Connect with us

Latest

ಅಜಿತ್ ಪವಾರ್ ನಿರ್ಧಾರದೊಂದಿಗೆ ಎನ್‍ಸಿಪಿ ಇಲ್ಲ: ಶರದ್ ಪವಾರ್

Published

on

-ಸರ್ಕಾರ ರಚನೆ ಮಾಡೋರಿಗೆ ಕಾನೂನು ಗೊತ್ತಿರಬೇಕಿತ್ತು

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿರುವುದು ಅಜಿತ್ ಪವಾರ್ ಅವರ ವೈಯಕ್ತಿಕ ನಿರ್ಧಾರವೇ ಹೊರೆತು ಎನ್‍ಸಿಪಿದಲ್ಲ ಎಂದು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ, ಎನ್‍ಸಿಪಿ ಜೊತೆಗೂಡಿ ಸರ್ಕಾರ ರಚಿಸಲಿದೆ. ಇಂದು ದೇವೇಂದ್ರ ಫಡ್ನಾವಿಸ್ ಅವರು ಎರಡನೇ ಬಾರಿ ಸಿಎಂ ಆಗಿ ಪದಗ್ರಹಣ ಮಾಡಿದ್ದು, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶರದ್ ಪವಾರ್ ಅವರು, ಅಜಿತ್ ಪವಾರ್ ಅವರ ರಾಜಕೀಯ ನಿರ್ಧಾರವನ್ನು ಎನ್‍ಸಿಪಿ ಬೆಂಬಲಿಸುವುದಿಲ್ಲ. ಬಿಜೆಪಿಗೆ ಬೆಂಬಲಿಸುವುದು ಅಜಿತ್ ಪವಾರ್ ಅವರ ವೈಯಕ್ತಿಕ ನಿರ್ಧಾರ. ಇದು ಎನ್‍ಸಿಪಿ ಪಕ್ಷದ ನಿರ್ಧಾರವಲ್ಲ ಎಂದು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ಒಡೆದ ಕುಟುಂಬ, ಪಕ್ಷ- ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಲೆ

ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಇಂದು ಶಿವಸೇನೆ ಮತ್ತು ಎನ್‍ಸಿಪಿ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿದ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ನಾನು ಏನು ಆ್ಯಕ್ಷನ್ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಜಿತ್ ಪವಾರ್ ನಿರ್ಧಾರದೊಂದಿಗೆ ಎನ್‍ಸಿಪಿ ಇಲ್ಲ. ಸರ್ಕಾರ ರಚನೆ ಮಾಡಿದರವರಿಗೆ ಕಾನೂನುಗಳ ಬಗ್ಗೆ ಗೊತ್ತಿರಬೇಕಿತ್ತು. ಎನ್‍ಸಿಪಿಯಿಂದ ಆಯ್ಕೆಯಾದ ಶಾಸಕರು ಬಿಜೆಪಿಯೊಂದಿಗೆ ಸೇರುವ ಮೂಲಕ ಪಕ್ಷಾಂತರ ಕಾಯ್ದೆ ಉಲ್ಲಂಘಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಎನ್‍ಸಿಪಿ ಶಾಸಕ, ಅಜಿತ್ ಪವಾರ್ ಅವರ ಫೋನ್ ಬಂದಿದ್ದರಿಂದ ರಾಜಭವನಕ್ಕೆ ಹೋಗಿದ್ದೆ. ಒಂದು ಕ್ಷಣ ಅಲ್ಲಿ ಏನು ನಡೆದಿತ್ತು ಎಂಬುವುದು ನಮಗೆ ಗೊತ್ತಾಗಲಿಲ್ಲ. ನೋಡನೋಡುತ್ತಿದ್ದಂತೆ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ನಾವು ಶರದ್ ಪವಾರ್ ಅವರ ಜೊತೆಗಿದ್ದು, ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಲ್ಲ ಎಂದರು. ಇದನ್ನೂ ಓದಿ:ಮಹಾರಾಷ್ಟ್ರ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ

