ನವದೆಹಲಿ: ಯಾವುದೇ ಕ್ಷಣದಲ್ಲಿ ಯುದ್ಧ ಎದುರಾಗುವ ಸಾಧ್ಯತೆ ಇದ್ದು ನೀವೆಲ್ಲರೂ ಸಿದ್ಧವಾಗಿರಿ ಎಂದು ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ವಾಯುಪಡೆಯ ಪ್ರತಿಯೊಬ್ಬ ಅಧಿಕಾರಿಗೆ ವೈಯಕ್ತಿಕ ಪತ್ರ ಬರೆದಿದ್ದಾರೆ.
ಈಗ ಇರುವ ಪರಿಸ್ಥಿತಿಯನ್ನು ಅವಲೋಕಿಸಿದರೆ, ನೆರೆ ರಾಷ್ಟ್ರಗಳ ಬಾಹ್ಯ ಬೆದರಿಕೆಯನ್ನು ನಾವು ಎದುರಿಸುತ್ತಿದ್ದೇವೆ. ಹೀಗಾಗಿ ಯಾವುದೇ ಸಮಯದಲ್ಲೂ ಕಾರ್ಯಾಚರಣೆ ನಡೆಸಲು ಸಿದ್ಧವಾಗಿರಿ ಎಂದು ಪತ್ರದಲ್ಲಿ ಬರೆದಿದ್ದಾರೆ.
Advertisement
ವಾಯು ಸೇನೆಯ 12 ಸಾವಿರ ಅಧಿಕಾರಿಗಳಿಗೆ ಈ ಪತ್ರವನ್ನು ತಲುಪಿಸಲಾಗಿದೆ. ಈ ಪತ್ರದಲ್ಲಿ ನೆರೆ ರಾಷ್ಟ್ರಗಳಿಂದ ಭಾರತ ಎದುರಿಸುತ್ತಿರುವ ಯುದ್ಧ ಭಯವನ್ನು ಬಿಎಸ್ ಧನೋವಾ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ ಈ ವಿಚಾರದಲ್ಲಿ ತರಬೇತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Advertisement
ವಾಯುಸೇನೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಈ ರೀತಿಯ ಪತ್ರ ಬರೆಯಲಾಗಿದೆ. ಈ ಮೊದಲು ಮೇ 1, 1950ರಲ್ಲಿ ಜನರಲ್ ಕಾರ್ಯಪ್ಪ ಮತ್ತು ಫೆಬ್ರವರಿ 1,1986ರಲ್ಲಿ ಜನರಲ್ ಸುಂದರ್ಜಿ ಎಲ್ಲ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.
Advertisement
ಈ ವಿಚಾರದ ಬಗ್ಗೆ ವಾಯುಸೇನೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಆಂತರಿಕ ಸಂವಹನಕ್ಕಾಗಿ ಈ ಪತ್ರ ಬರೆಯಲಾಗಿದೆ ಎಂದು ಹೇಳಿ ಈ ಪತ್ರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.