ಹಿಂದೂ ಮಹಾಸಭಾದಲ್ಲಿ ಯಾರು ಅಸಲಿ, ಯಾರು ನಕಲಿ?

Public TV
2 Min Read
mangaluru hindu mahasabha galate

– ಮಂಗಳೂರಿನಲ್ಲಿ ಆರಂಭವಾಗಿದೆ ಹಿಂದೂ ನಾಯಕರ ಕಿತ್ತಾಟ

ಮಂಗಳೂರು: ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಘಟಕದಲ್ಲಿ ಬಣ ರಾಜಕೀಯ ಶುರುವಾಗಿದೆ. ನಮ್ಮದು ಅಸಲಿ ಸಂಘಟನೆ, ಅವರದ್ದು ನಕಲಿ ಸಂಘಟನೆ ಎಂದು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ನಾಯಕರೆನಿಸಿಕೊಂಡವರ ಈ ವರ್ತನೆಯಿಂದ ಹಿಂದೂ ಮಹಾಸಭಾದ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ.

mangaluru dakshina kannada barke police station 2

ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಸುದ್ದಿಗೋಷ್ಠಿ ನಡೆದಿತ್ತು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡ ಧರ್ಮೇಂದ್ರ ಎಂಬವರು ಸುದ್ದಿಗೋಷ್ಠಿಯಲ್ಲಿ ಮೈಸೂರಿನ ದೇವಸ್ಥಾನ ಧ್ವಂಸ ವಿಚಾರದ ಕುರಿತು ಮುಖ್ಯಮಂತ್ರಿಗೆ ಕೊಲೆ ಬೆದರಿಕೆಯ ಹೇಳಿಕೆಯನ್ನು ನೀಡಿದ್ದರು. ಆದರೆ ಈ ಸುದ್ದಿಗೋಷ್ಠಿ ಮಾಡಿದವರು ಹಿಂದೂ ಮಹಾಸಭಾದಿಂದ ಉಚ್ಛಾಟನೆಗೊಂಡವರು. ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿ, ಮುಖ್ಯಮಂತ್ರಿಗಳ ಮೇಲೆ ಕೊಲೆ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡಿರುವ ಲೋಹಿತ್ ಸುವರ್ಣ ದೂರು ನೀಡಿದ್ದರು. ಇದನ್ನೂ ಓದಿ: ಕರಂದ್ಲಾಜೆ ಕಾರು ಅಡ್ಡಗಟ್ಟಿ ಕಪ್ಪುಪಟ್ಟಿ ಪ್ರದರ್ಶನ

ಈ ದೂರಿನ ಮೇರೆಗೆ ಸಂಘಟನೆಯ ಎಂಟು ಮಂದಿ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿ, ನಾಲ್ವರ ಬಂಧನ ಮಾಡಲಾಗಿತ್ತು. ಆದರೆ ಇದೀಗ ಮತ್ತೊಬ್ಬ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡಿರುವ ರಾಜೇಶ್ ಪವಿತ್ರನ್ ಎಂಬವರು ಲೋಹಿತ್ ಸುವರ್ಣ ಅವರದ್ದು ನಕಲಿ ಸಂಘಟನೆ ಎಂದು ಆರೋಪಿಸಿದ್ದಾರೆ.

mangaluru dakshina kannada barke police station 1

ಲೋಹಿತ್ ಸುವರ್ಣ ನಾನೇ ರಾಜ್ಯಾಧಕ್ಷ ಅಂದ್ರೆ, ರಾಜೇಶ್ ಪವಿತ್ರನ್ ನಾನೇ ರಾಜ್ಯಾಧಕ್ಷ ಎಂದು ಹೇಳುತ್ತಿದ್ದಾರೆ. ಇವರು ಅವರನ್ನು, ಅವರು ಇವರನ್ನು ಉಚ್ಛಾಟನೆ ಮಾಡಿದ್ದೇವೆ ಎಂದು ಎರಡೂ ಬಣದ ಮುಖಂಡರು ಹೇಳುತ್ತಿದ್ದಾರೆ. ನಾಯಕರುಗಳು ಎಂದು ಕರೆಸಿಕೊಂಡಿರುವ ಇವರ ಹೇಳಿಕೆಗಳಿಂದ ಅಖಿಲ ಭಾರತ ಹಿಂದೂ ಮಹಾಸಭಾದ ಕಾರ್ಯಕರ್ತರು ಗೊಂದಲಕ್ಕೀಡಗಿದ್ದಾರೆ. ಇದನ್ನೂ ಓದಿ: ನಮ್ಮ ಅವಧಿಯಲ್ಲೇ ಮಹದಾಯಿ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಗುತ್ತೆ: ಬೊಮ್ಮಾಯಿ

ಈಗಾಗಲೇ ಬಂಧನವಾಗಿದ್ದ ನಾಲ್ಕು ಜನರು ಜಾಮೀನಿನ ಮೇಲೆ ಹೊರ ಬಂದಿದ್ದು, ಲೋಹಿತ್ ಸುವರ್ಣ ಬಣದ ಸಂಘಟನೆ ನಕಲಿ ಎಂದು ಆರೋಪಿಸಿದ್ದಾರೆ. ಆದರೆ ಲೋಹಿತ್ ಸುವರ್ಣ ನಾವು ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್‍ಗೂ ದೂರು ನೀಡಿದ್ದು, ನಮ್ಮ ಸಂಘಟನೆ ಹೆಸರು, ಪ್ರಧಾನ ಕಚೇರಿ ವಿಳಾಸ ಎಲ್ಲದರ ದುರುಪಯೋಗ ನಡೆದಿದೆ ಎಂದು ಹೇಳಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಘಟಕದಲ್ಲಿ ಬಣ ರಾಜಕೀಯ ಇದೆ ಎಂಬುದು ನಾಯಕರ ಆರೋಪ, ಪ್ರತ್ಯಾರೋಪದ ಮೂಲಕ ಬಹಿರಂಗವಾಗಿದೆ. ಮುಂದೆ ಈ ಆರೋಪ ಪ್ರತ್ಯಾರೋಪ ಎಲ್ಲಿಗೆ ಬಂದು ತಲುಪುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *