ಬೆಂಗಳೂರು: ದೆಹಲಿಯ ಎಐಸಿಸಿ ಅಧಿವೇಶನದ ಮಧ್ಯದಲ್ಲಿ ಕಾಂಗ್ರೆಸ್ ಹಿರಿಯ ನಾಯಕರಿಗೆ ಕರ್ನಾಟಕದ ಚಿಂತೆ ಉಂಟಾಗಿದೆ. ಕರ್ನಾಟಕದ ಗೆಲುವಿನೊಂದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವಿಗೆ ಅಡಿಗಲ್ಲು ಹಾಕಲು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಅಧಿವೇಶನದಲ್ಲಿ ಎಐಸಿಸಿ ನಾಯಕರು ರಾಜ್ಯದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರಿಗೆ ಸಪ್ತ ಸೂತ್ರಗಳನ್ನು ಬೋಧನೆ ಮಾಡಿದ್ದಾರೆ ಎನ್ನಲಾಗಿದೆ. ದಕ್ಷಿಣ ಭಾರತದ ಕರ್ನಾಟಕದ ಚುನಾವಣೆಯಲ್ಲಿ ಅಧಿಕಾರ ಸ್ಥಾಪನೆ ಮಾಡಬೇಕೆಂದು ಬಿಜೆಪಿ ಸಹ ಹಲವು ರಾಜಕೀಯ ತಂತ್ರಗಳನ್ನು ಪ್ರಯೋಗಿಸುತ್ತಿದೆ. ಇತ್ತ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ಎಐಸಿಸಿ ನಾಯಕರು ಬೋಧಿಸಿರುವ ಸಪ್ತ ಸೂತ್ರಗಳು ಈ ಕೆಳಗಿನಂತಿವೆ.
Advertisement
Advertisement
ಸಪ್ತ ಸೂತ್ರಗಳು:
ಸೂತ್ರ 1. ನೀವು ಯಾವಾಗ ಕರೆದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಬರ್ತಾರೆ. ಚುನಾವಣೆ ಮುಗಿಯುವವರೆಗೆ ಕರ್ನಾಟಕ ಬಿಟ್ಟು ಬೇರೆ ಪ್ರವಾಸದ ಬಗ್ಗೆ ರಾಹುಲ್ ಗಾಂಧಿ ಯೋಚಿಸಲ್ಲ.
ಸೂತ್ರ 2. ಅಗತ್ಯ ಬಿದ್ದರೆ ಮಾಜಿ ಏಐಸಿಸಿ ಅಧ್ಯಕ್ಷೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಸಹ ಒಂದೆರೆಡು ಬೃಹತ್ ಸಮಾವೇಶಗಳಲ್ಲಿ ಭಾಗವಹಿಸುತ್ತಾರೆ.
ಸೂತ್ರ 3. ದಲಿತ ವಿವಾದ ಹಾಗೂ ಲಿಂಗಾಯತ ಪ್ರತ್ಯಕ್ಷ ಧರ್ಮದ ವಿಷಯವನ್ನು ಸೂಕ್ಷ್ಮವಾಗಿ ನಿರ್ವಹಿಸುವಂತೆ ಎಐಸಿಸಿ ನಾಯಕರು ಸಿಎಂ ಸಿದ್ದರಾಮಯ್ಯ ಸೇರಿ ರಾಜ್ಯ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ.
ಸೂತ್ರ 4. ರಾಜ್ಯದಲ್ಲಿಯ ಹಿರಿಯ ಕಾಂಗ್ರೆಸ್ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಮೊಯ್ಲಿ ಪ್ರಕರಣದಂತೆ ಯಾವುದೇ ಘಟನೆಗಳು ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಿಬೇಕು.
ಸೂತ್ರ 5. ರಾಹುಲ್‍ಗಾಂಧಿ ರಾಜ್ಯಕ್ಕೆ ಬಂದಾಗಲೆಲ್ಲಾ ಆದಷ್ಟು ಪಕ್ಷದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಲು ವೇದಿಕೆ ಕಲ್ಪಿಸಬೇಕು.
ಸೂತ್ರ 6. ಸಂಬಂಧಿಕರಿಗೆ, ಮಕ್ಕಳಿಗೆ ಟಿಕೆಟ್ ಬೇಕು ಎಂಬ ಗೊಂದಲಗಳು ಬೇಡ. ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಪ್ರಭಾವಿ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ಹಂಚಿಕೆ ಮಾಡಬೇಕು.
ಸೂತ್ರ 7. ಇವಿಎಂ ಗಳ ಬಗ್ಗೆ ಗೊಂದಲ ಬೇಡ. ಅನುಮಾನ ಇದ್ದರೆ ರಾಜ್ಯದ ಇತರೆ ಪಕ್ಷಗಳ ನೆರವು ಪಡೆದು ಚುನಾವಣೆ ಬಹಿಷ್ಕಾರದ ಬಗ್ಗೆ ಚಿಂತಿಸಿ. ಕರ್ನಾಟಕ ಚುನಾವಣೆಯಲ್ಲಿ ಬ್ಯಾಲೆಟ್ ಬಳಕೆ ಸಂಬಂಧ ಚುನಾವಣಾ ಆಯೋಗದ ಮೇಲೆ ಒತ್ತಡ ತನ್ನಿ ಅಂತಾ ಹೇಳಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
Advertisement
ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗೆಲ್ಲುವ ಮೂಲಕ ಬಿಜೆಪಿ ಗೆ ತಿರುಗೇಟು ನೀಡಲು ಕಾಂಗ್ರೆಸ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡಂತೆ ಕಾಣಿಸುತ್ತಿದೆ. ಇತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚುನಾವಣಾ ಪ್ರಚಾರಗಳಲ್ಲಿ ಭಾಗಿಯಾಗಲು ಸಹಾಯವಾಗುವಂತೆ ಬೆಂಗಳೂರಿನಲ್ಲಿಯೇ ಮನೆ ಮಾಡಿದ್ದಾರೆ.