ವಾಷಿಂಗ್ಟನ್: ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದ ವಿದೇಶಿ ಹೂಡಿಕೆಯನ್ನು ಆಕರ್ಷಿಸಬೇಕೆಂಬ ಗುರಿಯೊಂದಿಗೆ ಅಮೆರಿಕ (America) ಪ್ರವಾಸ ಕೈಗೊಂಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M.B Patil) ಅವರು ಮೊದಲ ದಿನವಾದ ಸೋಮವಾರದಂದು ಆರ್.ಟಿ.ಎಕ್ಸ್ ಏರೋಸ್ಪೇಸ್ ಕಂಪನಿ, ಇಂಟೆಲ್ ಸ್ಯಾಟ್ ಮತ್ತು ಅಮೆರಿಕ-ಭಾರತ ಎಸ್‍ಎಂಇ ಕೌನ್ಸಿಲ್ ಜತೆ ಮಹತ್ವದ ಮಾತುಕತೆಗಳನ್ನು ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು, ಅಮೆರಿಕದ ಕಂಪನಿಗಳಿಗೆ ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜಧಾನಿಯ ಆಚೆಗೂ ಹೂಡಿಕೆಗೆ ಇರಲು ಉಜ್ವಲ ಅವಕಾಶಗಳು ಮತ್ತು ಅದಕ್ಕೆ ರಾಜ್ಯ ಸರ್ಕರವು ನೀಡುತ್ತಿರುವ ಪ್ರೋತ್ಸಾಹಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು ಎಂದಿದ್ದಾರೆ.
ಬೆಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಹೊಂದಿರುವ ಆರ್.ಟಿ.ಎಕ್ಸ್ ರಾಜ್ಯದಲ್ಲಿ ಪೂರೈಕೆ ಸರಪಳಿ ಮತ್ತು ವಿದ್ಯುನ್ಮಾನ ಸಾಧನಗಳ ಉತ್ಪಾದನೆಯತ್ತ ಆಸಕ್ತಿ ತೋರಿಸಿದ್ದು, ಈ ಬಗ್ಗೆ ಅದರ ಉನ್ನತ ಮಟ್ಟದ ಪ್ರತಿನಿಧಿಗಳೊಂದಿಗೆ ವಿಚಾರ ವಿನಿಮಯ ನಡೆಸಲಾಗಿದೆ. ಇದರ ಜತೆಗೆ ಬಾಹ್ಯಾಕಾಶ ನವೋದ್ಯಮಗಳ ಕ್ಷೇತ್ರದಲ್ಲಿ ಸಹಭಾಗಿತ್ವ ಹೊಂದುವ ಕುರಿತು ಚರ್ಚಿಸಲಾಯಿತು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಕೆನಡಾದಲ್ಲಿ ಸುರಕ್ಷಿತ ನೆಲೆ ಸಿಕ್ಕಿದೆ: ಟ್ರುಡೊ ವಿರುದ್ಧ ಲಂಕಾ ಸಚಿವ ವಾಗ್ದಾಳಿ
ಇಂಟೆಲ್ ಸ್ಯಾಟ್ ಕಂಪನಿಯೊಂದಿಗೆ ಭಾರತೀಯ ಬಾಹ್ಯಾಕಾಶ ನವೋದ್ಯಮಗಳ ಮೂಲಕ `ಸ್ಯಾಟಲೈಟ್ ಸೋರ್ಸಿಂಗ್’ ಕುರಿತು ಮತ್ತಷ್ಟು ವಿಸ್ತೃತ ಸ್ವರೂಪದಲ್ಲಿ ಕಾರ್ಯ ಚಟುವಟಿಕೆ ವಿಸ್ತರಿಸುವ ಕುರಿತು ಚರ್ಚಿಸಲಾಯಿತು. ಇದಲ್ಲದೆ ಬಾಹ್ಯಾಕಾಶ ಸಂವಹನದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಶೀನ್ ಲರ್ನಿಂಗ್ ಗಳಿಗೆ ಇರುವ ಪಾತ್ರಗಳು ಮತ್ತು ಸಾಫ್ಟ್ ವೇರ್ ಆಧಾರಿತ ಪರಿಹಾರಗಳನ್ನು ಕುರಿತು ಸಹಭಾಗಿತ್ವವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವನ್ನು ಮಾತುಕತೆಯ ಸಂದರ್ಭದಲ್ಲಿ ಮನಗಾಣಲಾಯಿತು ಎಂದು ಸಚಿವರು ವಿವರಿಸಿದ್ದಾರೆ.
ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಪ್ರತಿಭೆಗಳನ್ನು ಉತ್ತೇಜಿಸುವಂತಹ ವ್ಯವಸ್ಥೆಯನ್ನು ಪಾಲುದಾರಿಕೆಯಲ್ಲಿ ಅಭಿವೃದ್ಧಿ ಪಡಿಸುವ ಕುರಿತು ಮಾತುಕತೆಯಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೆ ದೀರ್ಘಾವಧಿ ಯೋಜನೆಯ ಭಾಗವಾಗಿ ರಾಜ್ಯದಲ್ಲಿ ಗ್ಲೋಬಲ್ ಕೇಪಬಿಲಿಟಿ ಸೆಂಟರ್ (ಜಿಸಿಸಿ) ಸ್ಥಾಪಿಸುವ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಯಿತು ಎಂದು ಪಾಟೀಲ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವರು ಯುಎಸ್-ಇಂಡಿಯಾ ಎಸ್‍ಎಂಇ ಕೌನ್ಸಿಲ್ಲಿನ 30ಕ್ಕೂ ಹೆಚ್ಚಿ ಸಿಇಒಗಳನ್ನು ಭೇಟಿಯಾಗಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ಹೇರಳ ಅವಕಾಶಗಳನ್ನು ಮತ್ತು ಸರ್ಕಾರವು ಉದ್ಯಮಗಳ ಬೆಳವಣಿಗೆಗೆ ರೂಪಿಸಿರುವ ಉಪಕ್ರಮಗಳನ್ನು ಗಮನಕ್ಕೆ ತಂದರು. ಕರ್ನಾಟಕದಲ್ಲಿ ವಾಣಿಜ್ಯ ಮತ್ತು ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲು ಸಚಿವರು ನೀಡುತ್ತಿರುವ ಮೌಲಿಕ ಕೊಡುಗೆಯನ್ನು ಪರಿಗಣಿಸಿ, ಯುಎಸ್-ಇಂಡಿಯಾ ಎಸ್‍ಎಂಇ ಕೌನ್ಸಿಲ್ ವತಿಯಿಂದ ಅವರಿಗೆ `ಔಟ್ ಸ್ಟ್ಯಾಂಡಿಂಗ್ ಬಿಜಿನೆಸ್ ಪ್ರೊಮೋಷನ್ ಅವಾರ್ಡ್’ ನೀಡಿ ಪುರಸ್ಕರಿಸಲಾಯಿತು.
ಮಾತುಕತೆಯಲ್ಲಿ ಕೈಲ್ ಬೆಲಾರ್ಡ್ ಕಂಪನಿಯ ಉಪಾಧ್ಯಕ್ಷ ಕ್ಸೇವಿಯರ್ ರಮಿಸ್, ಆರ್.ಟಿಎಕ್ಸ್ ಕಂಪನಿಯ ನಿರ್ದೇಶಕ ಹೆನ್ರಿ ಬಿ ಮಾರ್ಟಿನ್, ಕ್ಲೌಡಿಯಾ ಡಯಾಮಾಂಟ್ ಕಂಪನಿಯ ಉಪಾಧ್ಯಕ್ಷ ರೋರಿ ವೆಲ್ಶ್, ರಾಜೀವ್ ಗಡ್ರೆ, ಇಂಟೆಲ್ ಸ್ಯಾಟ್ ಕಂಪನಿಯ ಹಿರಿಯ ನಿರ್ದೇಶಕ ಕೆನ್ ಟಕಗಿ, ಯುಎಸ್-ಇಂಡಿಯಾ ಎಸ್‍ಎಂಇ ಕೌನ್ಸಿಲ್‍ನ ಎಲಿಶಾ ಪುಲಿವರ್ತಿ, ಗ್ಲೋಬಲ್ ಎಲಿಯಂಟ್ ಸಂಸ್ಥಾಪಕ ರಾಜನ್ ನಟರಾಜನ್, ಮಾಂಟ್ಗೊಮೆರಿ ರಾಜ್ಯಾಡಳಿತದ ಉನ್ನತಾಧಿಕಾರಿ ಮಾರ್ಕ್ ಎಲ್ರಿಚ್ ಸೇರಿದಂತೆ 30ಕ್ಕೂ ಹೆಚ್ಚು ವಿವಿಧ ಕಂಪನಿಗಳ ಸಿಇಒಗಳು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಸಚಿವರ ಆಪ್ತ ಕಾರ್ಯದರ್ಶಿ ನರೇಂದ್ರ ಇದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]