ಅಜಿತ್ ಪವಾರ್ ಮತ್ತು ಅವರಿಗೆ ಬೆಂಬಲ ಸೂಚಿಸಿರುವ ಶಾಸಕರ ಏನು ಕ್ರಮಕೈಗೊಳ್ಳಬೇಕು ಎಂಬುದನ್ನು ಪಕ್ಷದಲ್ಲಿ ನಿರ್ಧರಿಸಲಾಗುತ್ತದೆ. ಏಕಪಕ್ಷೀಯವಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾವು ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸರ್ಕಾರ ರಚಿಸಲು ಮುಂದಾಗಿದ್ದೆವು. ಆದರೆ ಅಜಿತ್ ಪವಾರ್ ನಡೆ ಬೇಸರ ತರಿಸಿದೆ. ಈ ರೀತಿ ಮೋಸ ನನ್ನೊಂದಿಗೆ ಆಗಿದ್ದು, ತಡೆದುಕೊಳ್ಳುವ ಶಕ್ತಿ ನನಗಿದೆ ಎಂದು ಅಜಿತ್ ಪವಾರ್ ಗೆ ತಿರುಗೇಟು ನೀಡಿದರು.

ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎನ್‍ಸಿಪಿಯ ಎಲ್ಲಾ ಶಾಸಕರ ಸಹಿ ಪಡೆದುಕೊಳ್ಳಲಾಗಿತ್ತು. ಶಾಸಕಾಂಗದ ನಾಯಕರಾಗಿದ್ದ ಅಜಿತ್ ಪವಾರ್ ಎಲ್ಲಾ ಶಾಸಕರ ಹಸ್ತಾಕ್ಷರವುಳ್ಳ ಪತ್ರಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ರಾತ್ರೋರಾತ್ರಿ ಶಾಸಕರಿಗೆ ಫೋನ್ ಮಾಡಿ ರಾಜಭವನಕ್ಕೆ ಬರುವಂತೆ ಸೂಚಿಸಲಾಗಿತ್ತು. ನಮ್ಮ ಶಾಸಕರಿಗೆ ಮಾಹಿತಿ ನೀಡದೇ ಕರೆಸಿಕೊಳ್ಳಲಾಗಿತ್ತು. ದೇವೇಂದ್ರ ಫಡ್ನವೀಸ್ ಸರ್ಕಾರ ಬಹುಮತ ಹೇಗೆ ಸಾಬೀತು ಮಾಡುತ್ತೆ ಎಂದು ಎಲ್ಲರೂ ಕಾದುನೋಡೋಣ.

ಪಕ್ಷಾಂತರ ಕಾಯ್ದೆ ಏನು ಹೇಳುತ್ತೆ?
ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷದ ಆದೇಶ ಉಲ್ಲಂಘಿಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಬಹುದು. ಆಗ ಸಹಜವಾಗಿಯೇ ಶಾಸಕರು ಅನರ್ಹರಾಗುತ್ತಾರೆ. ಅನರ್ಹ ಶಾಸಕರು ವಿಧಾನಸಭೆ ಅವಧಿ ಮುಗಿಯುವವರೆಗೆ ಬೇರೆ ಪಕ್ಷಕ್ಕೆ ಸೇರುವಂತಿಲ್ಲ. ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೂ ಉಪ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡ ಶಾಸಕರು ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದುವಂತಿಲ್ಲ.

ಅನರ್ಹಗೊಂಡ ದಿನದಿಂದ ಅವರ ಶಾಸಕತ್ವ ಅವಧಿ ಯಾವಾಗ ಮುಗಿಯುತ್ತೋ ಅಲ್ಲಿವರೆಗೆ ಹುದ್ದೆಗಳನ್ನ ಹೊಂದುವಂತಿಲ್ಲ. ಪಕ್ಷದ ಒಟ್ಟು ಶಾಸಕರಲ್ಲಿ 2/3ರಷ್ಟು ಶಾಸಕರು ಗುಂಪಾಗಿ ಪಕ್ಷಾಂತರ ಮಾಡಿದರಷ್ಟೇ ಅನರ್ಹತೆ ಅನ್ವಯಿಸಲ್ಲ. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭೆ ಸ್ಪೀಕರ್ ಕೈಯಲ್ಲಿದ್ದು, ಅನರ್ಹತೆ ಪ್ರಶ್ನಿಸಿ ಸ್ಪೀಕರ್ ಅವರಿಗೂ ಮನವಿ, ಕಾನೂನು ಹೋರಾಟವನ್ನೂ ಮಾಡಬಹುದು.

Click to comment

Leave a Reply

Your email address will not be published. Required fields are marked *