Connect with us

Bengaluru City

ಕೃಷ್ಣ ಅಜೇಯ್ ರಾವ್ ನಟನೆಯ ‘ರೈನ್‍ಬೋ’ ಗೆ ಮುಹೂರ್ತ

Published

on

ಲವರ್ ಬಾಯ್, ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ಕೃಷ್ಣ ಅಜೇಯ್ ರಾವ್ ಮೊದಲ ಬಾರಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ‘ರೈನ್‍ಬೋ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆಯ ಕೆಳಗೆ ಕಲರ್ಸ್ ಆಫ್ ಕ್ರೈಂ ಎನ್ನುವ ಅಡಿಬರಹವನ್ನು ನೀಡಲಾಗಿದೆ. ಸೈಬರ್‌ಗೆಸಂಬಂಧಿಸಿದಂತೆ ಸಾಕಷ್ಟು ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಆದರೆ ರೈನ್‍ಬೋ ಸಿನಿಮಾದಲ್ಲಿ ಈವರೆಗೆ ಯಾರೂ ಗಮನಿಸದ, ಅನಾಹುತಕಾರಿ ಅಪರಾಧದ ಸುತ್ತ ಕಥೆ ರಚಿಸಲಾಗಿದೆ.


ಯಾವುದೇ ಒಂದು ಮೆಸೇಜ್ ಕಳುಹಿಸಿದರೆ, ಅದು ಮೊದಲು ಸ್ಯಾಟಲೈಟ್ ಸ್ಟೋರ್‌ಗೆ ತಲುಪುತ್ತದೆ. ನಂತರ ಸಂಬಂಧಪಟ್ಟವರಿಗೆ ಅದು ರವಾನೆಯಾಗುತ್ತದೆ. ಸ್ವೀಕೃತಿ ಮಾಡುವವನು ಹ್ಯಾಕ್ ಮಾಡಿ ಅದನ್ನು ದುರುಪಯೋಗ ಮಾಡಿಕೊಂಡರೆ ಅದರ ಪರಿಣಾಮವನ್ನು ಗ್ರಾಹಕ ಎದುರಿಸಬೇಕಾಗುತ್ತದೆ. ಇಂತಹುದನ್ನು ನಾಯಕ ನಟ ಹೇಗೆ ತನಿಖೆ ಮಾಡುತ್ತಾನೆ ಎಂಬುದು ಈ ಸಿನಿಮಾದ ಒಂದು ಎಳೆಯ ಸಾರಾಂಶವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.


ಇಲಾಖೆಯಲ್ಲಿ ನೇಮಕಗೊಂಡು, ಪರೀಕ್ಷಾ ಅವಧಿಯಲ್ಲಿ ಉನ್ನತ ಅಧಿಕಾರಿಗಳ ಅನುಮತಿಯನ್ನು ಹೇಗೆ ಪಡೆಯುತ್ತಾನೆ, ಯಾವ ರೀತಿಯಲ್ಲಿ ಅಪರಾಧಿಗಳನ್ನು ಹಿಡಿಯುತ್ತಾನೆ ಎನ್ನುವ ಪಾತ್ರದಲ್ಲಿ ಕೃಷ್ಣ ಅಜೇಯ್ ರಾವ್ ನಟಿಸಲಿದ್ದಾರೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾ, ಅನಾಥಳಾಗಿ ಪಿಜಿಯಲ್ಲಿ ಇದ್ದುಕೊಂಡು ತನಿಖೆಯಲ್ಲಿ ಸಹಕಾರ ನೀಡುವ ಮಾನ್ವಿತಾ ಹರೀಶ್ ನಾಯಕಿ. ಮುಖ್ಯ ಖಳನಾಯಕ ಮತ್ತು ತಾರಾಗಣ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೇ ಮುಗಿಯಲಿದೆ. ಹೊಸತನ ಎನ್ನುವಂತೆ ಪ್ರತಿ ಪಾತ್ರ ಬಂದಾಗ ಅದಕ್ಕೊಂದು ಅರ್ಥಪೂರ್ಣ ಹಿನ್ನೆಲೆ ಸಂಗೀತವನ್ನು ಒದಗಿಸುತ್ತಿರುವುದು ಸಂಗೀತ ನಿರ್ದೇಶಕ ಎಮಿಲ್. ಚಿತ್ರಕತೆ ಜಡೇಶ್ ಕುಮಾರ್-ಜಾಯ್ ಜಾರ್ಸ್-ಎಸ್.ರಾಜವರ್ಧನ್, ಛಾಯಾಗ್ರಹಣ ಆರೂರು ಸುಧಾಕರಶೆಟ್ಟಿ, ಕಾರ್ಯಕಾರಿ ನಿರ್ಮಾಪಕ ವೈಭವ್ ನಾಗರಾಜ್.


ಸೋಷಿಯಲ್ ಮೀಡಿಯಾವನ್ನು ಸನ್ಮಾರ್ಗದಲ್ಲಿ ಉಪಯೋಗಿಸಿದರೆ ಯಾವ ಕೆಡುಕೂ ಆಗುವುದಿಲ್ಲ. ಅದನ್ನು ಅನ್ಯ ಮಾರ್ಗಗಳಿಗಾಗಿ ಬಳಸಿದರೆ ಯಡವಟ್ಟು ಕಟ್ಟಿಟ್ಟ ಬುತ್ತಿ ಅನ್ನೋದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ. ಕ್ರಿಯೇಟಿವ್ ಹೆಡ್ ಮತ್ತು ನಿರ್ಮಾಣ ಮಾಡುತ್ತಿರುವ ಗುರುದೇಶಪಾಂಡೆ ಅವರು ಶಿಷ್ಯ ಎಸ್.ರಾಜವರ್ಧನ್ ಅವರಿಗೆ ನಿರ್ದೇಶನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ವರಮಹಾಲಕ್ಷೀ ಹಬ್ಬದಂದು ನಡೆದ ಮಹೂರ್ತ ಸಮಾರಂಭಕ್ಕೆ ನಿರ್ಮಾಪಕರಾದ ರಮೇಶ್‍ರೆಡ್ಡಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಸಮೃದ್ಧಿ ಮಂಜುನಾಥ್ ಕ್ಯಾಮೆರಾ ಆನ್ ಮಾಡಿ ತಂಡಕ್ಕೆ ಶುಭಹಾರೈಸಿದರು. ರೈನ್‍ಬೋ ಚಿತ್ರತಂಡ ಮುಂದಿನ ತಿಂಗಳಿನಿಂದ ಚಿತ್ರೀಕರಣ ನಡೆಸಲಿದೆ.

Click to comment

Leave a Reply

Your email address will not be published. Required fields are marked *

www.publictv.in