ನವದೆಹಲಿ: ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಲಂಚ ನೀಡಲು ಮುಂದಾಗಿದ್ದ ಆರೋಪದ ಮೇಲೆ ಶಶಿಕಲಾ ಸಂಬಂಧಿ ಟಿಟಿ ದಿನಕರನ್ ವಿರುದ್ಧ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಐಎಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾದ ದಿನಕರನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಆರ್‍ಕೆ ನಗರದ ಉಪಚುನಾವಣೆ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಎರಡು ಬಣದ ನಡುವೆ ಚಿಹ್ನೆಗಾಗಿ ಪೈಪೋಟಿ ಏರ್ಪಟ್ಟಿದ್ದರಿಂದ ಚುನಾವಣಾ ಆಯೋಗ ಪಕ್ಷದ ಎರಡು ಎಲೆಯ ಚಿಹ್ನೆಯನ್ನು ತಡೆಹಿಡಿದಿತ್ತು. ಈ ಚಿಹ್ನೆಗಾಗಿ ದನಕರನ್ 50 ಕೋಟಿ ರೂ. ಲಂಚ ಕೊಡಲು ಸಿದ್ಧರಾಗಿದ್ದರು ಎಂದು ವರದಿಯಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಸುಖೇಶ್ ಚಂದ್ರಶೇಖರ್‍ನನ್ನು ಪೊಲೀಸರು ಬಂಧಿಸಿದ್ದು, ಸುಖೇಶ್ ಬಳಿ 1.3 ಕೋಟಿ ರೂ. ಪತ್ತೆಯಾಗಿದೆ. ಇದು ಚುನಾವಣಾ ಆಯೋಗಕ್ಕೆ ನೀಡಲು ಇಟ್ಟುಕೊಂಡಿದ್ದ ಹಣ ಎಂದು ಹೇಳಲಾಗಿದೆ. ಲಂಚ ನೀಡಲು ಮುಂದಾಗದ್ದ ಬಗ್ಗೆ ಸುಖೇಶ್ ಒಪ್ಪಿಕೊಂಡಿದ್ದಾನೆಂದು ವರದಿಯಾಗಿದೆ. ಆದ್ರೆ ಈ ಪ್ರಕರಣದಲ್ಲಿ ಚುನಾವಣಾ ಆಯೋಗದ ಪಾತ್ರ ಇದೆಯೋ ಇಲ್ಲವೋ ಎಂದು ಹೇಳಲು ಯಾವುದೇ ಸಾಕ್ಷಿಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
- Advertisement
ಆದ್ರೆ ದಿನಕರನ್ ಈ ಆರೋಪಗಳನ್ನ ತಳ್ಳಿಹಾಕಿದ್ದು, ಸುಖೇಶ್ ಚಂದ್ರಶೇಖರ್ ಎಂಬ ಹೆಸರಿನ ಯಾವುದೇ ವ್ಯಕ್ತಿ ನನಗೆ ಗೊತ್ತಿಲ್ಲ. ನಾನು ನನ್ನ ಜೀವನದಲ್ಲೇ ಈ ವ್ಯಕ್ತಿಯ ಜೊತೆ ಮಾತನಾಡಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
- Advertisement
ಬಂಧಿತ ಆರೋಪಿ ಸುಖೇಶ್‍ನಿಂದ ಪೊಲೀಸರು 1.3 ಕೋಟಿ ರೂ. ಹಣ, ಬಿಎಂಡ್ಬ್ಯೂ ಹಾಗೂ ಮರ್ಸಿಡಿಸ್ ಕಾರುಗಳನ್ನ ಜಪ್ತಿ ಮಾಡಿದ್ದಾರೆ.