ದುಬೈ: ಶ್ರೀಲಂಕಾ ರೋಚಕ 6 ವಿಕೆಟ್ ಗಳ ಜಯ ಸಾಧಿಸಿದ್ದು, ಏಷ್ಯಾ ಕಪ್ ನಿಂದ ಭಾರತ ಬಹುತೇಕ ಹೊರಬಿದ್ದಿದೆ. ಬಾಕಿ ಇರುವ ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದರೆ ಮಾತ್ರ ಭಾರತ ಫೈನಲ್‌ಗೆ ಏರುವ ಸಾಧ್ಯತೆಯಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ, 174 ರನ್‌ಗಳ ಗುರಿ ನೀಡಿತು. ಸಾಧಾರಣ ಮೊತ್ತದ ರನ್ ಗುರಿ ಬೆನ್ನತ್ತಿದ ಶ್ರೀಲಂಕಾ 19.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ174 ರನ್‌ಗಳಿಸಿ ರೋಚಕ ಜಯ ಸಾಧಿಸಿದೆ
Advertisement
Advertisement
ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಲಂಕಾ ಮೊದಲ 4 ಓವರ್‌ಗಳಿಗೆ 22 ರನ್‌ಗಳನ್ನಷ್ಟೇ ಗಳಿಸಿತ್ತು. ನಂತರದಲ್ಲಿ ಬಿರುಸಿನ ಬ್ಯಾಟಿಂಗ್‌ನಿಂದ ಪವರ್ ಪ್ಲೇ ಮುಗಿಯುವ ವೇಳೆಗೆ 50 ರನ್‌ಗಳ ಗಡಿದಾಟಿತು. ಆರಂಭಿಕರಾಗಿ ಕಣಕ್ಕಿಳಿದ ಪಾತುಂ ನಿಸ್ಸಾಂಕ ಹಾಗೂ ಕುಸಲ್ ಮೆಂಡಿಸ್ 67 ಎಸೆತೆಗಳಲ್ಲಿ 97 ರನ್ ಸಿಡಿಸಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಪಾತುಂ ನಿಸ್ಸಾಂಕ ಹಾಗೂ ಕುಸಲ್ ಮೆಂಡಿಸ್ ಭಾರತದ ಬೌಲರ್‌ಗಳ ಬೆವರಿಳಿಸಿದರು. ಪಾತುಂ ನಿಸ್ಸಾಂಕ 37 ಎಸೆತಗಳಲ್ಲಿ 2 ಸಿಕ್ಸರ್ 4 ಬೌಂಡರಿಯೊಂದಿಗೆ 52 ರನ್ ಸಿಡಿಸಿದರೆ, ಕುಸಾಲ್ ಮೆಂಡಿಸ್ 37 ಎಸೆತಗಳಲ್ಲಿ 57 ರನ್ (4 ಬೌಂಡರಿ, 3 ಸಿಕ್ಸರ್) ಸಿಡಿಸಿ ಪೆವಿಲಿಯನ್ ಸೇರಿದರು.
Advertisement
Advertisement
ಇದಾದ ಬಳಿಕ ಲಂಕಾ ಸತತ ನಾಲ್ಕು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಮೆಂಡಿಸ್ ನಂತರ ಕಣಕ್ಕಿಳಿದ ಚರಿತ್ ಅಸಲಂಕಾ ಡಕೌಟ್ ಆದರು. ಈ ಬೆನ್ನಲ್ಲೇ 7 ಎಸೆತಗಳನ್ನು ಎದುರಿಸಿದ ದನುಷ್ಕ ಗುಣತಿಲಕ 1 ರನ್‌ಗಳಿಸಿ ಔಟಾದರು.
