ವೊಡಾಫೋನ್‌ ಐಡಿಯಾದಲ್ಲಿ ಈಗ ಭಾರತ ಸರ್ಕಾರವೇ ಅತಿ ದೊಡ್ಡ ಪಾಲುದಾರ

Public TV
3 Min Read
Vodafone Idea Ltd

– ಸರ್ಕಾರಕ್ಕೆ ಶೇ.36ರಷ್ಟು ಷೇರನ್ನು ಮಾರಾಟ ಮಾಡಲು ಮುಂದಾದ ವಿಐಎಲ್‌
– ಎಜಿಆರ್‌ ಸುಳಿಯಲ್ಲಿ ಸಿಲುಕಿ ಷೇರು ಮಾರಾಟ

ನವದೆಹಲಿ: ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕಂಪನಿಯಲ್ಲಿ ಈಗ ಭಾರತ ಸರ್ಕಾರ ಅತಿ ದೊಡ್ಡ ಪಾಲುದಾರನಾಗಿ ಹೊರಹೊಮ್ಮಿದೆ.

ಹೌದು. ಭಾರತ ಸರ್ಕಾರವೇ ಷೇರುಗಳನ್ನು ಖರೀದಿಸಿಲ್ಲ ಬದಲಾಗಿ ವಿಐಎಲ್‌ ಕಂಪನಿಯೇ ಶೇ.36 ರಷ್ಟು ಷೇರನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡುವುದಾಗಿ ಘೋಷಿಸಿದೆ.

ಸಾಲದ ಸುಳಿಯಲ್ಲಿರುವ ವಿಐಎಲ್ ಕಂಪನಿ ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪಾವತಿಸಬೇಕಿದೆ. ಅಂದಾಜಿನ ಪ್ರಕಾರ ಕಂಪನಿ ಬಡ್ಡಿಯ ಮೊತ್ತವಾಗಿ ಸುಮಾರು 16,000 ಕೋಟಿ ರೂ.ವನ್ನು ಪಾವತಿಸಬೇಕಿದೆ. ಇಷ್ಟೊಂದು ಮೊತ್ತವನ್ನು ಪಾವತಿಸಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತನ್ನ ಬಳಿ ಇರುವ ಷೇರನ್ನೇ ಮಾರಾಟ ಮಾಡಲು ಆಡಳಿತ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

Vodafone Idea Ltd 1

ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಮಾಹಿತಿಯಲ್ಲಿ 16,000 ಕೋಟಿ ರೂ. ಬಡ್ಡಿ ಮೊತ್ತ ಪಾವತಿ ಸಂಬಂಧ ಸರ್ಕಾರಕ್ಕೆ 10 ರೂ. ಮುಖಬೆಲೆಗೆ 1 ಷೇರನ್ನು ಮಾರಾಟ ಮಾಡಲು ಆಡಳಿತ ಮಂಡಳಿಯ ನಿರ್ದೇಶಕರು ಅನುಮೋದಿಸಿದ್ದಾರೆ ಎಂದು ವಿಐಎಲ್‌ ತಿಳಿಸಿದೆ. ಶೇ.36 ರಷ್ಟು ಷೇರನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡಿದ ಬಳಿಕ ವಿಐಎಲ್‌ನಲ್ಲಿ ವೊಡಾಫೋನ್ ಗ್ರೂಪ್ ಶೇ.28.5 ಆದಿತ್ಯ ಬಿರ್ಲಾ ಗ್ರೂಪ್‌ ಶೇ.17.8 ರಷ್ಟು ಷೇರನ್ನು ಉಳಿಸಿಕೊಳ್ಳಲಿದೆ.

ಈ ನಿರ್ಧಾರ ಪ್ರಕಟವಾಗುತ್ತಿದಂತೆ ವಿಐಎಲ್‌ ಷೇರು ಬೆಲೆ ಭಾರೀ ಕುಸಿತ ಕಂಡಿದೆ. ಇಂದು 3.05 ರೂ. ಕುಸಿತಗೊಂಡು ಅಂತಿಮವಾಗಿ 11.80 ರೂ.ಯಲ್ಲಿ ಇಂದಿನ ವ್ಯವಹಾರ ಮುಗಿಸಿದೆ. ಇದನ್ನೂ ಓದಿ: ಶೇ.100 ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕಿಲ್ಲ – ಟೆಲಿಕಾಂ ಕಂಪನಿಗಳಿಗೆ ಹಲವು ಕೊಡುಗೆ ನೀಡಿದ ಕೇಂದ್ರ

