Connect with us

Latest

ಮಿಗ್ 21 ಯುದ್ಧ ವಿಮಾನದಲ್ಲಿ ಮಿಂಚಿದ ಅಭಿನಂದನ್

Published

on

ಲಕ್ನೋ: ಇಂದು ಭಾತರತೀಯ ವಾಯು ಪಡೆ(ಐಎಎಫ್) 87ನೇ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಾಜಿಯಾಬಾದ್‍ನ ಹಿಂಡನ್ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಕಲರವ ಜೋರಾಗಿದ್ದು, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಮಿಗ್-21 ಬೈಸನ್ ಯುದ್ಧ ವಿಮಾನ ಹಾರಾಟ ನಡೆಸಿ ಎಲ್ಲರ ಗಮನ ಸೆಳೆದರು.

87ನೇ ಐಎಎಫ್ ದಿನಾಚರಣೆ ಅಂಗವಾಗಿ ಹಿಂಡನ್ ಏರ್‌ಬೇಸ್‌ನಲ್ಲಿ ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್ ಗಳ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮದಲ್ಲಿ ವಾಯುಸೇನೆ ಮುಖ್ಯಸ್ಥ ಆರ್. ಕೆ ಎಸ್ ಬದೌರಿಯಾ, ಭೂಸೇನೆ ಮುಖ್ಯಸ್ಥ ಬಿಪಿನ್ ರಾವತ್, ನೌಕಾಪಡೆ ಮುಖ್ಯಸ್ಥ ಕರಂಬಬೀರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವವನ್ನು ವೀಕ್ಷಿಸಲು ಸಾವಿರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದು, ಕಾರ್ಯಕ್ರಮದಲ್ಲಿ ಅಭಿನಂದನ್ ಅವರ ಉಪಸ್ಥತಿ ಜನರ ಉತ್ಸಾಹ ಹೆಚ್ಚಿಸಿತು. ಇದನ್ನೂ ಓದಿ:87ನೇ ವಾಯಪಡೆಯ ದಿನಾಚರಣೆಯಲ್ಲಿ ಭಾಗವಹಿಸಿದ ಕ್ಯಾಪ್ಟನ್ ಸಚಿನ್ ತೆಂಡೂಲ್ಕರ್

ಏರ್ ಶೋಗೆ ಅಭಿನಂದನ್ ಪ್ರವೇಶಿಸುತ್ತಿದ್ದಂತೆ ಏರ್‌ಬೇಸ್‌ನಲ್ಲಿ ಸಾರ್ವಜನಿಕರು ಚಪ್ಪಾಳೆಗಳ ಸುರಿಮಳೆಗೈದರು. ಈ ಮಧ್ಯೆ ಅಭಿನಂದನ್ ಅವರು ಮಿಗ್-21 ಯುದ್ಧ ವಿಮಾನ ಹಾರಾಟ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು. ಅಲ್ಲದೆ ಇದೇ ಮೊದಲ ಬಾರಿಗೆ ವಿಶ್ವದ ಅತ್ಯಂತ ಅಪಾಯಕಾರಿ ಯುದ್ಧ ಹೆಲಿಕಾಪ್ಟರ್ ಅಪಾಚೆ ತನ್ನ ಶಕ್ತಿ ಪ್ರದರ್ಶನ ತೋರಿದ್ದು ವಿಶೇಷವಾಗಿತ್ತು. ಚಿನೂಕ್ ಹೆಲಿಕಾಪ್ಟರ್‌ಗಳು ಕೂಡ ಆಗಸದಲ್ಲಿ ಶಕ್ತಿ ಪ್ರದರ್ಶಿಸಿದವು. ಜೊತೆಗೆ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದ ಆರ್ಭಟವನ್ನು ಕಾರ್ಯಕ್ರಮದಲ್ಲಿ ನೆರೆದವರು ಕಣ್ತುಂಬಿಕೊಂಡರು. ಇದನ್ನೂ ಓದಿ:ಐಎಎಫ್‍ನ ಮೊದಲ ‘ರಫೇಲ್’ಗೆ ರಾಜನಾಥ್ ಸಿಂಗ್ ಆಯುಧ ಪೂಜೆ

ಫೆ. 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರಿದ್ದ ಬಸ್ಸಿನ ಮೇಲೆ ಜೈಷ್ ಉಗ್ರನೊಬ್ಬ ಆತ್ಮಾಹುತಿ ದಾಳಿ ನಡೆಸಿ 40ಕ್ಕೂ ಹೆಚ್ಚು ಮಂದಿ ಯೋಧರನ್ನು ಬಲಿಪಡೆದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ವಾಯು ಪಡೆ ಪಾಕಿಸ್ತಾನದ ಬಾಲಕೋಟ್‍ನಲ್ಲಿ ಜೈಷ್ ಉಗ್ರರ ನೆಲೆಗಳ ಮೇಲೆ ಏರ್ ಸ್ಟ್ರೈಕ್ ನಡೆಸಿ ಉಗ್ರರನ್ನು ಸದೆಬಡೆದಿತ್ತು.

ಫೆ. 27ರಂದು ಪಾಕಿಸ್ತಾನ ಎಫ್-16 ಯುದ್ಧ ವಿಮಾನವನ್ನು ತನ್ನ ಮಿಗ್-21 ಯುದ್ಧ ವಿಮಾನದ ಮೂಲಕ ಹೊಡೆದುರುಳಿಸಿದ ನಂತರ ಅಭಿನಂದನ್ ಅವರು ನ್ಯಾಷನಲ್ ಹೀರೋ ಆಗಿ ಹೊರಹೊಮ್ಮಿದ್ದರು. ಬಾಲಾಕೋಟ್ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ತನ್ನ ಎಫ್-16 ಯುದ್ಧ ವಿಮಾನದ ಮೂಲಕ ಭಾರತವನ್ನು ಗುರಿಯಾಗಿಸಿಕೊಂಡು ವಾಯು ದಾಳಿ ನಡೆಸಿದ ಸಂದರ್ಭದಲ್ಲಿ ಅಭಿನಂದನ್ ಮಿಗ್-21 ವಿಮಾನದ ಮೂಲಕ ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅಭಿನಂದನ್ ಅವರ ಮಿಗ್-21 ವಿಮಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತನಗೊಂಡಿತ್ತು. ಆಗ ಸುಮಾರು 58 ಗಂಟೆಗಳ ಕಾಲ ಅಭಿನಂದನ್ ಪಾಕಿಸ್ತಾನದ ಕಸ್ಟಡಿಯಲ್ಲೇ ಇದ್ದರು. ನಂತರ ಕೇಂದ್ರ ಸರ್ಕಾರ ಪಾಕ್ ಮೇಲೆ ಒತ್ತಡ ಹೇರಿ ಅಭಿನಂದನ್ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿತ್ತು.

Click to comment

Leave a Reply

Your email address will not be published. Required fields are marked *