ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದಿನಿಂದ 11 ದಿನಗಳ ಉಪವಾಸವನ್ನು ಮಹಾರಾಷ್ಟ್ರದ ನಾಸಿಕ್‌ನಿಂದ (Nashik) ಆರಂಭಿಸಿದ್ದಾರೆ. ಮೋದಿ ಅವರು ನಾಸಿಕ್‌ನಲ್ಲಿರುವ ಪ್ರಸಿದ್ಧ ಕ್ಷೇತ್ರ ಶ್ರೀ ಕಲಾರಾಮ್ ದೇವಸ್ಥಾನದಲ್ಲಿ (Kalaram Temple) ದೇವರ ದರ್ಶನ ಮತ್ತು ವಿಶೇಷ ಪೂಜೆ ಮಾಡುವ ವ್ರತ ಆರಂಭಿಸಿದ್ದಾರೆ.
ಪಂಚವಟಿ ವಿಶೇಷ ಏನು?
ನಾಸಿಕ್‌ನಿಂದ ಮೋದಿ ಉಪವಾಸ ಆರಂಭಿಸಲು ಕಾರಣವಿದೆ. 14 ವರ್ಷಗಳ ವನವಾಸ ಆರಂಭಿಸಿದ ರಾಮ, ಲಕ್ಷ್ಮಣ, ಸೀತೆ ಹೆಚ್ಚಿನ ಸಮಯವನ್ನು ದಂಡಾಕರಣ್ಯದಲ್ಲಿ ಕಳೆದಿದ್ದರು. ಅದರಲ್ಲೂ ಪಂಚವಟಿಯಲ್ಲಿ (Panchvati) ಪರ್ಣ ಕುಟೀರವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಐದು ಆಲದಮರಗಳು ಇದ್ದ ಕಾರಣ ಈ ಜಾಗಕ್ಕೆ ಪಂಚವಟಿ ಎಂಬ ಹೆಸರು ಬಂದಿತ್ತು. ರಾಮ, ಸೀತೆ ಮತ್ತು ಲಕ್ಷ್ಮಣ ತಮ್ಮ ವನವಾಸದ ಬಹು ಸಮಯವನ್ನು ಈ ಜಾಗದಲ್ಲಿ ಕಳೆದಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿ 11 ದಿನಗಳ ವ್ರತದ ಮಹತ್ವ ಏನು?
Advertisement
Advertisement
Advertisement
ವಾಲ್ಮೀಕಿ ರಾಮಾಯಣದ ಎಲ್ಲಾ ಘಟನೆಗಳಗೆ ಇಬ್ಬರು ಮೂಲ ಪ್ರೇರಣೆಯಾಗುತ್ತಾರೆ. ಕೈಕೇಯಿಂದ ರಾಮ 14 ವರ್ಷಗಳ ವನವಾಸಕ್ಕೆ ತೆರಳಿದರೆ ಶೂರ್ಪನಖಿ ಪ್ರಸಂಗದಿಂದಲೇ ರಾಮ ಲಂಕೆಗೆ ಯುದ್ಧಕ್ಕೆ ಹೋಗಬೇಕಾಗುತ್ತದೆ.
Advertisement
ರಾಮಾಯಣ ಕಥೆಯಲ್ಲಿ ಮಹತ್ವದ ತಿರುವ ನೀಡುವ ಶೂರ್ಪನಖಿ (Surpanakha) ದಂಡಾಕರಣ್ಯದಲ್ಲಿ ನೆಲೆಸಿದ್ದಳು. ವಿಶ್ರವಸನಿಂದ ಕೈಕಸಿಯೆಂಬ ರಕ್ಕಸಿಯಲ್ಲಿ ಜನಿಸಿದ ಈಕೆಗೆ ರಾವಣ, ಕುಂಭಕರ್ಣರು ಅಣ್ಣಂದಿರು. ರಾವಣ (Ravana) ಈಕೆಯನ್ನು ವಿದ್ಯುಜ್ಜಿಹ್ವನೆಂಬ ರಾಕ್ಷಸನಿಗೆ ಕೊಟ್ಟು ಮದುವೆ ಮಾಡಿದ್ದ. ರಾವಣ ಒಮ್ಮೆ ದಿಗ್ವಿಜಯಕ್ಕೆ ಹೋಗಿದ್ದಾಗ ವಿದ್ಯುಜ್ಜಿಹ್ವ ಶತ್ರು ಪಕ್ಷವನ್ನು ಸೇರಿದ್ದ. ಇದರಿಂದ ಸಿಟ್ಟಾದ ರಾವಣ ವಿದ್ಯುಜ್ಜಿಹ್ವನನ್ನು ಕೊಂದು ಹಾಕಿದ್ದ. ಈ ವಿಚಾರ ತಿಳಿದು ಶೂರ್ಪನಖಿ ರಾವಣನ ಬಳಿ ಪರಿಪರಿಯಾಗಿ ಬೇಡಿಕೊಂಡ ಬಳಿಕ ಆಕೆಯನ್ನು 14 ಸಾವಿರ ಸೈನಿಕರ ಜೊತೆ ದಂಡಕಾರಣ್ಯಕ್ಕೆ ಕಳುಹಿಸುತ್ತಾನೆ. ಇದನ್ನೂ ಓದಿ: ಜೀವನದಲ್ಲಿ ಮೊದಲ ಬಾರಿಗೆ ಭಾವುಕನಾಗಿದ್ದೇನೆ – 11 ದಿನಗಳ ವ್ರತ ಆರಂಭಿಸಿದ ಮೋದಿ
