ಮಡಿಕೇರಿ: ವಿಯೆಟ್ನಾಂನಿಂದ ಆಮದಾಗುತ್ತಿರುವ ಕಳಪೆ ಗುಣಮಟ್ಟದ ಕಾಳುಮೆಣಸಿನ ಆಮದುದಾರರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಂಬಂಧಿಕರು. ಹೀಗಾಗಿ ಕೇಂದ್ರ ಸರ್ಕಾರ ಈ ಆಮದಿಗೆ ಆ್ಯಂಟಿ ಡಂಪಿಂಗ್ ಡ್ಯೂಟಿಯನ್ನು ಹಾಕುತ್ತಿಲ್ಲ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಭಾರತ ದೇಶಕ್ಕೆ ಆಮದಾಗುತ್ತಿರುವ ಕಳಪೆ ಗುಣಮಟ್ಟದ ವಿಯೆಟ್ನಾಂ ಕಾಳುಮೆಣಸು, ಕೊಡಗಿನ ಉತ್ತಮ ಗುಣಮಟ್ಟದ ಕಾಳುಮೆಣಸಿನೊಂದಿಗೆ ಕಲಬೆರಕೆಯಾಗುತ್ತಿದೆ. ಪರಿಣಾಮ ಕಾಳುಮೆಣಸು ಬೆಲೆ ಗಣನೀಯ ಕುಸಿತದಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲೂ ಕೇಂದ್ರ ಸರ್ಕಾರ ವಿಯೆಟ್ನಾಂ ಕಳಪೆ ಕಾಳುಮೆಣಸು ಆಮದಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
Advertisement
ಬೆಳೆಗಾರರ ಹಿತರಕ್ಷಣೆ ಕೇಂದ್ರ ಸರ್ಕಾರಕ್ಕೆ ಬೇಕಿಲ್ಲ. ಕಳಪೆ ಗುಣಮಟ್ಟದ ವಿಯೆಟ್ನಾಂ ಕಾಳುಮೆಣಸಿನ ಆಮದು ತಡೆಯಲು ಕೇಂದ್ರ ಸರ್ಕಾರ ಆ್ಯಂಟಿ ಡಂಪಿಂಗ್ ಡ್ಯೂಟಿಯನ್ನು ಹಾಕಬಹುದು. ಆದರೆ ಕಾಳುಮೆಣಸು ದೊಡ್ಡ ಆಮದುದಾರರು ಅಮಿತ್ ಶಾ ಅವರ ಸಂಬಂಧಿಕರಾಗಿರುವುದರಿಂದ ಕೇಂದ್ರ ಸರ್ಕಾರ ಆ್ಯಂಟಿ ಡಂಪಿಂಗ್ ಡ್ಯೂಟಿಯನ್ನು ಹಾಕುತ್ತಿಲ್ಲ ಎಂದು ದೂರಿದರು.
Advertisement
ಸಿಯಾಚಿನ್ ನಲ್ಲಿ ಸೈನಿಕರು ಸ್ವಚ್ಛತೆ ಮಾಡಬೇಕಂತೆ, ಗನ್ ಹಿಡಿಯಬೇಕಾದ ಕೈಗೆ ಕೇಂದ್ರ ಸರ್ಕಾರ ಪೊರಕೆ ಕೊಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸೈನಿಕರು ಇರುವುದು ದೇಶ ಕಾಯಲು, ಸ್ವಚ್ಛ ಭಾರತ್ ಕೆಲಸ ಮಾಡಲು ಅಲ್ಲ ಎಂದು ಕಾಳಪ್ಪ ಆಕ್ರೋಶ ವ್ಯಕ್ತಪಡಿಸಿದರು.