ನವದೆಹಲಿ: ರಷ್ಯಾ-ಉಕ್ರೇನ್ (Russia-Ukraine Peace) ದೇಶಗಳ ನಡುವೆ ಶಾಂತಿ ಒಪ್ಪಂದ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವ ಪ್ರಧಾನಿ ಮೋದಿ (Narendra Modi) ಅವರ ಪ್ರಯತ್ನದ ಭಾಗವಾಗಿ ಅಜಿತ್ ದೋವಲ್ ಅವರು ಮಾಸ್ಕೋಗೆ ತೆರಳುತ್ತಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಈ ವಾರ ಮಾಸ್ಕೋಗೆ (Moscow) ತೆರಳಿ ರಷ್ಯಾ-ಉಕ್ರೇನ್ ಸಂಘರ್ಷವನ್ನು ಪರಿಹರಿಸುವ ಉದ್ದೇಶದಿಂದ ಚರ್ಚೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಅಮೆರಿಕ ಪ್ರವಾಸ – ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದ ಸ್ಯಾಮ್ ಪಿತ್ರೋಡಾ
ಕಳೆದ ಎರಡು ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಮತ್ತು ಉಕ್ರೇನ್‌ಗೆ ಭೇಟಿ ನೀಡಿದ್ದರು. ಉಭಯ ದೇಶಗಳ ನಾಯಕರಾದ ವ್ಲಾಡಿಮಿರ್ ಪುಟಿನ್ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಅಜಿತ್ ದೋವಲ್ ಪ್ರಯಾಣದ ಸುದ್ದಿ ಹೊರಬಿದ್ದಿದೆ.
ಉಕ್ರೇನ್ ಪ್ರವಾಸದಲ್ಲಿ ಅಧ್ಯಕ್ಷ ಝೆಲೆನ್ಸ್ಕಿ ಭೇಟಿ ಬಳಿಕ ಆ.27 ರಂದು ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದರು. ಕೀವ್‌ಗೆ ತಾವು ಭೇಟಿ ಕೊಟ್ಟ ವಿಚಾರವನ್ನು ಮೋದಿ ತಿಳಿಸಿದರು. ರಾಜತಾಂತ್ರಿಕ ವಿಧಾನಗಳ ಮೂಲಕ ಎರಡೂ ದೇಶಗಳ ನಡುವೆ ಶಾಂತಿ ಮಾತುಕತೆಗೆ ಭಾರತ ಬದ್ಧ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದರು.
ಚೀನಾ, ಭಾರತ ರಾಷ್ಟ್ರಗಳು ಮಧ್ಯಸ್ಥಿಕೆ ವಹಿಸುವುದಾದರೆ ಶಾಂತಿ ಮಾತುಕತೆಗೆ ಬದ್ಧ ಎಂದು ಈಚೆಗೆ ಪುಟಿನ್ ಕೂಡ ತಿಳಿಸಿದ್ದರು. ಇದನ್ನೂ ಓದಿ: 25 ವರ್ಷಗಳ ಬಳಿಕ ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರದ ಬಗ್ಗೆ ಪಾಕ್ ತಪ್ಪೊಪ್ಪಿಗೆ!