ಬೆಂಗಳೂರು: ಕ್ರಿಕೆಟ್‍ನ ‘ದಿ-ವಾಲ್’ ಭಾರತ ತಂಡದ ಮಾಜಿ ನಾಯಕ, ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಹುಟ್ಟುಹಬ್ಬದಂದೇ ಅವರ ಮಗ ಸಮಿತ್ ತಮ್ಮ ತಂದೆಯನ್ನು ಹೆಮ್ಮೆಪಡಿಸಿದ್ದಾರೆ. ಸಮಿತ್ ಕರ್ನಾಟಕ ತಂಡಕ್ಕೆ ಎಂಟ್ರಿ ಆಗುವ ಮೂಲಕ ತಮ್ಮ ತಂದೆಯ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.
ಇಂದು ರಾಹುಲ್ ದ್ರಾವಿಡ್ ಅವರು ತಮ್ಮ 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಇದೇ ವೇಳೆ ಸಮಿತ್ ಕರ್ನಾಟಕದ ಅಂಡರ್ 14 ತಂಡಕ್ಕೆ ಆಯ್ಕೆಯಾಗಿದ್ದು, ತಂದೆಯ ಹಾದಿಯಲ್ಲಿ ಕ್ರಿಕೆಟ್ ಜೀವನ ಆರಂಭ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದಕ್ಷಿಣ ವಲಯದ ಅಂಡರ್ 14 ಟೂರ್ನಮೆಂಟ್‍ಗೆ ಸಮಿತ್ ಆಯ್ಕೆಯಾಗಿದ್ದಾರೆ. ತಂದೆಯಂತೆ ಬಲಗೈ ಬ್ಯಾಟ್ಸ್ ಮನ್ ಆಗಿರುವ ಸಮಿತ್ ಅತ್ಯುತ್ತಮ ಆಟಗಾರ.
ತಂಡದ ಆಯ್ಕೆಗೆ ಕೆಎಸ್‍ಸಿಎ ನಡೆಸಿದ ಪಂದ್ಯದಲ್ಲಿ ಸಮಿತ್ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಟೂರ್ನಿಯೊಂದರಲ್ಲಿ ದ್ವಿಶತಕ ಮತ್ತು 94 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದರು. ಸಮಿತ್ ಪ್ರತಿಭೆಗೆ ಈಗ ಕರ್ನಾಟಕ ತಂಡದಲ್ಲಿ ಸ್ಥಾನ ಸಿಕ್ಕಿದ್ದು, ಜನವರಿ 16 ರಿಂದ 18ವರೆಗೆ ಬೆಂಗಳೂರು ದಕ್ಷಿಣ ವಲಯ ಟೂರ್ನಮೆಂಟ್ ನಡೆಯಲಿದ್ದು, ತಮ್ಮ ಪ್ರತಿಭೆ ಪ್ರದರ್ಶನ ಮಾಡಲಿದ್ದಾರೆ.
ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಸಮಿತ್‍ಗೆ ತಂದೆ ರಾಹುಲ್ ದ್ರಾವಿಡ್ ಮೊದಲ ಗುರು. ಕ್ರಿಕೆಟ್‍ನಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ದ್ರಾವಿಡ್ ಮಗನನ್ನು ಕ್ರಿಕೆಟ್ ಆಟಗಾರರನ್ನಾಗಿ ಮಾಡಿದ್ದಾರೆ. ಸದ್ಯ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ(NCA) ಮುಖ್ಯಸ್ಥರಾಗಿರುವ ದ್ರಾವಿಡ್ ಆಟಗಾರರು ಫಿಟ್ ಇರುವಂತೆ ನೋಡಿಕೊಳ್ಳುತ್ತಿದ್ದಾರೆ.