ರಾಯಚೂರು: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಏಮ್ಸ್ ಸಂಸ್ಥೆಯನ್ನು ರಾಯಚೂರಿಗೆ ತರಲು ಎಲ್ಲಾ ಪ್ರಯತ್ನಗಳು ನಡೆದಿವೆ. ನರೇಂದ್ರ ಮೋದಿಯವರ ಆಶೀರ್ವಾದದಿಂದ ಏಮ್ಸ್ ರಾಯಚೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗಿಲ್ಲೆಸುಗೂರಿನಲ್ಲಿ ನಡೆದ ಜನ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಬೊಮ್ಮಾಯಿ, ಈಗಾಗಲೇ ಕೇಂದ್ರ ಆರೋಗ್ಯ ಸಚಿವರ ಬಳಿ ಮಾತನಾಡಿದ್ದೇನೆ. ಮುಂದಿನ ವಾರ ದೆಹಲಿಗೆ ಹೋಗಿ ಏಮ್ಸ್ ಕುರಿತಾಗಿ ಮಾತನಾಡಲಿದ್ದೇನೆ. ಮಂತ್ರಾಲಯದ ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಹೆಸರು ಇಡಲು ಒತ್ತಾಯ ಕೇಳಿಬಂದಿದೆ. ಸದ್ಯದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: 2005ರಲ್ಲೇ ನಾನು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷನಾಗಬೇಕೆಂದು ಸೋನಿಯಾ ಬಯಸಿದ್ದರು: ಮಲ್ಲಿಕಾರ್ಜುನ ಖರ್ಗೆ
ರಾಯಚೂರಿನ ಗ್ರಾಮೀಣ ಭಾಗದಲ್ಲಿ 23 ಕೆರೆ ತುಂಬಿಸುವ ಯೋಜನೆಯನ್ನು ಖಂಡಿತವಾಗಿಯೂ ಜಾರಿ ಮಾಡಲಾಗುವುದು. ಕಾಲುವೆ ಕೆಳಭಾಗದ ರೈತರಿಗೆ ನೀರು ತಲುಪಿಸಲಾಗುವುದು. ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಸರ್ಕಾರ ಕಂಕಣಬದ್ಧವಾಗಿದೆ. ಈ ಭಾಗದ ಅಭಿವೃದ್ಧಿಗೆ 5,000 ಕೋಟಿ ರೂ. ನೀಡಲಾಗುವುದು ಎಂದರು. ಇದನ್ನೂ ಓದಿ: ಕಾಶಿ ಮಾದರಿಯಲ್ಲೇ ಉಜ್ಜೈನಿ ಮಹಾಕಾಲೇಶ್ವರ ಅಭಿವೃದ್ಧಿ- ಜ್ಯೋತಿರ್ಲಿಂಗಕ್ಕೆ ಮೋದಿ ಪೂಜೆ
ರಾಯಚೂರಿನ ರಾಜಕಾರಣದಲ್ಲಿ ಬಹಳ ದೊಡ್ಡ ಬದಲಾವಣೆ ಆಗಲಿದೆ. ನಾವು ರಾಯಚೂರಿಗೆ ಮಾಡಿರುವ ಕೆಲಸಗಳ ರಿಪೋರ್ಟ್ ಕಾರ್ಡ್ ಇಟ್ಟು, ನಿಮ್ಮ ಬೆಂಬಲವನ್ನು ಪಡೆದು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂಬ ಸಂಕಲ್ಪವನ್ನು ಮಾಡಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.




