ಕೊಚ್ಚಿ: ಕಾನ್ಫರೆನ್ಸ್ ಗೆಂದು ಕೇರಳದ ಕೊಚ್ಚಿಗೆ ಬಂದಿದ್ದ 26 ವರ್ಷದ ವೈದ್ಯೆಯೊಬ್ಬರು ಹೋಟೆಲ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರೋ ಘಟನೆ ಶುಕ್ರವಾರದಂದು ನಡೆದಿದೆ. ರೂಮಿನಲ್ಲಿ ಡೆತ್‍ನೋಟ್ ಪತ್ತೆಯಾಗಿದ್ದು, ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿದೆ. ಆದ್ರೆ ತನ್ನ ಮಗಳಿಗೆ ಹಿಂಸೆ ಕೊಟ್ಟು, ಬಲವಂತವಾಗಿ ಡೆತ್‍ನೋಟ್ ಬರೆಸಲಾಗಿದೆ ಎಂದು ಮೃತ ಯುವತಿಯ ತಂದೆ ಆರೋಪ ಮಾಡಿದ್ದಾರೆ.
ಮಮತಾ ರೈ ಸಾವನ್ನಪ್ಪಿರುವ ಯುವತಿ. ದೆಹಲಿಯ ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಎಐಎಮ್‍ಎಸ್) ನ ವಿದ್ಯಾರ್ಥಿಯಾಗಿದ್ದ ಮಮತಾ ವಿದ್ಯಾಭ್ಯಾಸದ ನಂತರ ಅಲ್ಲೇ ಕೆಲಸ ಮಾಡುತ್ತಿದ್ದರು. ಮೂಲತಃ ಜಾರ್ಖಂಡ್‍ನ ಜೆಮ್ಶೆಡ್‍ಪುರ್‍ನವರಾಗಿದ್ದ ಮಮತಾ ಜನವರಿ 18ರಂದು ಕೊಚ್ಚಿಯ ಹೋಟೆಲ್ ರೂಮಿಗೆ ಬಂದಿಳಿದಿದ್ದರು. ಜ.22ರವರೆಗೆ ಅವರು ಅಲ್ಲೇ ಉಳಿದುಕೊಳ್ಳಬೇಕಿತ್ತು.
ಪೊಲೀಸರು ಹೇಳುವ ಪ್ರಕಾರ, ಮಮತಾ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದಿದ್ದನ್ನು ಆಕೆಯ ರೂಮ್‍ಮೇಟ್ ಗಳು ನೋಡಿ ನಂತರ ಮಾಹಿತಿ ನೀಡಿದ್ದಾರೆ. ಹೋಟೆಲ್‍ನ ಹೌಸ್ ಕೀಪಿಂಗ್ ಸಿಬ್ಬಂದಿಯೊಬ್ಬರು ಮೃತದೇಹವನ್ನ ಕೆಳಗಿಳಿಸಲು ರೂಮ್ ಮೇಟ್‍ಗೆ ಸಹಾಯ ಮಾಡಿದ್ದಾರೆ. ಸ್ಥಳದಲ್ಲಿದ್ದ ವೈದ್ಯರು ಮಮತಾ ಅವರನ್ನ ಪರೀಕ್ಷಿಸಿ ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದ್ರೆ ಅದಾಗಲೇ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಕೊಚ್ಚಿ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರಾದ್ರೂ ತನಿಖೆ ಮುಂದುವರೆಸಿದ್ದಾರೆ. ರೂಮಿನಲ್ಲಿ ಡಿಪ್ರೆಷನ್ ಮಾತ್ರೆಗಳು ಕೂಡ ಪತ್ತೆಯಾಗಿವೆ. ಆದ್ರೆ ಮಮತಾ ಕುಟುಂಬಸ್ಥರು ಬೇರೆಯದ್ದೇ ವಾದವನ್ನ ಮುಂದಿಟ್ಟಿದ್ದಾರೆ.