ಗಂಡನಿಲ್ಲದ ಶೂರ್ಪನಖಿ ದಂಡಕಾರಣ್ಯದಲ್ಲಿ ತಿರುಗಾಡುತ್ತಿದ್ದಾಗ ರಾಮನನ್ನು ನೋಡುತ್ತಾಳೆ. ರಾಮನ ಸುಂದರ ರೂಪಕ್ಕೆ ಮನಸೋತ ಶೂರ್ಪನಖಿ ಸುಂದರ ಹೆಣ್ಣಿನ ರೂಪ ಧರಿಸಿ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಾಳೆ. ಈ ವೇಳೆ ರಾಮ ನನಗೆ ಈಗಾಗಲೇ ಮದುವೆಯಾಗಿದೆ ನಾನು ಏಕ ಪತ್ನಿವ್ರತಸ್ಥ ಎಂದು ಹೇಳಿ ಲಕ್ಷ್ಮಣನ ಬಳಿ ಹೋಗುವಂತೆ ಆಕೆಯನ್ನು ಕಳುಹಿಸುತ್ತಾನೆ.
ಲಕ್ಷ್ಮಣನ ಬಳಿ ಬಂದು ಮದುವೆಯಾಗುವಂತೆ ಪರಿ ಪರಿಯಾಗಿ ಬೇಡಿಕೊಳ್ಳುತ್ತಾಳೆ. ಲಕ್ಷ್ಮಣ ಈಕೆಯ ಬೇಡಿಕೆಯನ್ನು ತಿರಸ್ಕರಿಸುತ್ತಾನೆ. ರಾಮ ನನ್ನ ಮನವಿಯನ್ನು ಒಪ್ಪದೇ ಇರಲು ಕಾರಣ ಸೀತೆ ಎಂದು ತಿಳಿದು ಶೂರ್ಪನಖಿ ಆಕೆಯನ್ನು ನುಂಗಲು ಹೋದಾಗ ಲಕ್ಷ್ಮಣ ಆಕೆಯನ್ನು ತಡೆಯುತ್ತಾನೆ. ಅಷ್ಟೇ ಅಲ್ಲದೇ ಲಕ್ಷ್ಮಣ ಆಕೆಯ ಕಿವಿ ಮೂಗುಗಳನ್ನು ಕತ್ತರಿಸುತ್ತಾನೆ. ಈ ಅವಮಾನ ತಾಳಲಾರದೇ ಶೂರ್ಪನಖಿ ರಾವಣನ ಬಳಿ ತೆರಳಿ ದೂರು ನೀಡುತ್ತಾಳೆ. ಸೀತೆಯ ಗುಣ ಹಾಗೂ ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳಿ ರಾವಣನು ಸೀತೆಯನ್ನು ಅಪಹರಿಸಲು ಪ್ರಚೋದನೆ ನೀಡುತ್ತಾಳೆ. ಸಹೋದರಿಗೆ ಅವಮಾನ ಮಾಡಿದ್ದಕ್ಕೆ ರಾವಣ ಮಾರು ವೇಷ ಧರಿಸಿ ಪಂಚವಟಿಯಿಂದಲೇ ಸೀತೆಯನ್ನು ಅಪಹರಣ ಮಾಡುತ್ತಾನೆ. ಅಯೋಧ್ಯೆ ರಾಮಮಂದಿರಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ: ಅಯೋಧ್ಯೆ ರಾಮ ಮಂದಿರ
ಅಪಹರಣಕ್ಕೂ ಮೊದಲು ಸೀತೆಯ ಬಯಕೆಯಂತೆ ರಾಮ ಚಿನ್ನದ ಜಿಂಕೆಯನ್ನು ಬೆನ್ನಟ್ಟಿದ್ದು, ತನ್ನ ಬಾಣದಿಂದ ಎಳೆದ `ರಕ್ಷಾ ಗಡಿ’ (ಲಕ್ಷ್ಮಣ ರೇಖೆ) ದಾಟಬಾರದೆಂದು ಲಕ್ಷ್ಮಣ ತನ್ನ ಅತ್ತಿಗೆ ಸೀತೆಗೆ ಮನವಿ ಮಾಡಿದ್ದು ಈ ಜಾಗದಲ್ಲೇ. ಈ ಐದು ಆಲದಮರಗಳ ಉದ್ಯಾನವಿರುವ ಪರಿಸರವೇ ಸೀತಾಪಹರಣಕ್ಕೆ ಸಾಕ್ಷಿಯಾದ ಸ್ಥಳ.
