Wednesday, 18th July 2018

Recent News

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರ್ಯಕ್ಕೆ ಸಿಎಂ ಅಭಿನಂದನೆ

ಹಾಸನ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆ ಕಾರ್ಯದಲ್ಲಿ ಜಿಲ್ಲೆ ಗಣನೀಯ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದ್ದಾರೆ.

ಜಿಲ್ಲೆ ಈಗಾಗಲೇ ಶೇ.80 ಕ್ಕೂ ಅಧಿಕ ಪ್ಲಾಟ್‍ಗಳು ಮುಕ್ತಾಯಗೊಂಡಿದ್ದು, ರೋಹಿಣಿ ಸಿಂಧೂರಿ ಅವರ ಮಾರ್ಗದರ್ಶನ ಹಾಗೂ ನಿರ್ದೇಶನದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 900ಕ್ಕೂ ಅಧಿಕ ಸಿಬ್ಬಂದಿ, ಪ್ರತಿದಿನ 14 ಗಂಟೆಗಳು ನಿರಂತರ ಕೆಲಸ ಮಾಡಿ ಬೆಳೆ ಸಮೀಕ್ಷೆ ದಾಖಲೆಯನ್ನು ಬಹುತೇಕ ಮುಕ್ತಾಯಗೊಳಿಸಿದ್ದಾರೆ. ಇದರಿಂದ ತ್ವರಿತವಾಗಿ ಪ್ರಗತಿ ಸಾಧಿಸಿದ ಕಾರಣದಿಂದ ಸಿದ್ದರಾಮಯ್ಯ ಅವರು ಅಭಿನಂದಿಸಿದ್ದಾರೆ.

ಏನಿದು ಸಮೀಕ್ಷೆ?
ಮೊಬೈಲ್ ಆ್ಯಪ್ ಆಧಾರಿತ ಬೆಳೆ ಸಮೀಕ್ಷೆ ಇದಾಗಿದ್ದು, ಪ್ರತಿ ಗ್ರಾಮವಾರು ಸರ್ವೆ ನಂ.ವಾರು ಬೆಳೆಗಳ ವಿವರಗಳನ್ನು ದಾಖಲಿಸಿ ತಂತ್ರಾಂಶದ ಜೊತೆ ಫೋಟೋಗಳನ್ನು ಸಹ ಅಪ್ಲೋಡ್ ಮಾಡಲಾಗುತ್ತಿದೆ.

ಜಿಲ್ಲೆಯ 2,581 ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ಕೈಗೊಂಡಿದ್ದು, ಗ್ರಾಮ ಸಹಾಯಕರು, ಲೆಕ್ಕಿಗರು, ಕಂದಾಯ ನಿರೀಕ್ಷಕರು, ತೋಟಗಾರಿಕೆ ಮತ್ತು ಕೃಷಿ ಅಧಿಕಾರಿಗಳು ಒಳಗೊಂಡಂತೆ ಸುಮಾರು 930 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದರಂತೆ ಇಲ್ಲಿವರೆಗೂ ಸುಮಾರು 11,43,891 ಪ್ಲಾಟ್‍ಗಳ ಮಾಹಿತಿಯನ್ನು ಕ್ರೋಢಿಕರಿಸಿ ಅದನ್ನು ಆ್ಯಪ್ ಗೆ ಅಪ್ಲೋಡ್ ಮಾಡಲಾಗಿದೆ.

ಇಡೀ ರಾಜ್ಯದಲ್ಲೇ ಅತಿಹೆಚ್ಚು ಪ್ಲಾಟ್‍ಗಳಲ್ಲಿ ಡೇಟಾ ಕ್ರೋಢಿಕರಿಸಿ ಮಾಹಿತಿ ಅಪ್‍ಡೇಟ್ ಮಾಡಿರುವುದರಲ್ಲಿ ಹಾಸನ ಜಿಲ್ಲೆ ಮುಂಚೂಣಿಯಲ್ಲಿರುವುದು ಹೆಗ್ಗಳಿಕೆಯ ವಿಚಾರವಾಗಿದೆ. ಹಾಸನದ ತಾಲೂಕು ಒಂದರಲ್ಲಿಯೇ ಸುಮಾರು 205 ಜನರನ್ನು ಗಣತಿ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಇರುವ 2.95 ಲಕ್ಷ ಪ್ಲಾಟ್‍ಗಳಲ್ಲಿ 5 ಗುಂಟೆಗಿಂತ ಕಡಿಮೆ ಇರುವ ಹಾಗೂ ಕೃಷಿಯೇತರ ಉದ್ದೇಶಕ್ಕೆ ಬಳಸಲಾಗಿರುವ ಜಮೀನುಗಳನ್ನು ಹೊರತುಪಡಿಸಿ ಈಗಾಗಲೇ 2.22 ಪ್ಲಾಟ್‍ಗಳ ಸರ್ವೇ ಕಾರ್ಯ ಮುಗಿದಿದೆ ಎಂದು ಹಾಸನ ತಹಶೀಲ್ದಾರ್ ಶಿವಶಂಕರ್ ಅವರು ತಿಳಿಸಿದ್ದಾರೆ.

ಸಾತೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಂಡಗೌಡನಹಳ್ಳಿ ಗ್ರಾಮದಲ್ಲಿ ಇಂದು ತಹಶೀಲ್ದಾರ್ ಶಿವಶಂಕರ್ ಹಾಗೂ ಗ್ರಾಮ ಲೆಕ್ಕಿಗರಾದ ಸೋಮಶೇಖರ್ ಅವರು ಬೆಳೆ ಸಮೀಕ್ಷೆ ಸಂದರ್ಭದಲ್ಲಿ ಅನುಸರಿಸಲಾಗಿರುವ ಮಾರ್ಗಗಳನ್ನು ತಿಳಿಸಿದ್ದಾರೆ. ಪ್ರತಿಯೊಂದು ಗ್ರಾಮದ ಎಲ್ಲಾ ಪಹಣಿ ವಿವರಗಳನ್ನು ಮೊಬೈಲ್ ನಲ್ಲಿ ಡೌನ್‍ಲೋಡ್ ಮಾಡಿ ನಿಗದಿಪಡಿಸಿರುವ ತಂತ್ರಾಂಶದಲ್ಲಿ ಬೆಳೆ ವಿವರ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಲಾಗುವುದು. ಜೊತೆಗೆ ಮುಂಗಾರು, ಹಿಂಗಾರು, ಬೆಸಿಗೆ ಬೆಳೆ, ಮಿಶ್ರ ಬೆಳೆಗಳು ಬಿತ್ತನೆಯಾಗಿದೆಯೇ? ಕಟಾವು ಮಾಡಲಾಗಿದೆಯೇ? ಎಂಬ ಮಾಹಿತಿಯನ್ನು ಕೂಡ ದಾಖಲಿಸಲಾಗುವುದು ಎಂದು ವಿವರಿಸಿದ್ದಾರೆ.

ಉದ್ದೇಶ ಏನು?
ಜಮೀನು ಕ್ಷೇತ್ರವನ್ನು ವಿವಿಧ ಬೆಳೆ ಸ್ವರೂಪಗಳಿಗೆ ಸಮೀಕರಿಸವುದು. ವಿವಿಧ ಬೆಳೆಗಳಿಗೆ ಸರಿಯಾದ ಮೊತ್ತದ ಸಹಾಯ ಧನದ ಅಂದಾಜು ಪ್ರಕ್ರಿಯೆ, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಫಸಲು ನಷ್ಟದ ನೈಜ ಅಂದಾಜು ಮತ್ತು ರೈತರಿಗೆ ಸಕಾಲಿಕ ಮತ್ತು ನ್ಯಾಯಯುತ ಪರಿಹಾರ ಪಾವತಿ ಮಾಡುವುದು. ಪಹಣಿ ಪತ್ರಿಕೆ ಮತ್ತು ವಿಮೆ ದಾಖಲೆಗಳಲ್ಲಿ ಪರಸ್ಪರ ನೈಜ ಮತ್ತು ದಾಖಲೆಗಳ ಪರಿಶೀಲಿಸಲಾಗುತ್ತದೆ.

ಯಾವೆಲ್ಲ ಮಾಹಿತಿ ಸಂಗ್ರಹಿಸಲಾಗುತ್ತದೆ?
ರೈತರ ಮಾಲೀಕತ್ವದ ವಿವರ, ಭೂಮಿಯ ವಿಧ, ಬೆಳೆ ಹೆಸರು, ನೀರಾವರಿ ಮೂಲ, ಬೆಳೆಯ ವಿಸ್ತೀರ್ಣ, ಬೆಳೆ (ಶುದ್ಧ, ಮಿಶ್ರ ಮತ್ತು ಅಂತರ ಬೆಳೆ, ತೋಟದ ಬೆಳೆ, ಪ್ಲಾಂಟೇಷನ್ ಬೆಳೆ, ಭಾಯಯತ ಬೆಳೆ) ಇತ್ಯಾದಿಗಳ ಮಾಹಿತಿ ನೀಡುವುದು. ಜಮೀನಿನ ಛಾಯಾಚಿತ್ರ ವಿವರಗಳನ್ನು ದಾಖಲಿಸಿ ಪ್ರತಿ ಸರ್ವೇ ನಂಬರ್/ ಹಿಸ್ಸಾದ ಜಿಯೋ ಕೋರ್ಡಿನೇಟ್ಸ್ (Geo Co-ordinates) ಮಾಡಲಾಗುತ್ತದೆ. ಬೆಳೆ ವಿವರದ ಜೊತೆಗೆ ಮಾಲೀಕರ ಆಧಾರ್ ವಿವರಗಳನ್ನೂ ಕೂಡ ದಾಖಲಿಸಲಾಗುತ್ತದೆ.

