ಚೆನ್ನೈ: ಜಯಲಲಿತಾ ಸಾವಿನ ನಂತರ ಎರಡು ಬಣಗಳಾಗಿ ಹೋಳಾಗಿದ್ದ ಎಐಎಡಿಎಂಕೆ ಪಕ್ಷದ ವಿಲೀನವಾಗುತ್ತಿದ್ದು ಬಹಿರಂಗ ಪ್ರಕಟಣೆಯಷ್ಟೇ ಬಾಕಿ. ಪನ್ನೀರ್ ಸೆಲ್ವಂ ಷರತ್ತಿನ ಪ್ರಕಾರ ಜಯಾ ಅವರ ಸಾವಿನ ಕುರಿತು ಪಳನಿಸ್ವಾಮಿ ಸರಕಾರ ನ್ಯಾಯಾಂಗ ತನಿಖೆಗೆ ಸಮಿತಿ ರಚಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಯಾವುದೇ ಕ್ಷಣದಲ್ಲೂ ಭಿನ್ನ ಬಣಗಳ ವಿಲೀನ ಘೋಷಣೆಯಾಗುವ ಸಾಧ್ಯತೆ ಇದೆ. ಹೊಸ ವಿಲೀನ ಒಪ್ಪಂದದಂತೆ ಪಳನಿಸ್ವಾಮಿ ಸರಕಾರದಲ್ಲಿ ಪನ್ನೀರ್‍ಸೆಲ್ವಂಗೆ ಉಪ ಮುಖ್ಯಮಂತ್ರಿ ಪಟ್ಟ ಸಿಗಲಿದೆ ಎನ್ನಲಾಗಿದೆ.
Advertisement
ಈ ನಡುವೆ ಜಯಾ ನಿವಾಸ ಪೋಯೆಸ್ ಗಾರ್ಡನ್ ಅನ್ನು ಸ್ಮಾರಕವಾಗಿ ಪರಿವರ್ತಿಸಲು ಜಯಲಲಿತಾರ ಸೋದರ ಸೊಸೆ ದೀಪಾ ಜಯಕುಮಾರ್ ವಿರೋಧಿಸಿದ್ದಾರೆ. ಜಯಲಲಿತಾ ನಿವಾಸದ ಮೇಲೆ ನಮಗೂ ಹಕ್ಕಿದೆ, ಮುಖ್ಯಮಂತ್ರಿ ಪಳನಿಸ್ವಾಮಿ ಘೋಷಣೆ ಹಿಂದೆ ದುರುದ್ದೇಶ ಅಡಗಿದೆ ಎಂದು ಗುಡುಗಿದ್ದಾರೆ. ಈ ಎಲ್ಲಾ ವಿಷಯವನ್ನೂ ಪರಪ್ಪನ ಅಗ್ರಹಾರ ಜೈಲಲ್ಲಿರೋ ಶಶಿಕಲಾಗೆ ದಿನಕರನ್ ವರದಿ ಒಪ್ಪಿಸಿದ್ದಾರೆ.
Advertisement
ಜಯಲಲಿತಾ ಸಾವಿನ ಪ್ರಕರಣದ ಬಗ್ಗೆ ತನಿಖೆಯಾಗಬೇಕು. ಪೋಯೆಸ್ ಗಾರ್ಡನ್ ಅನ್ನು ಸ್ಮಾರಕವನ್ನಾಗಿ ಮಾಡಬೇಕೆಂದು ಪನ್ನೀರ್ ಸೆಲ್ವಂ ಬಣ ಷರತ್ತು ವಿಧಿಸಿತ್ತು. ಈ ಷರತ್ತಿಗೆ ಪಳನಿಸ್ವಾಮಿ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಪನ್ನೀರ್‍ಸೆಲ್ವ ಬಣ ವಿಲೀನಕ್ಕೆ ಒಪ್ಪಿಗೆ ನೀಡಿದೆ.