ನವದೆಹಲಿ: ಜಿಯೋ ಸೇವೆ ಆರಂಭಗೊಂಡ ನಂತರ ಡೇಟಾ ವಾರ್ ಶುರುವಾಗಿ ಉಳಿದ ಟೆಲಿಕಾಂ ಕಂಪನಿಗಳು ನಷ್ಟ ಅನುಭವಿಸಿದ್ದು ಈಗ ನಿಧನವಾಗಿ ದರ ಏರಿಕೆ ಮಾಡಲು ಮುಂದಾಗುತ್ತಿದೆ. ಏರ್‌ಟೆಲ್, ವೊಡಾಫೋನ್ ಕಂಪನಿಗಳು ಈಗಾಗಲೇ ಡೇಟಾ ದರ ಏರಿಸಿವೆ. ಈಗ ದರ ಏರಿಕೆಯ ಸಮರ ಆರಂಭಗೊಂಡಿದ್ದರೂ ಈ ‘ಹೈಕ್ ವಾರ್’ ನಲ್ಲಿ ಜಿಯೋಗೆ ಲಾಭವಾಗಲಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.
ಹೌದು. ಈಗಾಗಲೇ ವೊಡಾಫೋನ್ ಮತ್ತು ಏರ್‌ಟೆಲ್ ಕಂಪನಿಗಳು ಶೇ.20-41 ಅಂದಾಜಿನಲ್ಲಿ ಡೇಟಾ ಪ್ಯಾಕ್ ಗಳ ದರ ಏರಿಕೆ ಮಾಡಿವೆ. ಜಿಯೋ ಈ ಹಿಂದೆಯೇ ತಿಳಿಸಿದಂತೆ ಉಳಿದ ಕಂಪನಿಗಳ ದರವನ್ನು ನೋಡಿಕೊಂಡು ದರವನ್ನು ಏರಿಸಲಾಗುವುದು ಎಂದು ತಿಳಿಸಿತ್ತು. ಅದರಂತೆ ಡಿ.6 ರಿಂದ ಹೊಸ ದರದ ಪ್ಲ್ಯಾನ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.
Advertisement
Advertisement
ಈ ಮಧ್ಯೆ ಪ್ರಸಿದ್ಧ ಪ್ಲ್ಯಾನ್‍ಗಳ ದರವನ್ನು ಶೇ.40 ರಷ್ಟು ಏರಿಸುವುದಿಲ್ಲ. ಬದಲಾಗಿ ಶೇ.25 – 30 ರಷ್ಟು ಏರಿಸಬಹುದು ಎಂದು ಬ್ಯಾಂಕ್ ಆಫ್ ಅಮೇರಿಕಾ ಮೆರಿಲ್ ಲಿಂಚ್ ವರದಿ ತಿಳಿಸಿದೆ. ಜಿಯೋ ಈಗ ಹೊಸ ಪ್ಲ್ಯಾನ್ ಬಗ್ಗೆ ಮಾಹಿತಿ ಪ್ರಕಟಿಸಿದೆ. ಡಿ.6 ರಂದು ಆಲ್ ಇನ್ ಒನ್ ಪ್ಲ್ಯಾನ್ ಆರಂಭಿಸುತ್ತಿದ್ದೇವೆ. 6 ರೀತಿ ದರ ಇರುವ ಈ ಪ್ಲ್ಯಾನ್ ನಲ್ಲಿ ಅನ್ ಲಿಮಿಟೆಡ್ ಕರೆ ಮತ್ತು ಡೇಟಾ ಸಿಗಲಿದೆ. ಈ ಹಿಂದಿನ ಪ್ಲ್ಯಾನ್ ಗಳಿಗೆ ಹೋಲಿಸಿದರೆ ಇದರಿಂದ ಶೇ.300 ರಷ್ಟು ಪ್ರಯೋಜನವಾಗಲಿದೆ ಎಂದು ತಿಳಿಸಿದೆ.