ನಂತರ ಬಂದ ಭಾನುಕಾ ರಾಜಪಕ್ಸೆ ಹಾಗೂ ದಾಸುನ್ ಶನಕ ಉತ್ತಮ ಜೊತೆಯಾಟವಾಡಿದರು. 18 ಓವರ್‌ಗಳಲ್ಲಿ 153 ರನ್‌ಗಳಿಸಿದ ಲಂಕಾ ತಂಡಕ್ಕೆ ಕೊನೆಯ 2 ಓವರ್‌ಗಳಲ್ಲಿ 21 ರನ್‌ಗಳ ಅವಶ್ಯಕತೆಯಿತ್ತು. 19ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಮೊದಲ 2 ಎಸೆತಗಳಲ್ಲಿ ಒಂದೊಂದೇ ರನ್ ನೀಡಿ, ಸತತ 2 ವೈಡ್ ಎಸೆದು, 3ನೇ ಎಸೆತದಲ್ಲಿ 4 ರನ್ ಚಚ್ಚಿಸಿಕೊಂಡರು. ತಮ್ಮ ಕೊನೆಯ ಓವರ್‌ನಲ್ಲಿ 14 ರನ್ ನೀಡಿದ್ದು, ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣವಾಯಿತು.
ಕೊನೆಯ ಓವರ್‌ನಲ್ಲಿ ಅರ್ಶ್‌ದೀಪ್ ಸಿಂಗ್‌ಗೆ 6 ಎಸೆತಗಳಲ್ಲಿ 7 ರನ್‌ಗಳನ್ನು ಕಂಟ್ರೋಲ್ ಮಾಡುವ ಸವಾಲು ಎದುರಾಗಿತ್ತು. ಮೊದಲ 2 ಎಸೆತಗಳಲ್ಲಿ ಒಂದೊಂದು ರನ್ ನೀಡಿದ ಅರ್ಶ್‌ದೀಪ್, 3ನೇ ಎಸೆತದಲ್ಲಿ 2 ರನ್ ನೀಡಿ ಉತ್ತಮ ಹಿಡಿದ ಸಾಧಿಸಿದ್ದರು. ಕೊನೆಯ 2 ಎಸೆತಗಳಲ್ಲಿ 2 ರನ್ ಬೇಕಿದ್ದ ಲಂಕಾಗೆ 5ನೇ ಎಸೆತವನ್ನು ಬೀಟ್ ಮಾಡಿದರೂ, ರನೌಟ್ ಮಾಡುವ ಪ್ರಯತ್ನದಲ್ಲಿ ರಿಷಣ್ ಪಂತ್ 2 ರನ್ ಉಚಿತವಾಗಿಯೇ ನೀಡಿದ್ದರಿಂದ ಜಯ ಭಾರತದ ಕೈಚೆಲ್ಲಿತು. ಉತ್ತಮ ಜೊತೆಯಾಟವಾಡಿದ ಭಾನುಕಾ ರಾಜಪಕ್ಸೆ 17 ಎಸೆತಗಳಲ್ಲಿ 25 ರನ್ ಗಳಿಸಿದರೆ ಹಾಗೂ ದಾಸುನ್ ಶನಕ 18 ಎಸೆತಗಳಲ್ಲಿ 33 ರನ್ ಪೇರಿಸಿ ಲಂಕಾ ತಂಡಕ್ಕೆ ಜಯ ತಂದುಕೊಟ್ಟರು.
ಚಾಹಲ್ ಕಮಾಲ್: ಮೊದಲ 10 ಓವರ್‌ಗಳ ವರೆಗೂ ಟೀಂ ಇಂಡಿಯಾ ಯಾವುದೇ ವಿಕೆಟ್ ಪಡೆದಿರಲಿಲ್ಲ. ನಂತರ ತಮ್ಮ ಬೌಲಿಂಗ್ ಕಮಾಲ್ ಮಾಡಿದ ಯಜುವೇಂದ್ರ ಚಾಹಲ್ 4 ಓವರ್‌ಗಳಲ್ಲಿ 34 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು. ಇದರಿಂದ ಟೀಂ ಇಂಡಿಯಾ ಮತ್ತೆ ಗೆಲುವಿನ ಭರವಸೆ ಕಂಡುಕೊಂಡಿತ್ತು.
ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪವರ್ ಪ್ಲೇ ಮುಗಿಯುವಷ್ಟರಲ್ಲೇ 2 ವಿಕೆಟ್‌ಗಳನ್ನು ಕಳೆದುಕೊಂಡಿತು. 3ನೇ ಓವರ್‌ನಲ್ಲಿ 11 ರನ್‌ಗಳಾಗಿದ್ದಾಗಲೇ 6 ರನ್ ಗಳಿಸಿ ಆಡುತ್ತಿದ್ದ ಕೆ.ಎಲ್.ರಾಹುಲ್ ಎಲ್‌ಬಿ ಬಲೆಗೆ ಬಿದ್ದರು. ನಂತರ ಬಂದ ಕಿಂಗ್ ಕೊಹ್ಲಿ ಯಾವುದೇ ರನ್‌ಗಳಿಸದೇ ಶೂನ್ಯಕ್ಕೆ ಔಟಾದರು.
ಈ ವೇಳೆ ಭಾರತ 13 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ನಾಯಕ ರೋಹಿತ್ ಶರ್ಮಾ 41 ಎಸೆತಗಳಲ್ಲಿ 70 ರನ್ ಕಲೆಹಾಕಿ ಉತ್ತಮ ಇನ್ನಿಗ್ಸ್ ಕಟ್ಟಿದ್ದರು. ಇದಕ್ಕೆ ಸೂರ್ಯಕುಮಾರ್ ಯಾದವ್ ಜೊತೆಯಾದರು. ಇಬ್ಬರ ಸಾಂಘಿಕ ಬ್ಯಾಟಿಂಗ್ ಪ್ರದರ್ಶನದಿಂದ 97 ರನ್‌ಗಳು ಟೀಂ ಇಂಡಿಯಾ ಬತ್ತಳಿಕೆ ಸೇರಿತು. ಈ ವೇಳೆ ರೋಹಿತ್ ಶರ್ಮಾ 41 ಎಸೆತಗಳಲ್ಲಿ 72 ರನ್ (5 ಬೌಂಡರಿ, 4 ಸಿಕ್ಸರ್) ಸಿಡಿಸಿದರೆ, ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 34 ರನ್ ಗಳಿಸಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದ ನಂತರ ಕ್ರೀಸ್‌ಗಿಳಿದ ಯಾರೊಬ್ಬರು ಸ್ಥಿರವಾಗಿ ನಿಲ್ಲಲಿಲ್ಲ. ಹಾರ್ದಿಕ್ ಪಾಂಡ್ಯ 17 ರನ್, ರಿಷಭ್ ಪಂತ್ 17 ರನ್, ದೀಪಕ್ ಹೂಡಾ 3 ರನ್ ಗಳಿಸಿದರು. ಕೊನೆಯಲ್ಲಿ ಬಂದ ಅಶ್ವಿನ್ 7 ಎಸೆತಗಳಲ್ಲಿ 15 ರನ್ ಗಳಿಸಿದರು. ಇದು ಟೀಂ ಇಂಡಿಯಾ 170 ರನ್‌ಗಳ ಗಡಿ ದಾಟಲು ನೆರವಾಯಿತು.
ಬೌಲಿಂಗ್‌ನಲ್ಲಿ ಶ್ರೀಲಂಕಾ ತಂಡದ ಪರ ದಿಲ್ಶನ್ ಮಧುಶಂಕ 4 ಓವರ್‌ಗಳಲ್ಲಿ 24 ರನ್ ನೀಡಿ 3 ವಿಕೆಟ್ ಗಳಿಸಿದರು. ಚಮಿಕಾ ಕರುಣಾರತ್ನೆ 4 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರು. ನಾಯಕ ದಸುನ್ ಶನಕ 2 ಓವರ್‌ಗಳಲ್ಲಿ 26 ನೀಡಿ 2 ವಿಕೆಟ್ ಪಡೆದರು. ಮಹೀಶ್ ತೀಕ್ಷಣ ಒಂದು ವಿಕೆಟ್ ಪಡೆದುಕೊಂಡರು.