– ಅಜಿತ್ ಪವಾರ್ ಮೇಲಿನ ಬೇನಾಮಿ ಆಸ್ತಿ ಆರೋಪ ವಜಾ
ಮುಂಬೈ: ಬಿಜೆಪಿ ಮೈತ್ರಿ ಪಕ್ಷವಾದ ಎನ್‌ಸಿಪಿಯ ನಾಯಕ ಅಜಿತ್ ಪವಾರ್ (Ajit Pawar) ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಆರೋಪವೊಂದರಿಂದ ಮುಕ್ತವಾಗಿದ್ದಾರೆ.
ಬೇನಾಮಿ ಆಸ್ತಿ (Benami Property Case) ವಹಿವಾಟು ತಡೆ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಮಂಡಳಿಯು ಅಜಿತ್ ಪವಾರ್ ಮತ್ತು ಅವರ ಕುಟುಂಬದ ವಿರುದ್ಧದ ಬೇನಾಮಿ ಆಸ್ತಿ ಮಾಲೀಕತ್ವದ ಆರೋಪವನ್ನು ಶುಕ್ರವಾರ ವಜಾಗೊಳಿಸಿತು. ನ್ಯಾಯಾಲಯದ ತೀರ್ಪಿನ ನಂತರ, ಆದಾಯ ತೆರಿಗೆ ಇಲಾಖೆಯು 2021ರ ಬೇನಾಮಿ ವಹಿವಾಟು ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅಜಿತ್ ಪವಾರ್ ಅವರಿಗೆ ಬಿಡುಗಡೆ ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಇತ್ತೀಚೆಗೆ ಚುನಾಯಿತರಾದ ಮಹಾಯುತಿ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಸಾಕಷ್ಟು ಪುರಾವೆಗಳ ಆಧಾರದ ಮೇಲೆ ಅಜಿತ್ ಪವಾರ್ ಮತ್ತು ಅವರ ಕುಟುಂಬಕ್ಕೆ ಬೇನಾಮಿ ಮಾಲೀಕತ್ವದ ಅಡಿಯಲ್ಲಿ ಆಸ್ತಿಗಳನ್ನು ಲಿಂಕ್ ಮಾಡಿದ 2021ರ ಪ್ರಕರಣವನ್ನು ನ್ಯಾಯಮಂಡಳಿ ವಜಾಗೊಳಿಸಿದೆ ಎಂದು ವರದಿಗಳು ತಿಳಿಸಿವೆ.
Advertisement
ಆದಾಯ ತೆರಿಗೆ ಇಲಾಖೆಯು 2021ರ ಅಕ್ಟೋಬರ್ 7 ರಂದು ಅಜಿತ್ ಪವಾರ್ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಸತಾರಾದಲ್ಲಿನ ಸಕ್ಕರೆ ಕಾರ್ಖಾನೆ, ದೆಹಲಿಯ ಫ್ಲಾಟ್, ಗೋವಾದ ರೆಸಾರ್ಟ್ ಮತ್ತು ಮಹಾರಾಷ್ಟ್ರದಾದ್ಯಂತ ಹಲವಾರು ಭೂಮಿ ಸೇರಿದಂತೆ ಹಲವು ಆಸ್ತಿಗಳು ಸೇರಿತ್ತು.
Advertisement
ಆದಾಯ ತೆರಿಗೆ ಇಲಾಖೆ ದಾಳಿ ವೇಳೆ, ಅಜಿತ್ ಪವಾರ್ ಅವರು ಅವಿಭಜಿತ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಭಾಗವಾಗಿದ್ದರು. ಈ ವೇಳೆ ಜೂನ್ 2022ರಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿತ್ತು. ಈ ವೇಳೆ ಅಜಿತ್ ಪವಾರ್ ಅವರು ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು. ಸರ್ಕಾರ ಪತನದ ನಂತರ ಅವರು ಪಕ್ಷವನ್ನು ಒಡೆದು ಜುಲೈ 2023 ರಿಂದ ಶಿಂಧೆ ನೇತೃತ್ವದ ಶಿವಸೇನೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಮುಂದುವರೆದಿದ್ದರು. ಈ ಸರ್ಕಾರಕ್ಕೆ ಬಿಜೆಪಿ ಕೂಡಾ ಸೇರಿದ್ದು, ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿದ್ದರು. ಶುಕ್ರವಾರ ನ್ಯಾಯಪೀಠವು ಬೇನಾಮಿ ವ್ಯವಹಾರದ ಪ್ರತಿಪಾದನೆಯನ್ನು ತಿರಸ್ಕರಿಸಿ, ಆರೋಪಗಳಿಗೆ ಸಾಕಷ್ಟು ಪುರಾವೆಗಳ ಕೊರತೆಯಿದೆ ಎಂದು ಹೇಳಿದೆ.
ಅಜಿತ್ ಪವಾರ್, ಪತ್ನಿ ಸುನೇತ್ರಾ ಪವಾರ್ ಮತ್ತು ಮಗ ಪಾರ್ಥ್ ಪವಾರ್ ಬೇನಾಮಿ ಆಸ್ತಿಗಳನ್ನು ಸಂಗ್ರಹಿಸಲು ಹಣವನ್ನು ವರ್ಗಾಯಿಸಿಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿದೆ. ಎಲ್ಲಾ ಆಸ್ತಿ ವಹಿವಾಟುಗಳನ್ನು ಕಾನೂನುಬದ್ಧವಾಗಿ ನಡೆಸಲಾಗಿದೆ. ದಾಖಲೆಗಳಲ್ಲಿ ಯಾವುದೇ ಅಕ್ರಮಗಳಿಲ್ಲ ಎಂದು ಅಜಿತ್ ಪವಾರ್ ಅವರ ಕಾನೂನು ಸಲಹೆಗಾರರು ವಾದಿಸಿದ್ದರು.