂತ್ರಿಕ ಕಾರಣದಿಂದ ಆಗಿರುವ ತಪ್ಪಾಗಿದೆ ಎಂದು ತಿಳಿಸಿದರು.
ಒಳ್ಳೆಯ ಗೆಳೆಯ
ಯಾರಿಗೂ ಅಪ್ಪು ಅವರನ್ನು ಮರೆಯುವುದಕ್ಕೆ ಆಗುವುದಿಲ್ಲ. ಅವರು ನನ್ನ ಒಳ್ಳೆಯ ಗೆಳೆಯ ಸಹ ಆಗಿದ್ದರು. ಏನೇ ಆದರೂ ಕೆಲಸ ಮಾಡಬೇಕು, ಮುಂದೆ ಹೋಗಬೇಕು ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಆ ಒಂದು ಮಾತನ್ನು ತೆಗೆದುಕೊಂಡು ನಾವು ಮುಂದೆ ಹೋದೆವು ಎಂದು ನೆನೆದರು.
ಚಿಯರ್ಸ್ ಮಾಡಿದ ತಕ್ಷಣ ಸಾಂಗ್ ಬರುತ್ತೆ ಎಂದುಕೊಂಡಿದ್ದೆವು. ಆದರೆ ಬೇರೆ ಬಂದಿದ್ದರಿಂದ ಅದು ಮ್ಯಾಚ್ ಆಗಿಲ್ಲ. ನಾವು ಯಾರು ಬೇಕು ಎಂದು ಈ ರೀತಿ ಮಾಡಿಲ್ಲ. ನಾವು ಅಪ್ಪುಗೆ ತುಂಬಾ ಹತ್ತಿರದವರು. ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದೇವೆ. ಈ ರೀತಿ ಆಗಬಾರದು ಎಂದು ನಾವು ತಿಳಿದುಕೊಳ್ಳುತ್ತೇವೆ ಆದರೆ ಆಗಿದೆ. ಅದಕ್ಕೆ ನಾವು ಕ್ಷಮೆ ಕೇಳುತ್ತೇನೆ ಎಂದರು. ಇದನ್ನೂ ಓದಿ: ಅಪ್ಪು ಭಾವಚಿತ್ರಕ್ಕೆ ಮುತ್ತಿಟ್ಟು ಅಜ್ಜಿ ಭಾವುಕ – ವೀಡಿಯೋ ವೈರಲ್
‘ಏಕ್ ಲವ್ ಯಾ’ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಶ್ಯಾಂಪೇನ್ ಬಾಟಲ್ ಓಪನ್ ಮಾಡಬೇಕಾದಾಗ ಪುನೀತ್ ಅವರ ಫೋಟೋ ಬ್ಯಾಗ್ರೌಂಡ್ ನಲ್ಲಿ ಬಂದಿದ್ದು, ಈ ಹಿನ್ನೆಲೆ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇದು ಶ್ರದ್ಧಾಂಜಲಿ ಕಾರ್ಯಕ್ರಮನಾ ಅಥವಾ ಪಾರ್ಟಿನಾ ಎಂದು ವಿರೋಧವನ್ನು ವ್ಯಕ್ತಪಡಿಸಿ ಸಿನಿಮಾ ತಂಡದವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಗಿತ್ತು. ಈ ಹಿನ್ನೆಲೆ ತಂಡ ಕ್ಷಮೆಯನ್ನು ಕೇಳುತ್ತಿದ್ದು, ಇದು ಬೇಕೆಂದು ಮಾಡಿಲ್ಲ ಎಂದು ಹೇಳುತ್ತಿದ್ದಾರೆ.