ಐಎಸ್‍ಐ ಏಜೆಂಟ್‍ಗಳ ಹನಿಟ್ರ್ಯಾಪ್‍ಗೆ ಒಳಗಾಗಿ ದಾಖಲೆಗಳನ್ನು ನೀಡಿದ ಐಎಎಫ್ ಅಧಿಕಾರಿಯ ಬಂಧನ

Public TV
2 Min Read
arun marwah iaf 3

ನವದೆಹಲಿ: ಪಾಕಿಸ್ತಾನದ ಗೂಢಚಾರಿಕಾ ಸಂಸ್ಥೆ ಐಎಸ್‍ಐ ಗೆ ಮಾಹಿತಿ ಸೋರಿಕೆ ಮಾಡಿದ ಆರೋಪದಡಿ ಭಾರತೀಯ ವಾಯುಪಡೆಯ ಅಧಿಕಾರಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ವಾಯುಪಡೆ ವಿಂಗ್ ಕಾಮಾಂಡರ್ ಆರುಣ್ ಮರ್ವಾಹಾ (51) ಬಂಧಿತ ಅಧಿಕಾರಿ. ಪಾಕಿಸ್ತಾನ ಐಎಸ್‍ಐ ನ ಇಬ್ಬರು ಏಜೆಂಟ್‍ಗಳು ತಾವು ಮಹಿಳೆಯರೆಂದು ಬಿಂಬಿಸಿ ಹನಿಟ್ರ್ಯಾಪ್ ಮಾಡಿ ವಾಟ್ಸಪ್ ಮೂಲಕ ವಾಯುಪಡೆಯ ಪ್ರಮುಖ ದಾಖಲೆಗಳನ್ನ ಪಡೆದಿದ್ದಾರೆ ಎಂದು ವರದಿಯಾಗಿದೆ.

ಕಾಮಾಂಡರ್ ಆರುಣ್ ದೆಹಲಿಯ ಐಎಎಫ್ ಮುಖ್ಯಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಇವರ ವಿರುದ್ಧ ಅಫಿಶಿಯಲ್ ಸೀಕ್ರೆಟ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದರೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಗಳಿದೆ. ಆರುಣ್ ಮುಂದಿನ ವರ್ಷ ಕೆಲಸದಿಂದ ನಿವೃತ್ತಿ ಹೊಂದಬೇಕಿತ್ತು ಎಂದು ವರದಿಯಾಗಿದೆ.

arun marwah iaf

ಮಹಿಳೆಯರ ಹೆಸರಲ್ಲಿ ನಕಲಿ ಖಾತೆ ಹೊಂದಿದ್ದ ಪಾಕಿಸ್ತಾನದ ಐಎಸ್‍ಐ ಏಜೆಂಟ್‍ಗಳ ಜೊತೆ ಅಧಿಕಾರಿ ಫೇಸ್‍ಬುಕ್ ನಲ್ಲಿ ಕೆಲ ತಿಂಗಳ ಹಿಂದೆ ಸ್ನೇಹ ಬೆಳೆಸಿಕೊಂಡಿದ್ದರು. ನಂತರ ವಾಟ್ಸಪ್‍ನಲ್ಲಿ ನಿರಂತರ ಚಾಟ್ ಮಾಡುತ್ತಿದ್ದರು. ಸಲಿಗೆಯ ಸಂದೇಶಗಳನ್ನ ವಿನಿಮಯ ಮಾಡಿಕೊಂಡಿದ್ದರು. ಏಜೆಂಟ್‍ಗಳು ಅಧಿಕಾರಿಯ ವಿಶ್ವಾಸ ಗಳಿಸಿದ ಬಳಿಕ, ಅಶ್ಲೀಲ ಫೋಟೋಗಳಿಗೆ ಬದಲಿಯಾಗಿ ರಹಸ್ಯ ಮಾಹಿತಿಯುಳ್ಳ ದಾಖಲೆಗಳನ್ನ ಅಧಿಕಾರಿಯಿಂದ ಪಡೆದಿದ್ದಾರೆ. ಅಧಿಕಾರಿ ಹಂಚಿಕೊಂಡ ಮಾಹಿತಿ ಸೈಬರ್ ವಾರ್ ಫೇರ್, ಸ್ಪೇಸ್ ಮತ್ತು ವಿಶೇಷ ಕಾರ್ಯಾಚರಣೆಗಳದ್ದಾಗಿದೆ ಎಂದು ವರದಿಯಾಗಿದೆ.

ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ಕೆಲವು ವಾರಗಳ ಹಿಂದೆ ಈ ಬಗ್ಗೆ ಪತ್ತೆ ಮಾಡಿದ ನಂತರ ಆಂತರಿಕ ತನಿಖೆಗೆ ಆದೇಶಿಸಿದ್ದರು. ಇದರಲ್ಲಿ ಆರುಣ್ ಅವರ ಪಾತ್ರವಿರುವುದು ಸಾಬೀತಾದ ಬಳಿಕ ವಾಯುಪಡೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ. 10 ದಿನಗಳ ವಿಚಾರಣೆಯ ಬಳಿಕ ವಾಯುಪಡೆಯ ಕೌಂಟರ್ ಇಂಟೆಲಿಜೆನ್ಸ್ ವಿಭಾಗ ಪ್ರಕರಣವನ್ನ ಪೊಲೀಸರಿಗೆ ಹಸ್ತಾಂತರಿಸಿದೆ.

arun marwah iaf2

ಗುರುವಾರ ಆರುಣ್ ರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ, ಅರುಣ್ ಅವರನ್ನ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಕಟ್ಟಡದೊಳಗೆ ಮೊಬೈಲ್ ಬಳಕೆ ನಿಷೇಧವಿದ್ದರೂ ಬಂಧನದ ವೇಳೆ ಅರುಣ್ ಮೊಬೈಲ್‍ನೊಂದಿಗೆ ಕಚೇರಿಯತ್ತ ಹೆಜ್ಜೆ ಹಾಕುತ್ತಿದ್ದರು. ಪಾಕಿಸ್ತಾನದ ಇನ್ನೂ ದೊಡ್ಡ ಬೇಹುಗಾರಿಕೆಯಲ್ಲಿ ಅರುಣ್ ಪಾತ್ರವಿದೆಯಾ ಎಂಬ ಬಗ್ಗೆ ವಾಯುಪಡೆಯ ಕೌಂಟರ್ ಇಂಟೆಲಿಜೆನ್ಸ್ ವಿಭಾಗ ಪರಿಶೀಲನೆ ನಡೆಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *