ಮಂಗಳೂರು: ಭೀಕರ ರೈಲ್ವೇ ಅಪಘಾತದಲ್ಲಿ ಎರಡೂವರೆ ವರ್ಷದ ಮಗುವಿನಿಂದ ಬೇರ್ಪಟ್ಟಿದ್ದ ಎರಡೂ ಕಾಲುಗಳನ್ನು ಮಂಗಳೂರಿನ ಎಜೆ ಆಸ್ಪತ್ರೆಯ ವೈದ್ಯರು ಮರುಜೋಡಿಸಿ ಪುನರ್ಜನ್ಮ ನೀಡಿದಿದ್ದಾರೆ.
ಕಳೆದ ಎಪ್ರಿಲ್ 29 ರಂದು ಕೇರಳದ ಪಯ್ಯನೂರಿನಲ್ಲಿ ಭೀಕರ ರೈಲ್ವೇ ಅಪಘಾತ ನಡೆದಿದ್ದು, ಎರಡೂವರೆ ವರ್ಷದ ಮಗು ಮಹಮ್ಮದ್ ಸಾಲೆಯ ಕಾಲುಗಳೆರಡೂ ತುಂಡಾಗಿ ಬೇರ್ಪಟ್ಟಿತ್ತು. ಮಗುವಿನ ತಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಗುವನ್ನು ರೈಲ್ವೇ ಪೊಲೀಸರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು.
Advertisement
Advertisement
ಬಳಿಕ ಪಯ್ಯನೂರಿನ ಆಸ್ಪತ್ರೆಯಿಂದ ಮಂಗಳೂರಿನ ಎಜೆ ಆಸ್ಪತ್ರೆಗೆ ಮಗುವಿನ ಜೊತೆಗೆ ಬೇರ್ಪಟ್ಟ ಎರಡೂ ಕಾಲುಗಳನ್ನೂ ಥರ್ಮಾಕೋಲ್ ನ ಐಸ್ ಬಾಕ್ಸ್ ನಲ್ಲಿ ಸಾಗಿಸಿದ್ದಾರೆ. ಎಜೆ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಡೀನ್ ಡಾ.ದಿನೇಶ್ ಕದಂ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ ಸತತ 7 ಗಂಟೆಗಳ ಕಾಲ ಮಗುವಿನ ಕಾಲು ಜೋಡಣೆಯ ಮೈಕ್ರೋ ವ್ಯಾಸ್ಕ್ಯುಲರ್ ಪ್ಲಾಸ್ಟಿಕ್ ಸರ್ಜರಿ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಇದೀಗ ಮಗುವಿನ ಕಾಲುಗಳ ಜೋಡಣೆಯಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಸಂಪೂರ್ಣವಾಗಿ ಬೇರ್ಪಟ್ಟ ಕಾಲುಗಳು ಮತ್ತು ಮಂಡಿ ಮೇಲ್ಭಾಗದಲ್ಲಿ ಕತ್ತರಿಸಿದ ಕಾಲಿನ ಮರು ಜೋಡಣೆ ಯಶಸ್ವಿಯಾಗಿ ನಡೆಸಿದ್ದಾರೆ. ಮೊದಲ ಬಾರಿಗೆ ದೇಶದಲ್ಲಿ ಈ ರೀತಿಯ ಶಸ್ತ್ರ ಚಿಕಿತ್ಸೆ ನಡೆದಿದೆ. ಶಸ್ತ್ರ ಚಿಕಿತ್ಸೆ ನಡೆದು ಏಳು ತಿಂಗಳು ಕಳೆದಿದ್ದು, ಸದ್ಯ ಮಗು ನಡೆಯಲು ಶಕ್ತವಾಗಿದೆ.
Advertisement
ತಾಯಿಯನ್ನು ಕಳೆದುಕೊಂಡ ಮಗುವಿನ ಸಮಗ್ರ ಆರೈಕೆಯನ್ನು ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ವಿಶೇಷವಾಗಿ ಕಾಳಜಿ ವಹಿಸಿ ಮಾಡಿದ್ದಾರೆ. ಮಗುವಿನ ಪೂರ್ವಾಪರವೂ ವಿಚಾರಿಸದೇ ಆಸ್ಪತ್ರೆಯಲ್ಲಿ ದಾಖಲಿಸಿ, ಸ್ವ ಮುತುವರ್ಜಿ ವಹಿಸಿ ಪುನರ್ಜನ್ಮ ನೀಡಿದ ವೈದ್ಯರ ಸೇವಾ ಮನೋಭಾವವಕ್ಕೆ ಜನರ ಮೆಚ್ಚುಗೆ ವ್ಯಕ್ತವಾಗಿದೆ.