-ಇಲ್ಲಿರುವ ಮಕ್ಕಳಲ್ಲಿ ಯಾರಾದರೂ ಒಬ್ಬರು ಮುಂದೆ ಡಿಕೆ ಶಿವಕುಮಾರ್ ಆಗಬೇಕು
ರಾಮನಗರ: ಕೃಷಿ (Agriculture) ಕೂಡ ಈಗ ಒಂದು ಉದ್ಯಮವೇ. ಉದ್ಯೋಗಿಗಳಾಗುವುದಕ್ಕಿಂತ ಹತ್ತಾರು ಜನರಿಗೆ ಉದ್ಯೋಗ ನೀಡುವ ಉದ್ದಿಮೆದಾರರಾಗುವುದು ನಿಮ್ಮ ಗುರಿಯಾಗಬೇಕು ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಸಲಹೆ ನೀಡಿದರು.
ಕನಕಪುರದ (Kanakapura) ಕರಿಯಪ್ಪ ಕೃಷಿ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಹಾಲು ಹಾಗೂ ರೇಷ್ಮೆ ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಇದರ ಜೊತೆಗೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ಹೂವಿನ ಬೆಳೆ ಹಾಕುವುದರಿಂದ ಆರ್ಥಿಕವಾಗಿ ಪ್ರಗತಿ ಸಾಧಿಸಬಹುದು. ನೀವು ಕೇವಲ ಎಂಜಿನಿಯರ್ ಆಗುವುದಷ್ಟೇ ನಿಮ್ಮ ಗುರಿಯಾಗುವುದು ಬೇಡ. ನೀವೇ ಹತ್ತಾರು ಜನರಿಗೆ ಉದ್ಯೋಗ ಸೃಷ್ಟಿಸುವಂತೆ ನೀವು ಬೆಳೆಯಬೇಕು. ಸ್ವಯಂ ಉದ್ಯೋಗವೇ ಶ್ರೇಷ್ಠ ಉದ್ಯೋಗವಾಗಿದೆ. ಆ ನಿಟ್ಟಿನಲ್ಲಿ ನೀವು ಗಮನಹರಿಸಿ ಎಂದರು. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಬೈಕ್ – ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದ ಸವಾರ ಸಾವು
ಈಗಿನ ಕಾಲದಲ್ಲಿ ಯಾವುದೇ ಶಿಕ್ಷಕರು ತಾವು ಮಕ್ಕಳಿಗಿಂತ ಬುದ್ಧಿವಂತರು ಎಂದು ಭಾವಿಸಿದರೆ ಅದು ತಪ್ಪು. ಇನ್ನು ಮುಂದೆ ಶಾಲಾ ಕಾಲೇಜುಗಳಲ್ಲಿ ಯಾವುದೇ ಕಾರ್ಯಕ್ರಮವಾದರೂ ಶಿಕ್ಷಕರು ವೇದಿಕೆ ಮೇಲೆ ಇರಬಾರದು. ಇಡೀ ಕಾರ್ಯಕ್ರಮವನ್ನು ಮಕ್ಕಳೇ ನಡೆಸಬೇಕು. ಅವರೇ ಸ್ವಾಗತ ಭಾಷಣ ಮಾಡಬೇಕು. ಇದರಿಂದ ಅವರಲ್ಲಿನ ಪ್ರತಿಭೆ ಅನಾವರಣವಾಗುತ್ತದೆ. ಅವರಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ನಾಯಕರನ್ನು ಬೆಳೆಸುವವನೇ ನಿಜವಾದ ನಾಯಕ. ಮಕ್ಕಳಿಗೆ ಉತ್ತೇಜನ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು – ಭಾನುವಾರ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾವೇಶ
ಇಲ್ಲಿರುವ ಮಕ್ಕಳಲ್ಲಿ ಯಾರಾದರೂ ಒಬ್ಬರು ಮುಂದೆ ಡಿ.ಕೆ. ಶಿವಕುಮಾರ್ ಆಗಬೇಕು. ನಾನು ಕೂಡ ಶಿಕ್ಷಣ ಸಂಸ್ಥೆ ನಡೆಸಿದ್ದೇನೆ. ಈಗ ನನ್ನ ಮಕ್ಕಳಿಗೆ ಜವಾಬ್ದಾರಿ ವಹಿಸಿದ್ದೇನೆ. ಈ ಕಾಲೇಜಿಗೆ ಬೆಂಗಳೂರು ದಕ್ಷಿಣ ಕೃಷಿ ಕಾಲೇಜು ಎಂದು ಹೆಸರಿಡಲು ಬಯಸಿದ್ದೆ. ಆದರೆ ನೀವು ಈ ಶಾಲೆಯ ಸಂಸ್ಥಾಪಕರಾದ ಕರಿಯಪ್ಪನವರ ಹೆಸರು ಇಟ್ಟಿದ್ದೀರಿ. ಅವರ ಹೆಸರಾಗಿರುವುದರಿಂದ ಇದು ಹಾಗೇ ಇರಲಿ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು ಎಂಬುದು ನಿಮ್ಮೆಲ್ಲರ ತಲೆಯಲ್ಲಿರಲಿ. ನಿಮ್ಮ ತಂದೆ ತಾಯಿ ಒಂದಿಂಚೂ ಜಾಗವನ್ನು ಮಾರಲು ಬಿಡಬೇಡಿ. ಮುಂದೆ ಈ ಭೂಮಿಗೆ ಯಾವ ಬೆಲೆ ಬರಲಿದೆ ಎಂದು ನಿಮಗೆ ಊಹೆಯೂ ಇಲ್ಲ. ಚೆಲುವರಾಯಸ್ವಾಮಿ ಅವರು ತಮ್ಮ ಸಚಿವಾಲಯದಿಂದ ಈ ಕೃಷಿ ಕಾಲೇಜು ನೀಡಿ ನಿಮ್ಮೆಲ್ಲರಿಗೂ ನೆರವು ನೀಡಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಗುರಿ: ಶೈಲೇಂದ್ರ ಬೆಲ್ದಾಳೆ