ಪಾಕಿಗೆ ಹೋಗಿ ಬಿರಿಯಾನಿ ತಿಂದು ಬಂದ ನಿಮ್ಮನ್ನು ನಂಬುವುದು ಹೇಗೆ – ಮೋದಿಗೆ ರಮ್ಯಾ ಪ್ರಶ್ನೆ

Public TV
2 Min Read
Ramya Modi

ಬೆಂಗಳೂರು: ಪಾಕಿಸ್ತಾನಕ್ಕೆ ಹೋಗಿ ಹೋಗಿ ಬಿರಿಯಾನಿ ತಿಂದು ಬಂದ ನಿಮ್ಮನ್ನು ನಂಬುವುದು ಹೇಗೆ ಎಂದು ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಪ್ರಶ್ನಿಸಿದ್ದಾರೆ.

ಹಿಂದೆ ನಡೆದ ಸರ್ಕಾರ ಉಗ್ರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಇದು ಹೊಸ ಭಾರತ ಎಂದು ಮೋದಿ ಗುಜರಾತಿನಲ್ಲಿ ಭಾಷಣ ಮಾಡಿದ ವಿಡಿಯೋ ಪ್ರಧಾನ ಮಂತ್ರಿಗಳ ಟ್ವಿಟ್ಟರ್ ಖಾತೆಯಿಂದ ಅಪ್ಲೋಡ್ ಆಗಿತ್ತು.

ಈ ಟ್ವೀಟ್ ಗೆ ರಮ್ಯಾ, 2014ರಲ್ಲಿ ನೀವು ಇದನ್ನೇ ಹೇಳಿ ನಂತರ ಪಾಕಿಸ್ತಾನಕ್ಕೆ ತೆರಳಿ ನವಾಜ್ ಷರೀಫ್ ಜೊತೆ ಬಿರಿಯಾನಿ ತಿಂದು ಮರಳಿದಿರಿ. ಹೀಗಾಗಿ ಈ ಸಮಯದಲ್ಲಿ ನಾವು ನಿಮ್ಮನ್ನು ನಂಬುವುದು ಹೇಗೆ? ನೋಟು ನಿಷೇಧ ಮಾಡಿದರೆ ಭಯೋತ್ಪಾದನೆ ನಿಲ್ಲುತ್ತದೆ ಎಂದು ಹೇಳಿದ್ದೀರಿ. ಆದರೆ ಇದು ಕಾರ್ಯಗತವಾಗಲಿಲ್ಲ. ನನ್ನ ಪ್ರಕಾರ ಸ್ಟ್ರೈಕ್ ಎಲ್ಲರನ್ನು ಹತ್ಯೆ ಮಾಡಿರಬಹುದು ಅಲ್ಲವೇ ಎಂದು ಪ್ರಶ್ನಿಸಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಉಗ್ರರ ಮೇಲಿನ ಏರ್ ಸ್ಟ್ರೈಕ್ ವಿಚಾರವನ್ನು ಪ್ರಶ್ನಿಸಿದವರಿಗೆ ಪ್ರಧಾನಿ ಮೋದಿ, ಉಗ್ರರ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಯನ್ನು ಸಂಶಯದಿಂದ ನೋಡುತ್ತೀರಿ. ನಿಮಗೆ ಅವರ ಮೇಲೆ ನಂಬಿಕೆ ಇಲ್ಲವೇ? ನಮ್ಮ ಸೇನೆಯ ಬಗ್ಗೆ ನಿಮಗೆ ಹೆಮ್ಮೆ ಇಲ್ಲವೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಯಾಗಿ ರಮ್ಯಾ ನಮಗೆ ಸೇನೆ ಮೇಲೆ ನಂಬಿಕೆಯಿದೆ. ಸೇನೆ ಯಾವಾಗಲೂ ದಾಖಲೆ ಇಟ್ಟುಕೊಂಡು ಮಾತನಾಡುತ್ತದೆ. ಆದರೆ ನಮಗೆ ನಿಮ್ಮ ಮೇಲೆ ನಂಬಿಕೆಯಿಲ್ಲ. ನೀವು ಸದಾ ಸುಳ್ಳು ಹೇಳುತ್ತೀರಿ ಎಂದು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ರಮ್ಯಾ ಟ್ವೀಟ್ ಗೆ ನೆಟ್ಟಿಗರು ಖಾರವಾಗಿ ಟ್ವೀಟ್ ಮಾಡುತ್ತಿದ್ದಾರೆ. “ನಿನಗೆ ಪಾಕಿಸ್ತಾನದಲ್ಲಿ ಸ್ವರ್ಗ ತೋರಿಸಿದವರು ಯಾರು” ಎಂದು ಒಬ್ಬರು ಪ್ರಶ್ನೆ ಮಾಡಿದರೆ ಇನ್ನೊಬ್ಬರು,”ನೀನು ಹೋಗಿ ಪಾಕಿಸ್ತಾನದಲ್ಲಿ ಸ್ವರ್ಗ ಕಂಡು ಬಂದಿಲ್ವ? ಮೊನ್ನೆ ನಿಮ್ಮ ಸಿಧು ಹೋಗಿಲ್ವ? ಮೋದಿ ಹೋಗಿದ್ದು ನಿಜ. ಬಿರಿಯಾನಿ ತಿಂದಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಏನು? ಎಲ್‍ಕೆಜಿ ಮಗು ರೀತಿ ಸಿಲ್ಲಿ ಪ್ರಶ್ನೆ ಕೇಳ್ತಾಳೆ ಎಂದು ಟ್ವೀಟ್ ಮಾಡಿ ಗರಂ ಆಗಿ ಪ್ರಶ್ನೆ ಮಾಡಿದ್ದಾರೆ.

ರಮ್ಯಾ ಅವರ ಈ ಟ್ವೀಟ್ ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article