ರಾಮಾಯಣ ಮಹಾಕಾವ್ಯದಲ್ಲಿ ಲಂಕೆಯಷ್ಟೇ ಪಂಚವಟಿ ಪ್ರಾಮುಖ್ಯತೆ ಪಡೆದಿದೆ. ವನವಾಸದ 10 ವರ್ಷ ಪೂರ್ಣಗೊಂಡ ಬಳಿಕ ರಾಮ, ಸೀತೆ, ಲಕ್ಷ್ಮಣ ಸುಮಾರು ಎರಡೂವರೆ ವರ್ಷ ನೆಲೆಸಿರುತ್ತಾರೆ. ಪಂಚವಟಿ ಇರುವುದು ಇರುವುದು ನಾಸಿಕ್‌ನ ಉತ್ತರ ಭಾಗದಲ್ಲಿ. ʼನಾಸಿಕʼ ಎಂದರೆ ಸಂಸ್ಕೃತದಲ್ಲಿ ಮೂಗು. ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿ ಎಸೆದ ಸ್ಥಳವೇ ʼನಾಸಿಕ್ʼ ಎಂದು ಕಥೆ ಹೇಳುತ್ತದೆ.
ತ್ರಿವೇಣಿ ಸಂಗಮ:
ತ್ರಿವೇಣಿ ಸಂಗಮ (Triveni Sangam) ನಾಸಿಕ್‌ನ ಇನ್ನೊಂದು ವಿಶೇಷ. ವರುಣಿ, ತರುಣಿ ಮತ್ತು ಗೋದಾವರಿ ನದಿಗಳು ಇಲ್ಲಿ ಸಂಗಮವಾಗುತ್ತದೆ. ವರುಣಿ ಮತ್ತು ತರುಣಿ ನದಿಗಳು ಗುಪ್ತಗಾಮಿನಿಯಾಗಿ ಹರಿಯುತ್ತದೆ ಎನ್ನುವ ನಂಬಿಕೆಯಿದೆ. ಸಪ್ತ ಪವಿತ್ರ ನದಿಗಳಲ್ಲಿ ಒಂದಾದ ದಕ್ಷಿಣ ಗಂಗೆ ಎನಿಸಿದ ಗೋದಾವರಿ ನಾಸಿಕ್ ಸಮೀಪದ ತೃಯಂಬಕೇಶ್ವರಲ್ಲಿ ಹುಟ್ಟುತ್ತಾಳೆ. ಇದನ್ನೂ ಓದಿ: ಮಂಗಳೂರಿನ ಸಂಘ ನಿಕೇತನದಿಂದ ಅಯೋಧ್ಯೆಗೆ ಹೊರಟ ನಮ್ಮನ್ನು ಡೈಮಂಡ್ ಗಂಜ್‌ನಲ್ಲಿ ಬಂಧಿಸಿದ್ರು!
ಕುಂಭಮೇಳ:
ದೇಶದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳ (Kumbh Mela) ನಡೆಯುವ ಸ್ಥಳಗಳಲ್ಲಿ ನಾಸಿಕ್ ಕೂಡ ಒಂದಾಗಿದೆ. ಸಮುದ್ರಮಥನದ ಸಂದರ್ಭದಲ್ಲಿ ರಾಕ್ಷಸರಿಗೆ ಅಮೃತ ದೊರೆಯದಂತೆ ಅದನ್ನು ಬಚ್ಚಿಡಲು ಪ್ರಯತ್ನಿಸಿದರಂತೆ. ಆ ಸಂದರ್ಭದಲ್ಲಿ ಅಮೃತಕುಂಭದಿಂದ ನಾಲ್ಕು ಹನಿಗಳು ಬಿದ್ದವು. ಆ ಪ್ರದೇಶಗಳೇ- ಅಲಹಾಬಾದ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್. ಹೀಗಾಗಿ ಈ ನಾಲ್ಕೂ ಸ್ಥಳಗಳಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ.