ಪಾಕಿಸ್ತಾನ ಮ್ಯಾಪ್‌ ವಿಚಾರಕ್ಕೆ ಸಿಟ್ಟಾಗಿ SCO ಸಭೆಯಿಂದ ಎದ್ದು ಹೊರಬಂದಿದ್ದ ಅಜಿತ್‌ ದೋವಲ್‌

Public TV
2 Min Read
Ajit Doval

– 5 ವರ್ಷಗಳ ಹಿಂದಿನ ಘಟನೆ ನೆನಪಿಸಿದ ಚೀನಾ ಭೇಟಿ

ಬೀಜಿಂಗ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ (Ajit Doval) ಅವರ ಚೀನಾ ಭೇಟಿಯು 5 ವರ್ಷಗಳ ಹಿಂದಿನ ಘಟನೆಯೊಂದನ್ನು ನೆನಪಿಸಿದೆ. ಇದೇ ಐದು ವರ್ಷಗಳ ಹಿಂದೆ, ಚೀನಾದ ಎಸ್‌ಸಿಒ ಸಭೆಯಿಂದಲೇ ಎದ್ದು ಅಜಿತ್‌ ದೋವಲ್‌ ಹೊರಬಂದಿದ್ದರು. ಆ ಕ್ಷಣವನ್ನು ಈಗಿನ ಭೇಟಿ ನೆನಪಿಸುತ್ತಿದೆ.

ಅಷ್ಟಕ್ಕೂ ಆಗ ಏನಾಗಿತ್ತು?
ಅದು 2020ರ ಸೆಪ್ಟೆಂಬರ್ ತಿಂಗಳು. ಕೋವಿಡ್-19 ಸಾಂಕ್ರಾಮಿಕದ ಉತ್ತುಂಗದ ಸಂದರ್ಭ. ರಾಜತಾಂತ್ರಿಕತೆ ಹೆಚ್ಚಾಗಿ ಆನ್‌ಲೈನ್‌ಗೆ ಬದಲಾಗಿತ್ತು. SCO ರಾಷ್ಟ್ರೀಯ ಭದ್ರತಾ ಸಲಹೆಗಾರರು ವರ್ಚುವಲ್ ಆಗಿ ಸಭೆ ಸೇರುತ್ತಿದ್ದರು. ಆಗಿನ ಸಭೆ ಸಮಯದಲ್ಲಿ, ಪಾಕಿಸ್ತಾನದ ಪ್ರತಿನಿಧಿ ಡಾ. ಮೊಯೀದ್ ಯೂಸುಫ್ ಹೊಸದಾಗಿ ಬಿಡುಗಡೆ ಮಾಡಲಾದ ರಾಜಕೀಯ ನಕ್ಷೆಯನ್ನು ಪ್ರದರ್ಶಿಸಿದರು. ಅದರ ಮೇಲೆ, ಭಾರತದ ಅವಿಭಾಜ್ಯ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಜುನಾಗಢ್‌ಗಳ ಮೇಲೆ ಪಾಕಿಸ್ತಾನ ಹಕ್ಕು ಸಾಧಿಸಿದೆ ಎಂದು ವಾದಿಸಿದ್ದರು. ಅವರ ನಡೆ, ದ್ವಿಪಕ್ಷೀಯ ವಿವಾದಗಳನ್ನು ಬಹುಪಕ್ಷೀಯ ವೇದಿಕೆಗಳಿಗೆ ತರುವುದನ್ನು ನಿಷೇಧಿಸುವ SCO ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿತ್ತು. ಇದನ್ನೂ ಓದಿ: ಭಾರತ & ಚೀನಾ ಸ್ನೇಹಿತರಾಗಿರುವುದೇ ಉತ್ತಮ ಆಯ್ಕೆ: ಕ್ಸಿ ಜಿನ್‌ಪಿಂಗ್‌

ಅದಕ್ಕೆ ಭಾರತ ಕೂಡಲೇ ಆಕ್ಷೇಪ ವ್ಯಕ್ತಪಡಿಸಿತು. ಆಗ ರಷ್ಯಾ ಸಭೆಯ ಅಧ್ಯಕ್ಷತೆ ವಹಿಸಿತ್ತು. ಪಾಕಿಸ್ತಾನದಿಂದ ನಕ್ಷೆಯನ್ನು ತೆಗೆದುಹಾಕುವಂತೆ ಪದೇ ಪದೇ ಒತ್ತಾಯಿಸಲಾಯಿತು. ಆದರೆ, ಆ ಎಚ್ಚರಿಕೆಗಳನ್ನು ಪಾಕ್‌ ನಿರ್ಲಕ್ಷಿಸಿತು. ಆ ಕ್ಷಣದಲ್ಲಿ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಭೆಯಿಂದಲೇ ಹೊರನಡೆದರು. ಆ ಮೂಲಕ ಭಾರತವು ತನ್ನ ಪ್ರಾದೇಶಿಕ ಸಮಗ್ರತೆಯನ್ನು ಪ್ರಶ್ನಿಸಲು ಬಿಡುವುದಿಲ್ಲ ಎಂಬ ಸಂದೇಶ ರವಾನಿಸಿತು. ಆ ಸಂದರ್ಭದಲ್ಲಿ, ಅಜಿತ್ ದೋವಲ್ ದೇಶದ ಸಾರ್ವಭೌಮತೆಯ ಬಗ್ಗೆ ದೃಢವಾದ ನಿಲುವನ್ನು ತೆಗೆದುಕೊಂಡಿದ್ದನ್ನು ಈ ಭೇಟಿ ನೆನಪಿಸುತ್ತದೆ.

ಪಾಕಿಸ್ತಾನ ನಡೆದುಕೊಂಡ ರೀತಿಯು SCO ಚಾರ್ಟರ್‌ನ ಸ್ಪಷ್ಟ ಉಲ್ಲಂಘನೆ. SCO ಸದಸ್ಯ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವ ಎಲ್ಲಾ ಸ್ಥಾಪಿತ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಭಾರತ ಗರಂ ಆಗಿತ್ತು. ಪಾಕಿಸ್ತಾನದ ಪ್ರಚೋದನಕಾರಿ ಕ್ರಮವನ್ನು ಬೆಂಬಲಿಸುವುದಿಲ್ಲ ಎಂದು ರಷ್ಯಾ ಕೂಡ ದೃಢಪಡಿಸಿತ್ತು. ರಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪತ್ರುಶೇವ್ ಅವರು, ಅಜಿತ್ ದೋವಲ್ ಅವರನ್ನು ಹೊರನಡೆದಿದ್ದಕ್ಕಾಗಿ ಶ್ಲಾಘಿಸಿದ್ದರು. ಇದನ್ನೂ ಓದಿ: ಪರಸ್ಪರ ನಂಬಿಕೆ, ಗೌರವ ಆಧಾರದಲ್ಲಿ ಭಾರತ-ಚೀನಾ ಸಂಬಂಧ ಮುಂದಕ್ಕೆ ಕೊಂಡೊಯ್ಯಲು ಬದ್ಧ: ಮೋದಿ

ಈಗ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಚೀನಾಕ್ಕೆ ಭೇಟಿ ಕೊಟ್ಟಿದ್ದಾರೆ. ಭಾರತೀಯ ಸರಕುಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸಿರುವ ಅಮೆರಿಕದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೂ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಲು ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿದ್ದಾರೆ.

Share This Article