ನವದೆಹಲಿ: ಟೀಂ ಇಂಡಿಯಾದ ಟೆಸ್ಟ್ ಕ್ರಿಕೆಟರ್ ಅಜಿಂಕ್ಯ ರಹಾನೆ ಅವರ ತಂದೆ ಮಧುಕರ್ ಬಾಬು ರಾವ್ ರಹಾನೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದಾರೆ.
ಇಂದು ಮಧುಕರ್ ಅವರು ಚಲಾಯಿಸುತ್ತಿದ್ದ ಕಾರ್ 67 ವರ್ಷದ ಮಹಿಳೆಯೊಬ್ಬರ ಮೇಲೆ ಹರಿದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರು ಮಧುಕರ್ ಅವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಧುಕರ್ ಅವರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹುಂಡೈ ಐ20 ಕಾರಿನಲ್ಲಿ ಹೋಗುತ್ತಿದ್ದ ವೇಳೆ ವಾಹನದ ನಿಯಂತ್ರಣ ತಪ್ಪಿ ಕಣಗಲ್ ಪ್ರದೇಶದ ಬಳಿ ಆಶಾತಾಯ್ ಕಾಂಬ್ಳೆ ಎಂಬ ಮಹಿಳೆಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಸ್ಥಳದಲ್ಲಿದ್ದವರು ಮಹಿಳೆಯನ್ನ ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದು, ಮಹಿಳೆ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೊಲ್ಹಾಪುರ ಪೊಲೀಸರು ಐಪಿಸಿ ಸೆಕ್ಷನ್ 304ಎ, 337, 338, 279 ಹಾಗೂ 184ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.