ಕಾಡ್ಗಿಚ್ಚು ನಂದಿಸಲು ವಾಯುಸೇನೆ ಸಿದ್ಧ- ರಾಜ್ಯ ಮುಖ್ಯ ಕಾರ್ಯದರ್ಶಿಗೆ ಏರ್ ಮಾರ್ಷಲ್ ಪತ್ರ

Public TV
1 Min Read
bandipura 2

ಚಾಮರಾಜನಗರ: ರಾಜ್ಯದ ಅರಣ್ಯ ಪ್ರದೇಶಗಳಿಗೆ ಬೆಂಕಿ ಬಿದ್ದರೆ ಅದನ್ನು ನಂದಿಸುವ ಕಾರ್ಯಾಚರಣೆಗೆ ಸಹಕರಿಸಲು ವಾಯುಸೇನೆ ಸಿದ್ಧವಾಗಿದೆ. ಈ ಕುರಿತು ವಾಯುಸೇನೆಯ ಸೀನಿಯರ್ ಏರ್ ಸ್ಟಾಫ್ ಆಫೀಸರ್ ಏರ್ ಮಾರ್ಷಲ್ ಟಿ.ಡಿ. ಜೋಸೆಫ್ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಗೆ ಪತ್ರ ಬರೆದಿದ್ದಾರೆ.

ದುರ್ಗಮ ಅರಣ್ಯ ಸೇರಿದಂತೆ ಕ್ಲಿಷ್ಟಕರ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬಿದ್ದರೆ ಅಲ್ಲಿಗೆ ಅರಣ್ಯ ಸಿಬ್ಬಂದಿ ತೆರಳಿ ಬೆಂಕಿ ನಂದಿಸುವುದು ಕಷ್ಟವಾಗಲಿದೆ. ಅಂತಹ ಸಂದರ್ಭದಲ್ಲಿ ವಾಯುಸೇನೆಯ ಹೆಲಿಕಾಪ್ಟರ್ ಗಳನ್ನು ಕಳುಹಿಸಿಕೊಡುವಂತೆ ಹಾಗೂ ಸದಾ ಸನ್ನದ್ಧವಾಗಿ ಇರಿಸುವಂತೆ ಕ್ರಮ ಕೈಗೊಳ್ಳಲು ಮುಖ್ಯಕಾರ್ಯದರ್ಶಿಗಳಿಗೆ ಅರಣ್ಯ ಇಲಾಖೆ ವಿನಂತಿಸಿತ್ತು.

bandipur forest

ಈ ಹಿನ್ನೆಲೆಯಲ್ಲಿ ಬೆಂಕಿ ನಂದಿಸುವುದಕ್ಕೆ ಸಹಕಾರ ಕೋರಿ ಮುಖ್ಯಕಾರ್ಯದರ್ಶಿಗಳು ವಾಯುಸೇನೆಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿರುವ ವಾಯುಸೇನೆ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಸದಾ ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಕಳೆದ ವರ್ಷ ಬೇಸಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಬಂಡೀಪುರ ಹೊತ್ತಿ ಉರಿದಿತ್ತು. ನಾಲ್ಕು ಸಾವಿರ ಹೆಕ್ಟೆರ್‍ಕ್ಕೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ದೊಡ್ಡ ಪ್ರಾಣಿಗಳು ಬೆಂಕಿಯಿಂದ ಬಚಾವಾದರೂ ಅಪರೂಪದ ಸರಿಸೃಪಗಳು ಸುಟ್ಟು ಭಸ್ಮವಾಗಿದ್ದವು. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ನಡೆಸಿದ್ದರು. ಕೊನೆಗೆ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಬೆಂಕಿಗೆ ನಂದಿಸುವ ಕಾರ್ಯಾಚರಣೆ ನಡೆಸಲಾಗಿತ್ತು.

bandipura

ಈ ಹಿನ್ನೆಲೆಯಲ್ಲಿ ಬಂಡೀಪುರದದಲ್ಲಿ ಈ ಬಾರಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆಕಸ್ಮಿಕ ಬೆಂಕಿ ಬಿದ್ದರೂ ಹರಡದಂತೆ ಬೆಂಕಿ ರೇಖೆ ನಿರ್ಮಾಣ, ಬೆಂಕಿ ಬೀಳದಂತೆ ರಸ್ತೆಯ ಇಕ್ಕೆಲಗಳಲ್ಲಿ ವಾಟರ್ ಸ್ಪ್ರೇ ಮಾಡಿ ಹಸಿರು ಚಿಗುರುವಂತೆ ಮಾಡುವುದು, ಬೆಂಕಿ ಬಿದ್ದ ತಕ್ಷಣ ಅಧಿಕಾರಿಗಳ ಮೊಬೈಲ್‍ಗಳಿಗೆ ಎಚ್ಚರಿಕಾ ಸಂದೇಶ ರವಾನೆ, ಅರಣ್ಯ ಸಿಬ್ಬಂದಿಯ ನಿರಂತರ ಗಸ್ತು ಹೀಗೆ ಹತ್ತು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *