ಅಹಮದಾಬಾದ್: ʻಮೇ ಡೇ..ʼ ಇದು ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ (Air India) B787 ವಿಮಾನ ಅಹಮದಾಬಾದ್‌ನಲ್ಲಿ ಪತನಗೊಳ್ಳುವ ಕೆಲವೇ ಕ್ಷಣಕ್ಕೂ ಮುನ್ನ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ (ATC)ಗೆ ಕಳುಹಿಸಿದ ಕೊನೆಯ ಸಂದೇಶ ಇದಾಗಿತ್ತು.
ಹೌದು. ರನ್ ವೇ 23ರಿಂದ ವಿಮಾನ ಟೇಕಾಫ್ ಆಗಿತ್ತು. ಹಾರಿದ ಮೂರ್ನಾಲ್ಕು ನಿಮಿಷಗಳಲ್ಲೇ ಪೈಲಟ್ ʻಮೇ ಡೇ.. ಮೇ ಡೇ..ʼ (MAYDAY) ಎಂದು ಎಟಿಸಿಗೆ ಕೊನೆಯ ಸಂದೇಶ ಕೊಟ್ಟಿದ್ದರು. MAYDAY ಅಂದ್ರೆ ವಿಮಾನ ಡೇಂಜರ್‌ನಲ್ಲಿದ್ದು ತುರ್ತು ಅವಶ್ಯಕತೆ ಬಗ್ಗೆ ಎಮರ್ಜೆನ್ಸಿ ಕರೆ ಮಾಡುವುದು. ಎಟಿಸಿ ಮತ್ತೆ ಕರೆ ಮಾಡಿದಾಗ ವಾಪಸ್ ಪ್ರತಿಕ್ರಿಯೆ ಬಂದಿರಲಿಲ್ಲ. ಪೈಲಟ್ ಮೇ ಡೇ ಸಂದೇಶ ಕೊಟ್ಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತ್ತು ಎಂದು ವರದಿಗಳು ತಿಳಿಸಿವೆ.
ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಏರ್ ಇಂಡಿಯಾ ವಿಮಾನ ಲಂಡನ್‌ಗೆ (London) ತೆರಳಬೇಕಿತ್ತು. ಈ ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರಿದ್ದು, ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದೇ ವಿಮಾನದಲ್ಲಿದ್ದರು ಎಂದು ಹೇಳಲಾಗುತ್ತಿದೆ. 169 ಭಾರತೀಯರು, 53 ಯುಕೆ ಪ್ರಯಾಣಿಕರು, ಪೋರ್ಚುಗೀಸ್ ದೇಶದ 7, ಓರ್ವ ಕೆನಡಿಯನ್ ವಿಮಾನದಲ್ಲಿದ್ದರು. ಆದ್ರೆ ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ವಿಮಾನ ನೆಲಕ್ಕಪ್ಪಳಿಸುತ್ತಿದ್ದಂತೆ ಭಾರೀ ಸ್ಪೋಟ ಸಂಭವಿಸಿದ್ದು, ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ವಿಮಾನದ ಅವಶೇಷಗಳು ವಿಮಾನ ನಿಲ್ದಾಣದ ಸುತ್ತಲೂ ಬಿದ್ದಿದ್ದು, ರಕ್ಷಣಾ ಕಾರ್ಯಚರಣೆ ಆರಂಭಗೊಂಡಿದೆ.
ಇನ್ನೂ ಪತನಗೊಂಡಿರುವ ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್ ಸುಮೀತ್ ಸಭರ್ವಾಲ್, ಬರೋಬ್ಬರಿ 8,200 ಗಂಟೆಗಳ ಹಾರಾಟ ಅನುಭವ ಹೊಂದಿದ್ದರು. ಅದೇ ರೀತಿ ಸಹ-ಪೈಲಟ್‌ಗೆ 1,100 ಗಂಟೆಗಳ ಹಾರಾಟದ ಅನುಭವವಿತ್ತು. ಎಟಿಸಿ ಪ್ರಕಾರ, ವಿಮಾನವು ಅಹಮದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ 23ರಿಂದ ಟೇಕಾಫ್ ಆಗಿತ್ತು.