Advertisement
ಈಗ ದರ ಏರಿಕೆಯಾದರೂ ಉಳಿದ ಕಂಪನಿಗಳ ದರಕ್ಕೆ ಹೋಲಿಸಿದರೆ ಜಿಯೋ ಆಯ್ದ ಪ್ಯಾಕ್ ಗಳ ಬೆಲೆ ಶೇ.20- 30 ರಷ್ಟು ಕಡಿಮೆ ಇರಲಿದೆ. ನ್ಯಾಯಯುತ ಬಳಕೆ ರೂಪದಲ್ಲಿ ಜಿಯೋ ದರಗಳು ನಿಯಂತ್ರಣದಲ್ಲಿ ಇರದೇ ಇದ್ದರೆ ಟೆಲಿಕಾಂ ಕಂಪನಿಗಳು ಪ್ಲ್ಯಾನ್‍ಗಳು ತಲೆಕೆಳಗಾಬಹುದು ಎಂದು ಬ್ಯಾಂಕ್ ಆಫ್ ಅಮೇರಿಕಾ ಮೆರಿಲ್ ಲಿಂಚ್ ಅಭಿಪ್ರಾಯಪಟ್ಟಿದೆ.
Advertisement
ಜಿಯೋ ಡೇಟಾ ದರ ಸಮರ ಆರಂಭಗೊಂಡ ಬಳಿಕ ಭಾರತದಲ್ಲಿ ಹಲವು ಕಂಪನಿಗಳು ದೊಡ್ಡ ಕಂಪನಿಗಳ ಜೊತೆ ವಿಲೀನಗೊಂಡಿತ್ತು. ಜೊತೆಗೆ ಬಳಕೆದಾರರು ಜಿಯೋಗೆ ಪೋರ್ಟ್ ಮಾಡಿದ್ದರು. ಪರಿಣಾಮ ದೇಶದ ಎರಡನೇ ಅತಿ ದೊಡ್ಡ ಕಂಪನಿಯಾಗಿ ಜಿಯೋ ಹೊರ ಹೊಮ್ಮಿದೆ. ಈಗ ದರ ಏರಿಕೆಯ ಸಮರದಲ್ಲಿ ಯಾವ ಟೆಲಿಕಾಂ ಕಂಪನಿಗೆ ಲಾಭವಾಗಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ: ಗ್ರಾಹಕರಿಗೆ ಉಚಿತ ಡೇಟಾ ನೀಡಿದ್ದ ಜಿಯೋಗೆ ಆಗಿರುವ ನಷ್ಟ ಎಷ್ಟು ಗೊತ್ತೆ?
ಮಾರುಕಟ್ಟೆಯಲ್ಲಿ ಜಿಯೋಗೆ ಸ್ಪರ್ಧೆ ನೀಡಲು ಮೂರು ವರ್ಷಗಳಿಂದ ದರವನ್ನು ಇಳಿಸಿದ್ದ ಟೆಲಿಕಾಂ ಕಂಪನಿಗಳು ಈಗ ದರ ಏರಿಸುತ್ತಿವೆ. ವೊಡಾಫೋನ್ ಐಡಿಯಾ, ಏರ್‌ಟೆಲ್ ಕಳೆದ ವಾರ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿ ಕಂಪನಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬೆಲೆ ಏರಿಕೆ ಮಾಡಲಾಗುವುದು ಎಂದು ಹೇಳಿಕೊಂಡಿತ್ತು.
ಟೆಲಿಕಾಂ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆ ಆಗುತ್ತಲೇ ಇರುತ್ತದೆ. ಹೀಗಾಗಿ ಹೊಸತನಕ್ಕೆ ತೆರೆಯಬೇಕಾದರೆ ಕೋಟ್ಯಂತರ ರೂ. ಹಣ ಹೂಡಬೇಕಾಗುತ್ತದೆ. ನಷ್ಟದಲ್ಲಿದ್ದುಕೊಂಡು ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಕಂಪನಿಗಳು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿತ್ತು.
