ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಲ್ಲೇಗ ಟೈಗರ್ಸ್ ಟೀಂನ (Kallega Tigers Team) ಅಕ್ಷಯ್ ಕಲ್ಲೇಗ (Akshay Kallega) ಅವರನ್ನು ದುಷ್ಕರ್ಮಿಗಳು ಮನಸ್ಸೋ ಇಚ್ಛೆ 58 ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿರುವುದು ಬಯಲಾಗಿದೆ.
ಪ್ರಕರಣ ಸಂಬಂಧ ಇದೀಗ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಚೇತನ್, ಮನೀಶ್, ಮಂಜ ಹಾಗೂ ಕೇಶವ ಎಂದು ಗುರುತಿಸಲಾಗಿದೆ. ಗಾಂಜಾ ಮತ್ತಿನಲ್ಲಿ ಅಕ್ಷಯ್ ಮೇಲೆ ಮಚ್ಚು ಬೀಸಿರೋ ಶಂಕೆ ವ್ಯಕ್ತವಾಗುತ್ತಿದೆ. 58 ಬಾರಿ ತಲವಾರಿನಿಂದ ಹಲ್ಲೆ ಮಾಡಿರುವುದು ಮರಣೋತ್ತರ ಪರೀಕ್ಷೆ ವೇಳೆ ಬೆಳಕಿಗೆ ಬಂದಿದೆ. ಅಕ್ಷಯ್ ದೇಹದ ಮೇಲಿನ ಗಾಯ ಕಂಡು ವೈದ್ಯರೇ ಶಾಕ್ ಆಗಿದ್ದಾರೆ. ಹಂತಕರು ಮನಸೋ ಇಚ್ಛೆ ಅಕ್ಷಯ್ ಮೇಲೆ ತಲವಾರು ಬೀಸಿದ್ದಾರೆ.
Advertisement
Advertisement
ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಪುತ್ತೂರಿನ ನೆಹರುನಗರದ ಅಕ್ಷಯ್ ಮನೆಗೆ ಮೃತದೇಹ ಆಗಮಿಸುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು. ಇದನ್ನೂ ಓದಿ: ಪುತ್ತೂರು ಜಂಕ್ಷನ್ನಲ್ಲಿ ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ – ಆರೋಪಿಗಳು ಪೊಲೀಸರಿಗೆ ಶರಣು
Advertisement
Advertisement
ಪುತ್ತೂರು ಶಾಸಕ ಅಶೋಕ್ ರೈ ಸಹಿತ ಹಲವರು ಅಂತಿಮ ದರ್ಶನ ಪಡೆದರು. ಈ ನಡುವೆ ಅಕ್ಷಯ್ ಸ್ನೇಹಿತರು ದಾರಿ ಮಧ್ಯೆ ಕೂಡ ಶವಯಾತ್ರೆಗೆ ಸಿದ್ದತೆ ನಡೆಸಿದ್ದರು. ಪುತ್ತೂರಿನ ಕಬಕ ವೃತ್ತದಿಂದ ನಗರದ ಶೇವಿರೆಯಲ್ಲಿರುವ ಮನೆವರೆಗೆ ಶವಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಶವಯಾತ್ರೆಗೆ ಪೊಲೀಸರು ಅನುಮತಿ ನೀಡಿಲ್ಲ. ಹೀಗಾಗಿ ಪೊಲೀಸ್ ಹಾಗೂ ಅಕ್ಷಯ್ ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಮನವೊಲಿಕೆ ಬಳಿಕ ಯುವಕರ ಗುಂಪು ಚದುರಿದ್ದು, ಮೃತದೇಹವನ್ನು ಆಸ್ಪತ್ರೆಯಿಂದ ನೇರವಾಗಿ ಮನೆಗೆ ರವಾನಿಸಲಾಯಿತು.
ಹತ್ಯೆ ಯಾಕೆ?: ಪುತ್ತೂರಿನ ನೆಹರು ನಗರದಲ್ಲಿ ನಡೆದ ಅಪಘಾತ ವಿಚಾರದಲ್ಲಿ ಆರೋಪಿಗಳು ಹಾಗೂ ಅಕ್ಷಯ್ ನಡುವೆ ಗಲಾಟೆ ನಡೆದಿತ್ತು. ದೂರುದಾರ ವಿಖ್ಯಾತ್ ಹಾಗೂ ಆರೋಪಿ ಚೇತನ್ ಚಲಾಯಿಸುತ್ತಿದ್ದ ಬಸ್ಸಿನ ನಡುವೆ ಅಪಘಾತ ನಡೆದಿತ್ತು. ಈ ವಿಚಾರದಲ್ಲಿ ಅಕ್ಷಯ್ ಹಾಗೂ ಆರೋಪಿಗಳಾದ ಮನೀಶ್, ಚೇತನ್ ಜೊತೆ ಫೋನ್ ಮೂಲಕ ನಡೆದಿದ್ದ ಮಾತಿನ ಚಕಮಕಿ ನಡೆದಿತ್ತು.
ಚಕಮಕಿ ಬಳಿಕ ರಾತ್ರಿ ವೇಳೆ ಕಾರಿನಲ್ಲಿ ನೆಹರುನಗರಕ್ಕೆ ನಾಲ್ವರು ಆರೋಪಿಗಳು ಬಂದಿದ್ದರು. ಇತ್ತ ಅಕ್ಷಯ್ ಹಾಗೂ ವಿಖ್ಯಾತ್ ರಾತ್ರಿ ವೇಳೆ ನೆಹರುನಗರದ ಎಟಿಎಂ ಬಳಿ ನಿಂತಿದ್ದರು. ಈ ಸಂದರ್ಭ ಮತ್ತೆ ತಕರಾರು ತೆಗೆದು ಆರೋಪಿಗಳು ಜಗಳ ಆರಂಭಿಸಿದರು. ಜಗಳ ತಾರಕಕ್ಕೇರಿ ತಾವು ತಂದಿದ್ದ ಎರಡು ತಲಾವಾರು ಮೂಲಕ ಆರೋಪಿಗಳು, ಅಕ್ಷಯ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಅಕ್ಷಯ್ ಸ್ನೇಹಿತ ವಿಖ್ಯಾತ್ ಓಡಿ ತಪ್ಪಿಸಿಕೊಂಡಿದ್ದನು.
ಘಟನೆ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ (Puttur Police Station) ಪ್ರಕರಣ ದಾಖಲಾಗಿದ್ದು, ಆರೋಪಿಗಳಲ್ಲಿ ಕೆಲವರು ಪೊಲೀಸರಿಗೆ ಶರಣಾಗಿದ್ದಾರೆ.