ವೈದ್ಯನಿಂದ ಕಿರುಕುಳ?: ಅವಳು ಶಾಲೆಯಲ್ಲಿ ಟಾಪರ್, ದೆಹಲಿಯ ಏಮ್ಸ್ ನಲ್ಲಿ ಚಿನ್ನದ ಪದಕ ಕೂಡ ಪಡೆದಿದ್ದಳು. ಅಂತರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಹಾಗೂ ಸಮ್ಮೇಳನಗಳಲ್ಲಿ ಪ್ರಶಸ್ತಿ ಪಡೆದಿದ್ದಳು. ಅಕೆ ಈ ರೀತಿ ಮಾಡಲು ಸಾಧ್ಯವೇ ಇಲ್ಲ. ಇದೊಂದು ಪಿತೂರಿ. ಆಕೆಗೆ ಏಮ್ಸ್ ನ ಡಾ. ಸಂಜಯ್ ಹಾಗೂ ಆತನ ಸ್ನೇಹಿತರಾದ ಅಲೋಕ್ ಮತ್ತು ನೇಹಾ ಕಿರುಕುಳ ನೀಡಿದ್ದಾರೆ. ಸಂಜಯ್ ಮಮತಾಗೆ ಮದುವೆ ಪ್ರಸ್ತಾಪ ಮುಂದಿಟ್ಟಿದ್ದ. ಆದ್ರೆ ಮಮತಾ ನಿರಾಕರಿಸಿದ್ದಳು. ನಂತರ ಆತ ಆಕೆಯನ್ನ ಬೆದರಿಸುತ್ತಿದ್ದ. ಜನವರಿ 2ರಂದು ಆಕೆಯ ಮೇಲೆ ದಾಳಿ ಕೂಡ ಮಾಡಿದ್ದ ಎಂದು ಮಮತಾ ತಂದೆ ಹೇಳಿದ್ದಾರೆ.
ಆಕೆ ನನ್ನಿಂದ ಏನನ್ನೂ ಮುಚ್ಚಿಡುತ್ತಿರಲಿಲ್ಲ. ಆಕೆಗೆ ಡಾ. ಸಂಜಯ್‍ನಿಂದ ಬೆದರಿಕೆ ಇದ್ದಿದ್ದರಿಂದ ಭಯವಿತ್ತು. ಜನವರಿ 19ರಂದು ನನ್ನೊಂದಿಗೆ ಮಾತನಾಡಿದ್ದಳು. ಕಾನ್ಫರೆನ್ಸ್ ನಿಂದ ಬಂದ ಮೇಲೆ ಮಾತಾಡುತ್ತೇನೆ ಎಂದು ಹೇಳಿದ್ದಳು. ಬೆಳಗ್ಗೆ 10.30ಕ್ಕೆ ತನ್ನ ಗೆಳತಿ ರಿಮಿ ಗೆ ಕರೆ ಮಾಡಿ ತಾನು ಈಗಲೇ ಕೊಚ್ಚಿಯಿಂದ ಹೊರಡಬೇಕು ಎಂದು ಹೇಳಿ ಅತ್ತಿದ್ದಳು. ರಿಮಿ ಆಕೆಯನ್ನು ಪಾಟ್ನಾಗೆ ಬರುವಂತೆ ಹೇಳಿದ್ದಳು. ನಾನು ನನ್ನ ಮಗಳೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಮಧ್ಯಾಹ್ನ 12 ಗಂಟೆಗೂ ಕರೆ ಮಾಡಿದೆ. ಆದ್ರೆ ಆಕೆಯನ್ನು ಸಂಪರ್ಕಿಸಲು ಆಗಲಿಲ್ಲ. ಡಾ ಸಂಜಯ್ ಆಕೆಯಿಂದ ಬಲವಂತವಾಗಿ ಡೆತ್‍ನೋಟ್ ಬರೆಸಿದ್ದಾನೆ. ಬಲವಂತವಾಗಿ ಫ್ಯಾನ್‍ಗೆ ನೇಣು ಬಿಗಿದುಕೊಳ್ಳುವಂತೆ ಮಾಡಿದ್ದಾನೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಅವರು ಹೇಳಿದ್ದಾರೆ.