ಅಮೇಥಿ ಜೊತೆಗೆ ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧೆ?

Public TV
2 Min Read
Rahul Gandhi Congress

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿ ಜೊತೆಗೆ ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಕಾಂಗ್ರೆಸ್ ಇಂದು ತಿಳಿಸಿದೆ.

ಕರ್ನಾಟಕ ಅಥವಾ ತಮಿಳುನಾಡು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಿದ್ದಾರೆ. ಈ ಬೆನ್ನಲ್ಲೇ ಕೇರಳದ ಕಾಂಗ್ರೆಸ್ ನಾಯಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಮ್ಮನ್ ಚಾಂಡಿ ಹಾಗೂ ವಿಪಕ್ಷ ನಾಯಕ ರಮೇಶ್ ಚೆನ್ನಿತಾಲಾ ಅವರು ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಅವರಿಗೆ ಒತ್ತಾಯಿಸಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ಅಮೇಥಿಯ ಜೊತೆಗೆ ವಯನಾಡು ಕ್ಷೇತ್ರದಿಂದ ಕೂಡ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಚೆನ್ನಿಥಾಲಾ ಅವರು, ರಾಹುಲ್ ಗಾಂಧಿ ಮಾರ್ಚ್ ನಲ್ಲಿ ಕೇರಳಕ್ಕೆ ಭೇಟಿ ನೀಡಿದ್ದಾಗ ಬೇಡಿಕೆ ಇಟ್ಟಿದ್ದೆವು. ಈ ಕುರಿತು ಇಂದು ಮತ್ತೆ ಮನವಿಯನ್ನು ಸಲ್ಲಿಸಿದ್ದೇವೆ. ಇತ್ತ ಕಾಂಗ್ರೆಸ್‍ನ ವಯನಾಡು ಜಿಲ್ಲಾಧ್ಯಕ್ಷರೊಂದಿಗೆ ಮಾತನಾಡಿದ್ದು, ಅವರು ಕೂಡ ರಾಹುಲ್ ಗಾಂಧಿ ಅವರ ಸ್ಪರ್ಧೆಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದರು.

ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಾತನಾಡಿ, ಅಮೇಥಿ ನನ್ನ ಕರ್ಮಭೂಮಿ. ನಾನು ಎಂದೆಂದಿಗೂ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ರಾಹುಲ್ ಗಾಂಧಿ ಯಾವಾಗಲೂ ಹೇಳುತ್ತಾರೆ. ಕೇರಳದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನು ರಾಹುಲ್ ಗಾಂಧಿ ಅವರು ಸಕಾರಾತ್ಮಕವಾಗಿ ಪರಿಗಣಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

randeep surjewala

ಈ ಬಾರಿಯೂ ಬಿಜೆಪಿಯು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ರಾಹುಲ್ ಗಾಂಧಿ ವಿರುದ್ಧ ಅಮೇಥಿಯಲ್ಲಿ ಮತ್ತೆ ಕಣಕ್ಕೆ ಇಳಿಸಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ಸುಮಾರು 1 ಲಕ್ಷ ಮತಗಳ ಅಂತರದಿಂದ ಪರಾಜಿತಗೊಂಡಿದ್ದರು. ಆದರೆ ಉತ್ತರ ಪ್ರದೇಶದ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಸರ್ಕಾರ ರಚಿಸಿದೆ. ಇತ್ತ ಅಮೇಥಿ ಲೋಕಸಭಾ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಸ್ಮೃತಿ ಇರಾನಿ ಅವರು ಈ ಬಾರಿ ಗೆಲ್ಲುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಹೀಗಾಗಿ ರಾಹುಲ್ ಗಾಂಧಿ ಅವರು ಅಮೇಥಿ ಜೊತೆಗೆ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

smriti irani

Share This Article
Leave a Comment

Leave a Reply

Your email address will not be published. Required fields are marked *