ಬೆಂಗಳೂರು: ಯಾರು ಏನೇ ಅಂದರೂ ತ್ರಿಮೂರ್ತಿಗಳ ಶ್ರೀರಕ್ಷೆಯಿಂದಾಗಿ ಡಿ.ಕೆ ಶಿವಕುಮಾರ್ ಗೆ ಕೆಪಿಸಿಸಿ ಪಟ್ಟ ಒಲಿಯಲಿದೆ. ಆ ತ್ರಿಮೂರ್ತಿಗಳ ಡಿಕೆಶಿ ಪಟ್ಟಾಭಿಷೇಕಕ್ಕೆ ಮುಹೂರ್ತ ಸಿದ್ಧಪಡಿಸಿದ್ದಾರೆ.
ರಾಜ್ಯ ಕೈಪಾಳಯದ ಹಲವು ನಾಯಕರು ಡಿಕೆಶಿಗೆ ಕೆಪಿಸಿಸಿ ಪಟ್ಟ ತಪ್ಪಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಸ್ವತಃ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಡಿಕೆಶಿ ಪರವಿದ್ದರೂ ರಾಜ್ಯ ಕೈ ನಾಯಕರು ಪ್ರಯತ್ನ ಕೈ ಬಿಟ್ಟಿಲ್ಲ. ಆದರೆ ಆ ಮೂವರು ನಾಯಕರು ಮಾತ್ರ ಡಿಕೆಶಿ ಪರವಾಗಿ ಪಟ್ಟು ಹಿಡಿದು ಕೂತಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಅಹಮ್ಮದ್ ಪಟೇಲ್, ಎ.ಕೆ ಆಂಟೋನಿ ಹಾಗೂ ಮಧಿಸೂದನ್ ಮಿಸ್ತ್ರಿ.
ಮೂವರು ನಾಯಕರುಗಳಿಗೂ ತಮ್ಮದೇ ಆದ ಕಾರಣಕ್ಕೆ ಡಿಕೆಶಿ ಬೆಂಬಲಕ್ಕೆ ನಿಂತಿದ್ದಾರೆ. ತಮ್ಮನ್ನು ರಾಜ್ಯಸಭಾ ಸದಸ್ಯರಾಗಿಸಲು ಇನ್ನಿಲ್ಲದ ರಿಸ್ಕ್ ತೆಗೆದುಕೊಂಡ ಡಿ.ಕೆ ಶಿವಕುಮಾರ್ ರನ್ನ ಕೆಪಿಸಿಸಿ ಪಟ್ಟಕ್ಕೆ ತರಬೇಕು ಅನ್ನೋದು ಅಹಮ್ಮದ್ ಪಟೇಲ್ ಇಚ್ಚೆ. ಸೋನಿಯಾ ಗಾಂಧಿ ಆಪ್ತರಾದ ಕೇರಳ ಮೂಲದ ಎ.ಕೆ ಆಂಟೋನಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೇರಳ ಮೂಲದ ಕೆ.ಸಿ ವೇಣುಗೋಪಾಲ್ ರನ್ನ ಕಂಡರೆ ಆಗಲ್ಲ. ಆದರೆ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡ ವೇಣುಗೋಪಾಲ್ ಡಿಕೆಶಿ ವಿರುದ್ಧವಿದ್ದಾರೆ. ಇದರಿಂದ ಡಿಕೆಶಿ ಪರ ನಿಂತ ಸೋನಿಯಾ ಆಪ್ತ ಡಿಕೆಶಿ ಪಟ್ಟಾಭಿಷೇಕಕ್ಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
ಸೋನಿಯಾ ಗಾಂಧಿಯವರ ಪರಮಾಪ್ತ ಬಂಟ ಮಧುಸೂದನ್ ಮಿಸ್ತ್ರಿ ಸಹ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಡಿಕೆಶಿ ಪರವಾಗಿ ವರದಿ ನೀಡಿದ್ದಾರೆ. ಹೀಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪರಮಾಪ್ತರಾದ ಮೂವರು ಸಹ ಡಿಕೆಶಿ ಪರವಾಗಿ ನಿಂತಿದ್ದಾರೆ. ಈ ಮೂವರೇ ತಮ್ಮ ಪಟ್ಟಾಭಿಷೇಕಕ್ಕೆ ಕಾರಣವಾಗುತ್ತಾರೆ ಅನ್ನೋ ನಂಬಿಕೆ ಮೇಲೆಯೇ ಡಿಕೆಶಿ ಕೂಲಾಗಿ ದೇವಸ್ಥಾನ ಸುತ್ತತೊಡಗಿದ್ದಾರೆ.