ಚಿಕ್ಕಬಳ್ಳಾಪುರ: ಕೊರೊನಾ ಸಂದರ್ಭದ ದುರ್ಲಾಭ ಪಡೆದು ಬಿತ್ತನೆ ಬೀಜ, ಕ್ರಿಮಿನಾಶಕ ಹಾಗೂ ರಸಗೊಬ್ಬರಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರು ಮತ್ತು ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ತುಂಬಾ ಬಿಕ್ಕಟ್ಟಿನ ಪರಿಸ್ಥಿತಿ ಇದೆ. ಕೃಷಿ ಕ್ಷೇತ್ರ ಅನುಭವಿಸಿದ ನಷ್ಟದ ಪ್ರಮಾಣದಷ್ಟು ಮತ್ಯಾವ ಕ್ಷೇತ್ರವೂ ನಷ್ಟ ಅನುಭವಿಸಿಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಧ್ಯವಾದಷ್ಟೂ ರೈತರ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಿಳಿಸಿದರು.
Advertisement
Advertisement
ಈ ಮಧ್ಯೆ ಕೆಲವು ರಸಗೊಬ್ಬರಗಳ ಅಂಗಡಿಯ ಮಾಲೀಕರು ರಸಗೊಬ್ಬರ, ಕ್ರಿಮಿನಾಶಕ ಮತ್ತು ಬಿತ್ತನೆ ಬೀಜಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಈ ರೀತಿ ಪರಿಸ್ಥಿತಿಯ ದುರ್ಲಾಭ ಪಡೆದು ಮೊದಲೇ ಕಷ್ಟನಷ್ಟಕ್ಕೆ ಸಿಲುಕಿರುವ ರೈತರನ್ನು ಶೋಷಿಸುವವರನ್ನು ಸರ್ಕಾರ ಸಹಿಸುವ ಪ್ರಶ್ನೆಯೇ ಇಲ್ಲ. ಅಂತವರ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಲಿದೆ ಎಂದು ಎಚ್ಚರಿಸಿದರು.
Advertisement
ಬೇಗ ಕೊಳೆಯುವ ಕೃಷಿ ಉತ್ಪನ್ನಗಳನ್ನು ಕೆಲಕಾಲ ಶೇಖರಿಸಿಡಲು ಅಗತ್ಯವಿರುವ ಶೀಥಲ ಗೃಹಗಳು ಹಾಗೂ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕಗಳನ್ನು ತೆರೆಯಲು ಅವಶ್ಯಕತೆ. ಇದು ಸರ್ಕಾರದ ಗಮನಕ್ಕೂ ಬಂದಿದೆ. ಈ ಸಲಹೆಗಳನ್ನು ಸಿಎಂ ಯಡಿಯೂರಪ್ಪ ಅವತಿಗೂ ಶಿಫಾರಸು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
Advertisement
ರಾಜ್ಯ ಕೃಷಿ ಇಲಾಖೆಯಲ್ಲಿ ಶೇ.50ರಷ್ಟು ಹುದ್ದೆಗಳು ಖಾಲಿಯಿದ್ದು, ಇದರಿಂದ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಸಹಿಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಕೆಲವೆಡೆ ಕಳಪೆ ಕೀಟನಾಶಕ, ಬಿತ್ತನೆ ಬೀಜ ಮಾರಾಟವಾಗುತ್ತಿದ್ದು, ಈವರೆಗೆ 370 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಪೈಕಿ 175 ಮಾದರಿಗಳು ಕಳಪೆ ಎಂದು ಖಚಿತ ಪಟ್ಟಿವೆ. 32 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಚಿಕ್ಕಬಳ್ಳಾಪುರದ ಅಂಗಡಿಯೊಂದರಲ್ಲಿ 20 ಲಕ್ಷ ರೂ.ಗಳ ಕಳಪೆ ಸರಕನ್ನು ಜಫ್ತಿ ಮಾಡಲಾಗಿದೆ ಎಂದು ತಿಳಿಸಿದರು.