ವಿಶ್ವದಲ್ಲಿ ಈಗ ಭಾರತದಲ್ಲಿ ಅತಿ ಕಡಿಮೆ ದರದಲ್ಲಿ ಡೇಟಾ ಲಭ್ಯವಿದೆ. ಜಿಯೋಗೆ ಸ್ಪರ್ಧೆ ನೀಡಲು ಡೇಟಾ ಮತ್ತು ಕರೆ ದರವನ್ನು ಕಡಿತಗೊಳಿಸಿದ ಪರಿಣಾಮ ಟೆಲಿಕಾಂ ಕಂಪನಿಗಳು ಭಾರೀ ನಷ್ಟಕ್ಕೆ ತುತ್ತಾಗಿವೆ.
ವೊಡಾಫೋನ್ ಸೆಪ್ಟೆಂಬರಿಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ 50,921 ರೂ. ಕೋಟಿಗಳಷ್ಟು ನಷ್ಟ ದಾಖಲಿಸಿದ್ದರೆ, ಭಾರ್ತಿ ಏರ್‌ಟೆಲ್ 23,045 ಕೋಟಿ ರೂ. ನಷ್ಟ ಅನುಭವಿಸಿದೆ. ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ತರಂಗಾಂತರ ಬಳಕೆ ಮತ್ತು ಲೈಸೆನ್ಸ್ ಶುಲ್ಕವನ್ನು ದಂಡ, ಬಡ್ಡಿ ಜತೆ ಪಾವತಿಸಬೇಕಿದೆ. ತಮ್ಮ ಆದಾಯದ ಬಹಭಾಗವನ್ನು ಪ್ರತ್ಯೇಕವಾಗಿ ತೆಗೆದಿರಿಸಿದ ಪರಿಣಾಮ ಟೆಲಿಕಾಂ ಕಂಪನಿಗಳ ನಷ್ಟ ಭಾರೀ ಏರಿಕೆಯಾಗಿದೆ. ಶುಲ್ಕ ಮತ್ತು ದಂಡ ಪಾವತಿಸುವಂತೆ ಸುಪ್ರೀಂಕೋರ್ಟ್ ತೀರ್ಪು ಪರಾಮರ್ಶೆಗೆ ಅರ್ಜಿ ಸಲ್ಲಿಸಲು ವೊಡಾಫೋನ್ ಸಿದ್ಧತೆ ನಡೆಸುತ್ತಿದೆ. ಇದನ್ನೂ ಓದಿ: ಜಿಯೋ ಎಷ್ಟು ಲಾಭವಾಗಿದೆ? ಭಾರತದಲ್ಲಿ ಇತಿಹಾಸ ಸೃಷ್ಟಿಸಿದ ರಿಲಯನ್ಸ್
ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 92 ಸಾವಿರ ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು.
ಭಾರತಿ ಏರ್‌ಟೆಲ್ 21,682 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 28,300 ಕೋಟಿ ರೂ., ರಿಲಯನ್ಸ್ ಕಮ್ಯೂನಿಕೇಷನ್ಸ್ 16,456 ಕೋಟಿ ರೂ., ಬಿಎಸ್‍ಎನ್‍ಎಲ್ 2,098 ಕೋಟಿ ರೂ. ಹಾಗೂ ಎಂಟಿಎನ್‍ಎಲ್ 2,537 ಕೋಟಿ ರೂ. ಪಾವತಿಸಬೇಕಾಗಿದೆ. ಇದನ್ನೂ ಓದಿ: ಕೇಂದ್ರದಿಂದ ಟೆಲಿಕಾಂ ಕಂಪನಿಗಳಿಗೆ ಬಿಗ್ ರಿಲೀಫ್
ಏನಿದು ಎಜಿಆರ್?
ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.