SUPREME COURT

ಬಾಕಿ ಎಷ್ಟಿದೆ?
ಎಜಿಆರ್ ಪ್ರಕರಣದಲ್ಲಿ ವೊಡಾಫೋನ್ ಐಡಿಯಾ ಲಿಮಿಟೆಡ್ ಕಂಪನಿ ಒಟ್ಟು 58,254 ಕೋಟಿ ರೂ.ವನ್ನು ಪಾವತಿಸಬೇಕಿತ್ತು. ಆದರೆ ಇಲ್ಲಿಯವರೆಗೆ ಕಂಪನಿ ಕೇವಲ 7,584 ಕೋಟಿ ರೂ. ಪಾವತಿಸಿದ್ದು ಇನ್ನೂ 50,399 ಕೋಟಿ ರೂ. ಪಾವತಿಸಬೇಕಿದೆ. ಸುಪ್ರೀಂ ಕೋರ್ಟ್‌ 2031ರ ಒಳಗಡೆ ಈ ಹಣವನ್ನು ಪಾವತಿಸಬೇಕು ಎಂದು ಕಂಪನಿಗಳಿಗೆ ಗಡುವು ನೀಡಿದೆ.

FI0De2fVcAIYVk8

ಏರ್‌ಟೆಲ್‌ ಕಂಪನಿಯೂ ಎಜಿಆರ್‌ ಮೊತ್ತವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಿದೆ. ಆದರೆ ನಾನು ಸರ್ಕಾರಕ್ಕೆ ತನ್ನ ಷೇರನ್ನು ಮಾರಾಟ ಮಾಡುವುದಿಲ್ಲ ಎಂದು ಕಂಪನಿ ತಿಳಿಸಿದೆ.

FI0DfdJVEAI7guS

ಏನಿದು ಎಜಿಆರ್?:
ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ. ಇದನ್ನೂ ಓದಿ: ಡಿಸೆಂಬರ್ 1 ರಿಂದ ಜಿಯೋ ದುಬಾರಿ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

MOBILE PHONE TOWER

ನುಡಿದಂತೆ ನಡೆದ ಬಿರ್ಲಾ
ಈ ಹಿಂದೆ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕಂಪನಿಯಲ್ಲಿ ತಾವು ಹೊಂದಿರುವ ಷೇರುಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದಾಗಿ ಹೇಳಿದ್ದರು. ಬಿರ್ಲಾ ಅವರು ಕಂಪನಿಯಲ್ಲಿ ಶೇ. 27ರಷ್ಟು ಷೇರು ಹೊಂದಿದ್ದಾರೆ.

Kumar Mangalam Birla vil

ಕೇಂದ್ರ ಸರ್ಕಾರದ ನಮಗೆ ಏನಾದರೂ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ವೊಡಾಫೋನ್, ಐಡಿಯಾದ ಅಧ್ಯಾಯ ಮುಕ್ತಾಯವಾಗಲಿದೆ. ದಿವಾಳಿಯಾದ ನಂತರವೂ ನಾವು ಹಣ ಹೂಡುವುದರಲ್ಲಿ ಅರ್ಥವಿಲ್ಲ ಹೀಗಾಗಿ ನಾವು ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಬಿರ್ಲಾ ಸ್ಪಷ್ಟಪಡಿಸಿದ್ದರು. ಈ ಸಂಬಂಧ ಬಿರ್ಲಾ ಅವರು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ ಜೂನ್ 7ರಂದು ಪತ್ರ ಬರೆದಿದ್ದರು. ಸರ್ಕಾರ ಮಾತ್ರ ಅಲ್ಲದೆ ವಿಐಎಲ್ ಕಂಪನಿಯನ್ನು ಮುನ್ನಡೆಸುವ ಶಕ್ತಿ ಇದೆ ಎಂದು ಸರ್ಕಾರ ಹೇಳುವ ಯಾವುದೇ ಕಂಪನಿಗೆ ಕೂಡ ಷೇರು ವರ್ಗಾವಣೆ ಮಾಡುವುದಾಗಿ ತಿಳಿಸಿದ್ದರು.

ಸರ್ಕಾರ ಹಾಕಿರುವ ಎಜಿಆರ್ ಲೆಕ್ಕ ಸರಿಯಿಲ್ಲ ಎಂದು ಎಂದು ವಿಐಎಲ್ ಸೇರಿದಂತೆ ಟೆಲಿಕಾಂ ಕಂಪನಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಕಂಪನಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ತಿರಸ್ಕರಿಸಿ 10 ವರ್ಷದ ಒಳಗಡೆ ಪಾವತಿಸಬೇಕು ಎಂದು ಗಡುವು ನೀಡಿತ್ತು.

ವಿಐಎಲ್ ಕಂಪನಿಗೆ 25 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸಲು ಕಂಪನಿಯ ಆಡಳಿತ ಮಂಡಳಿ 2020ರ ಸೆಪ್ಟೆಂಬರ್ ನಲ್ಲಿ ಅನುಮತಿ ನೀಡಿತ್ತು. ಆದರೆ ಅಷ್ಟು ಮೊತ್ತವನ್ನು ಸಂಗ್ರಹಿಸಲು ಕಂಪನಿ ವಿಫಲವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *