– ದೇಶದ ಏರ್‍ಪೋರ್ಟ್‍ಗಳಿಗೆ ಇನ್ಮುಂದೆ ವ್ಯಕ್ತಿಗಳ ಹೆಸರಿಲ್ಲ
– ಹೊಸ ಮಸೂದೆಗೆ ಕೇಂದ್ರ ಸರ್ಕಾರ ಸಿದ್ಧತೆ
ಬೆಂಗಳೂರು: ಇನ್ಮುಂದೆ ವಿಮಾನ ನಿಲ್ದಾಣಗಳನ್ನ ಆಯಾ ಊರಿನ ಹೆಸರಿನಿಂದಲೇ ಕರೆಯಬೇಕು. ಇಷ್ಟು ದಿನ ಐತಿಹಾಸಿಕ ಪುರುಷರು, ಅಥವಾ ಗಣ್ಯ ವ್ಯಕ್ತಿಗಳ ಹೆಸರನಿಂದ ಕರೆಯುತ್ತಿದ್ದ ವಿಮಾನ ನಿಲ್ದಾಣಗಳ ಹೆಸರುಗಳು ಇತಿಹಾಸದ ಪುಟ ಸೇರಲಿವೆ. ಈ ಮೂಲಕ ಬೆಂಗಳೂರು ವಿಮಾನ ನಿಲ್ದಾಣವನ್ನು ಕೆಂಪೇಗೌಡ ಏರ್‍ಪೋರ್ಟ್ ಮಾಡಿದ್ದ ಮೋದಿ ಸರ್ಕಾರ, ಆ ಹೆಸರನ್ನ ಅಳಿಸೋಕೆ ಮುಂದಾಗಿದೆ.
ಕೆಂಪೇಗೌಡ ಏರ್‍ಪೋರ್ಟ್, ಇಂದಿರಾಗಾಂಧಿ ಏರ್‍ಪೋರ್ಟ್, ರಾಜೀವ್ ಗಾಂಧಿ ಏರ್‍ಪೋರ್ಟ್, ಅಂಬೇಡ್ಕರ್ ಏರ್‍ಪೋರ್ಟ್ ಅನ್ನೋ ಹೆಸರುಗಳು ಇನ್ಮುಂದೆ ಮೆರಯಾಗಲಿದೆ. ಯಾಕಂದ್ರೆ ಕೇಂದ್ರ ಸರ್ಕಾರ ಹೊಸ ಮಸೂದೆಯೊಂದನ್ನ ಜಾರಿಗೆ ತರುತ್ತಿದೆ. ಯಾವುದೇ ವಿಮಾನ ನಿಲ್ದಾಣಗಳಿಗೆ ವ್ಯಕ್ತಿಗಳ ಹೆಸರನ್ನ ಇಡುವಂತಿಲ್ಲ ಅಂತ ಮಸೂದೆ ಸಿದ್ದಪಡಿಸಿದೆ. ಅಷ್ಟೇ ಅಲ್ಲದೆ ಈ ಮಸೂದೆಯಲ್ಲಿ ಪ್ರಸ್ತುತ ಇರೋ ವಿಮಾನ ನಿಲ್ದಾಣಗಳ ಹೆಸರನ್ನು ಬದಲಾವಣೆ ಮಾಡುವಂತಹ ನಿಯಮವನ್ನು ಅಳವಡಿಸಲಾಗಿದೆ. ಈ ಮಸೂದೆ ಅಂಗೀಕಾರವಾದಲ್ಲಿ ದೇಶದ 24 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಪೈಕಿ 14 ವಿಮಾನ ನಿಲ್ದಾಣಗಳ ಹೆಸರುಗಳನ್ನ ಬದಲಾಯಿಸಬೇಕಾಗುತ್ತದೆ.
Advertisement
ಈಗಾಗಲೇ ಮಸೂದೆಯ ಸಿದ್ಧತೆ ಅಂತಿಮ ರೂಪಕ್ಕೆ ಬಂದಿದ್ದು ಇದೇ ಸಂಸತ್ ಅಧಿವೇಶನದಲ್ಲಿ ಅಥವಾ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಅಂತ ಕೇಂದ್ರ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮೋದಿ ಸರ್ಕಾರವಿದ್ದಾಗಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಬಂತು. ಈಗ ಅದೇ ಸರ್ಕಾರದ ಅವಧಿಯಲ್ಲಿ ಕೆಂಪೇಗೌಡರ ಹೆಸರು ಕಳೆದುಕೊಳ್ಳುವುದು ಸನ್ನಿಹಿತವಾಗ್ತಿದೆ.
Advertisement
ಯಾಕೆ ಈ ಬದಲಾವಣೆ?: ಭಾರತದ ಗಣ್ಯರು, ರಾಜ್ಯದ ಪ್ರಸಿದ್ಧ ವ್ಯಕ್ತಿಗಳ ಹೆಸರಿನ ಬಗ್ಗೆ ಮಾಹಿತಿ ಇಲ್ಲದ ವಿದೇಶಿಯರಿಗೆ ನಿಲ್ದಾಣಗಳ ಹೆಸರನ್ನು ಗುರುತಿಸಲು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಪ್ರಸ್ತಾಪವನ್ನು ಸಲ್ಲಿಸಲಾಗಿತ್ತು.
Advertisement
ಉಗ್ರ ಹೋರಾಟ: ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಉಗ್ರವಾಗಿ ಖಂಡಿಸಿರೋ ರಾಜ್ಯ ಒಕ್ಕಲಿಗರ ಸಂಘ, ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರದ ಈ ಮಸೂದೆಯನ್ನು ಒಪ್ಪಲು ಸಾಧ್ಯವಿಲ್ಲ ಅಂತ ಹೇಳಿದೆ. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ. ಹಾಗಾಗಿ ಅವರ ಹೆಸರು ಇಡೀ ಪ್ರಪಂಚಕ್ಕೆ ಗೋತ್ತಾಗಬೇಕು ಅನ್ನೋ ದೃಷ್ಠಿಯಿಂದ ಆ ಹೆಸರನ್ನು ಇಡಲಾಗಿದೆ. ಅಕಸ್ಮಾತ್ ಸರ್ಕಾರ ಏನಾದ್ರೂ ಈ ಹೆಸರನ್ನು ಬದಲಾವಣೆ ಮಾಡಿದ್ರೆ ಉಗ್ರ ಹೋರಾಟ ಮಾಡಬೇಕಾಗುತ್ತೆ ಅಂತ ಸಂಘದ ನಿರ್ದೇಶಕ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.