ಮಾಹಿತಿ ಸಂಗ್ರಹಣೆ ಹೇಗೆ?
ಮೊದಲಿಗೆ ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಯೊಂದಿಗೆ ರೈತರ ಮತ್ತು ಬೆಳೆಯ ವಿವರಗಳ ಸಂಗ್ರಹಣೆ ಮಾಡುವುದು. ನಂತರ ಮೇಲ್ವಿಚಾರಕರಿಂದ Random ಸಮೀಕ್ಷೆ ನಡೆಸಿ ಆಯ್ಕೆ ಮಾಡಿದ ದಾಖಲೆಗಳ ಛಾಯಾಚಿತ್ರಗಳ ಪರಿಶೀಲಿಸಲಾಗುತ್ತದೆ. ಅವಶ್ಯಕತೆ ಇದ್ದಲ್ಲಿ ಡಾಟಾವನ್ನು ಸರಿಪಡಿಸಲಾಗುತ್ತದೆ. ಅಂತಿಮವಾಗಿ ಕ್ರೋಡೀಕೃತ ದಾಖಲೆಗಳನ್ನು ವಿವಿಧ ಇಲಾಖೆಗಳಿಂದ ಬಳಕೆ ಮಾಡಿಕೊಳ್ಳಲಾಗುತ್ತದೆ.

ಬೆಳೆ ಸಮೀಕ್ಷೆ – ತಾಲ್ಲೂಕುವಾರು ಪ್ರಗತಿ: (ನ. 16ರ ಅಂತ್ಯಕ್ಕೆ) ಆಲೂರು -ಶೇ98.89, ಬೇಲೂರು -ಶೇ86.02, ಅರಸೀಕೆರೆ -ಶೇ84.36, ಸಕಲೇಶಪುರ -ಶೇ83.74, ಹಾಸನ -ಶೇ75.47, ಚನ್ನರಾಯಪಟ್ಟಣ -ಶೇ74.10, ಅರಕಲಗೂಡು -ಶೇ 72.20 ಹಾಗೂ ಹೊಳೆನರಸೀಪುರ – ಶೇ65 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ.

ಯಾರು ರೋಹಿಣಿ ಸಿಂಧೂರಿ?
ಈ ಹಿಂದೆ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರು. ರಾಜ್ಯದಲ್ಲಿ ಮೊದಲ ಬಾರಿಗೆ ಭೂ ದಾಖಲೆಗಳ ಕುರಿತಂತೆ ವಿನ್ಯಾಸಗೊಂಡಿರುವ ಎಂ -ಆಸ್ತಿ ಅಪ್ಲಿಕೇಷನ್ ತಂದಿದ್ದರು.

ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಪಣ ತೊಟ್ಟಿದ್ದ ರೋಹಿಣಿ ಸಿಂಧೂರಿ ಅವರು ಹಳ್ಳಿ ಹಳ್ಳಿಗೆ ಹೋಗಿ, ಬಯಲು ಶೌಚಕ್ಕೆ ಹೋಗುವವರಿಗೆ ಶೌಚಾಲಯ ಬಳಸುವಂತೆ ತಿಳುವಳಿಕೆ ಹೇಳುವ ಮೂಲಕ ವಿಶೇಷ ಅಭಿಯಾನ ಮಾಡುತ್ತಿದ್ದರು.

ನಿರ್ಮಲ್ ಭಾರತ್ ಯೋಜನೆಯಡಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಶೌಚಾಲಯ ನಿರ್ಮಾಣ ಗುರಿ ಸಾಧಿಸಿದ್ದ ಇವರ ಅಧಿಕಾರ ಅವಧಿಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಮಂಡ್ಯ ಜಿಲ್ಲೆ ಭಾರತದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಸಿಇಓ ಅವರ ಕಾರ್ಯ ವೈಖರಿಯನ್ನು ನೋಡಿ ಮಂಡ್ಯದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದರು.

2015ರ ಸೆಪ್ಟೆಂಬರ್ ನಲ್ಲಿ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಿಸಿ ವರ್ಗಮಾಡಿತ್ತು. ಈಗ ಅಲ್ಲಿಂದ ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿ ಹಾಸನಕ್ಕೆ ಬಂದಿದ್ದಾರೆ.

Leave a Reply

Your email address will not be published. Required fields are marked *