– ಕ್ವಾರಂಟೈನ್‍ಗೆ ಸರ್ಕಾರದ ಸಿದ್ಧತೆ
– ಮೇ ಏಳರಿಂದ ವಿದೇಶದಲ್ಲಿರುವ ಭಾರತೀಯರ ಏರ್‌ಲಿಫ್ಟ್
ನವದೆಹಲಿ: ದೇಶದಲ್ಲಿ ಕೊರೋನಾ ವಿಜೃಂಭಿಸುತ್ತಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಹಂತ ಹಂತವಾಗಿ ದೇಶಕ್ಕೆ ಕರೆತರಲು ಕರೆತರಲು ಯೋಜನೆ ರೂಪಿಸಿದೆ.
ವಿದೇಶಗಳಲ್ಲಿ 1.95 ಕೋಟಿ ಭಾರತೀಯರು ನೆಲೆಸಿದ್ದು, 15 ಲಕ್ಷ ಮಂದಿ ದೇಶಕ್ಕೆ ವಾಪಸ್ ಆಗಲು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 2.5 ಲಕ್ಷ ಭಾರತೀಯರನ್ನು ಹಂತ ಹಂತವಾಗಿ ದೇಶಕ್ಕೆ ವಾಪಸ್ ಕರೆತರಲು ಕೇಂದ್ರ ಸರ್ಕಾರ ಮುಂದಾಗಿದೆ.
Advertisement
Advertisement
ಮೇ 7ರಿಂದ ಮೇ 13ರವರೆಗೂ ಮೊದಲ ಹಂತದ ಆಪರೇಷನ್ ಏರ್‌ಲಿಫ್ಟ್ ನಡೆಯಲಿದೆ. ಒಟ್ಟು ಏಳು ದಿನಗಳ ಅವಧಿಯಲ್ಲಿ 64 ವಿಮಾನಗಳ ಮೂಲಕ 12 ದೇಶಗಳಲ್ಲಿ ಸಿಲುಕಿರುವ 14,800 ಭಾರತೀಯಯರನ್ನು ದೇಶಕ್ಕೆ ವಾಪಸ್ ಕರೆತರಲು ಸಿದ್ಧತೆಗಳನ್ನು ನಡೆಸಿದೆ.
Advertisement
ಬೆಂಗಳೂರಿಗೆ 3, ತಿರುವನಂತಪುರಕ್ಕೆ 15, ದೆಹಲಿ, ಚೆನ್ನೈಗೆ ತಲಾ 11, ಹೈದರಾಬಾದ್, ಮುಂಬೈಗೆ ತಲಾ 7 ವಿಮಾನ, ಕೋಲ್ಕತ್ತಾ, ಜೈಪುರಗೆ ತಲಾ 5 ವಿಮಾನಗಳು ವಿದೇಶಗಳಿಂದ ಭಾರತೀಯರನ್ನು ಹೊತ್ತು ತರಲಿವೆ. ಅಮೆರಿಕ, ಇಂಗ್ಲೆಂಡ್, ಸಿಂಗಾಪುರರಲ್ಲಿ 800 ಕನ್ನಡಿಗರು ಸಿಲುಕಿದ್ದು, ಅವರನ್ನು ಮೂರು ವಿಮಾನಗಳ ಮೂಲಕ ಬೆಂಗಳೂರಿಗೆ ಕರೆ ತರತಂದು, ಕ್ವಾರಂಟೈನ್ ಮಾಡಲಾಗುತ್ತದೆ.
Advertisement
ಗಮನಿಸಬೇಕಾದ ಅಂಶ ಅಂದ್ರೆ, ವಿದೇಶಗಳಿಂದ ಬರಲು ಇಚ್ಚಿಸುವವರು ತಮ್ಮ ಪ್ರಯಾಣ ವೆಚ್ಚ, ಕ್ವಾರಂಟೈನ್ ವೆಚ್ಚಗಳನ್ನು ತಾವೇ ಭರಿಸಬೇಕು. ಸರ್ಕಾರ ಯಾವುದೇ ವೆಚ್ಚವನ್ನು ಭರಿಸುವುದಿಲ್ಲ. 2ನೇ ಹಂತದ ಆಪರೇಷನ್ ಏರ್‍ಲಿಫ್ಟ್ ಮೇ 13 ನಂತರ ಶುರುವಾಗಲಿದೆ.
ಯುಎಇ ಮತ್ತು ಮಾಲ್ಡೀವ್ಸ್ ನಲ್ಲಿ ಸಿಲುಕಿದವರನ್ನು ಕರೆತರಲು ನೌಕಾಪಡೆಯ ಐಎನ್‍ಎಸ್ ಜಲಾಶ್ವ, ಐಎನ್‍ಎಸ್ ಮಗರ್ ಈಗಾಗಲೇ ತೆರಳಿವೆ. ಐಎನ್‍ಎಸ್ ಶಾರ್ದೂಲ್ ದುಬೈ ಕಡೆ ತೆರಳಿದೆ. ಈ ಮೂರು ನೌಕೆಗಳು ಕೊಚ್ಚಿ ಬಂದರಿಗೆ ವಾಪಸ್ ಬರಲಿವೆ.
ರಾಜ್ಯಕ್ಕೆ ಕನ್ನಡಿಗರು ಏರ್‌ಲಿಫ್ಟ್
ಬ್ರಿಟನ್, ಅಮೆರಿಕ, ಸಿಂಗಾಪುರದಿಂದ ವಿಮಾನ ವ್ಯವಸ್ಥೆ ಮಾಡಲಾಗುತ್ತಿದ್ದು, ಮೇ 8ರಂದು ಬ್ರಿಟನ್‍ನಿಂದ 250 ಮಂದಿ ಪ್ರಯಾಣ ಮಾಡಲಿದ್ದರೆ, ಮೇ 11ರಂದು ಅಮೆರಿಕದಿಂದ 300 ಮಂದಿ ಹೊರಡಲಿದ್ದಾರೆ. ಮೇ 12ರಂದು ಸಿಂಗಾಪುರದಿಂದ 250 ಮಂದಿ ಬರಲಿದ್ದಾರೆ. ವಿದೇಶಗಳಿಂದ ಬಂದ ಕನ್ನಡಿಗರಿಗೆ 28 ದಿನ ಮಂಗಳೂರು ಮತ್ತು ದೊಡ್ಡಬಳ್ಳಾಪುರದ ಹೊರವಲಯದಲ್ಲಿರುವ ಹೋಟೆಲ್/ ರೆಸಾರ್ಟ್/ ಹಾಸ್ಟೆಲ್‍ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ.
ಯಾವ ದೇಶಗಳಿಂದ ಎಷ್ಟು ವಿಮಾನ?
ಯುಎಇ 10, ಬ್ರಿಟನ್ 7, ಅಮೆರಿಕ 7, ಕತಾರ್ 2, ಸೌದಿ ಅರೇಬಿಯಾ 5, ಸಿಂಗಾಪುರ 5, ಮಲೇಷಿಯಾ 7, ಫಿಲಿಪ್ಪೈನ್ಸ್ 5, ಬಾಂಗ್ಲಾದೇಶ 7, ಬಹರೇನ್ 2, ಕುವೈತ್ 5, ಓಮನ್ ದೇಶದಿಂದ 2 ವಿಮಾನಗಳು ಭಾರತಕ್ಕೆ ಬರಲಿದೆ.