ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ನಟನೆಯ ಸೆಲ್ಫೀ ಸಿನಿಮಾ ಎರಡು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿದೆ. ಅಂದುಕೊಂಡಷ್ಟು ಈ ಸಿನಿಮಾ ಯಶಸ್ಸು ಕಾಣಲಿಲ್ಲ. ಬಾಕ್ಸ್ ಆಫೀಸಿನಲ್ಲಿ ಚಿತ್ರ ಮಕಾಡೆ ಮಲಗಿದೆ. ಈ ಸೋಲಿನ ಹೊಣೆಯನ್ನು ಅಕ್ಷಯ್ ಕುಮಾರ್ ಒಪ್ಪಿಕೊಂಡಿದ್ದಾರೆ. ಇಡೀ ಸೋಲನ್ನು ನಾನೊಬ್ಬನೇ ಹೊತ್ತುಕೊಳ್ಳುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಸೋಲು ನನಗೇನೂ ಹೊಸದಲ್ಲ ಎಂದು ಅವರು ಆಡಿದ್ದಾರೆ.
ನನ್ನ ಸಿನಿಮಾಗಳ ಗೆಲುವು ಎಷ್ಟಿದೆಯೋ, ಸೋಲು ಅಷ್ಟೇ ಇದೆ. ಸತತವಾಗಿ ನನ್ನ ಸಿನಿಮಾಗಳು ಸೋತಿವೆ. ಮತ್ತೆ ಗೆದ್ದಿದ್ದೇನೆ. ಹಾಗಾಗಿ ಸೋಲು ನನಗೆ ಹೊಸದಲ್ಲ. ಇದರಿಂದ ಪಾಠ ಕಲಿತುಕೊಳ್ಳುತ್ತಲೇ ಬಂದಿದ್ದೇನೆ. ಈಗಲೂ ಕಲಿಯುತ್ತೇನೆ. ಇದೊಂದು ಎಚ್ಚರಿಕೆಯ ಪಾಠವಾಗಿ ನಾನು ತಗೆದುಕೊಳ್ಳುತ್ತೇನೆ. ಈ ಸಿನಿಮಾವನ್ನು ಪ್ರೇಕ್ಷಕರು ನೋಡಲಿಲ್ಲ ಎಂದು ಅವರನ್ನು ದೂಷಿಸುವುದು ತಪ್ಪು ಎಂದಿದ್ದಾರೆ ಅಕ್ಷಯ್.
ನಿನ್ನೆಯಷ್ಟೇ ಸೆಲ್ಫಿ ಸೋಲಿನ ಬಗ್ಗೆ ಕಂಗನಾ ಟೀಕೆ ಮಾಡಿದ್ದರು. ಈ ಸಿನಿಮಾದ ಮೊದಲ ದಿನದ ಗಳಿಕೆ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಈ ಸಿನಿಮಾ ಈ ಪ್ರಮಾಣದಲ್ಲಿ ಹೀನಾಯವಾಗಿ ಸೋಲ್ತಿದೆಯಾ ಎಂದು ಅನುಮಾನ ಬರುವಂತೆ ಹಣದ ಲೆಕ್ಕವನ್ನು ಕಂಗನಾ ಹಾಕಿದ್ದರು. ಕಂಗನಾ ಲೆಕ್ಕಾ ಹಾಕುವುದಕ್ಕೂ ಅಕ್ಷಯ್ ಸೋಲನ್ನು ಒಪ್ಪಿಕೊಂಡಿದ್ದಕ್ಕೂ ಒಂದು ರೀತಿ ಕಾಕತಾಳೀಯವಾದರೂ, ಕಂಗನಾ ಗೆದ್ದು ಬೀಗುತ್ತಿರುವುದು ಸುಳ್ಳಲ್ಲ.
ಬಾಲಿವುಡ್ ಸಿನಿ ಪಂಡಿತರ ಲೆಕ್ಕಾಚಾರದಂತೆ ಸೆಲ್ಫೀ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಮೂರು ಕೋಟಿ ಎಂದು ಅಂದಾಜಿಸಲಾಗಿದೆ. ಅಕ್ಷಯ್ ವೃತ್ತಿ ಜೀವನದಲ್ಲಿ ಅತ್ಯಂತ ಕಡಿಮೆ ಹಣ ಗಳಿಸಿದ ಸಿನಿಮಾ ಎನ್ನುವ ಅಪಕೀರ್ತಿಗೂ ಕಾರಣವಾಗಿದೆ. ಈ ನಡುವೆ ಉರಿವ ಬೆಂಕಿಗೆ ತುಪ್ಪ ಹಾಕುವಂತೆ ಕಂಗನಾ ತಮ್ಮದೇ ಆದ ಲೆಕ್ಕಾಚಾರವನ್ನು ಕೊಟ್ಟಿದ್ದಾರೆ. ಈ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ ಹತ್ತು ಲಕ್ಷ ರೂಪಾಯಿ ಮಾತ್ರ ಎಂದು ಬರೆದುಕೊಂಡಿದ್ದಾರೆ.
ಕಂಗನಾ ನಟನೆಯ ‘ಧಾಕಡ್’ ಸಿನಿಮಾ ರಿಲೀಸ್ ಆದಾಗ ಬಾಲಿವುಡ್ ನ ಅನೇಕರು ಚಿತ್ರವನ್ನು ಸೋಲಿಸಲು ನಾನಾ ರೀತಿಯಲ್ಲಿ ಪ್ರಯತ್ನಪಟ್ಟರಂತೆ. ಮೊದಲ ದಿನದ ಕಲೆಕ್ಷನ್ ಬಗ್ಗೆ ಮಾತನಾಡಿದರಂತೆ. ಮೊದಲ ದಿನವೇ ಸಿನಿಮಾ ಸೋತಿದೆ ಎಂದು ಅಪಪ್ರಚಾರ ಮಾಡಿದರಂತೆ. ಆದರೆ, ಸೆಲ್ಫೀ ಬಗ್ಗೆ ಯಾರೂ, ಏಕೆ ಮಾತನಾಡುತ್ತಿಲ್ಲ ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ. ತಮಗೆ ಅಪಹಾಸ್ಯ ಮಾಡಿದಂತೆ ಸೆಲ್ಫೀ ತಂಡಕ್ಕೆ ಯಾರೂ ಏಕೆ ಅಪಹಾಸ್ಯ ಮಾಡುತ್ತಿಲ್ಲ ಎಂದು ಕೇಳಿದ್ದಾರೆ.