ಚಂಡೀಗಢ: ವಾಹನವೊಂದನ್ನು ದೋಚಿದ್ದ ಪ್ರಕರಣದಲ್ಲಿ ಅಗ್ನಿವೀರ್ (Agniveer) ಸೇರಿದಂತೆ ಮೂವರು ಯುವಕರನ್ನು ಮೊಹಾಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಅಗ್ನಿವೀರ್ ಇಶ್ಮೀತ್ ಸಿಂಗ್, ಪ್ರಭ್ಪ್ರೀತ್ ಸಿಂಗ್ ಮತ್ತು ಬಾಲ್ಕರನ್ ಸಿಂಗ್ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಮೂವರು ಆರೋಪಿಗಳು ಆಪ್ ಮೂಲಕ ವಾಹನ ಬುಕ್ ಮಾಡಿದ್ದರು. ಬಳಿಕ ಚಾಲಕನಿಗೆ ಗನ್ ತೋರಿಸಿ, ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಕಾರನ್ನು (Car) ಕದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಿರಂತರ ಮಳೆ, ಶೀತಗಾಳಿ – ಧಾರವಾಡ ಜಿಲ್ಲಾದ್ಯಂತ 2 ದಿನ ಶಾಲಾ ಕಾಲೇಜುಗಳಿಗೆ ರಜೆ
ಇಶ್ಮೀತ್ ಸಿಂಗ್ 2022 ರಲ್ಲಿ ಅಗ್ನಿವೀರ್ ಆಗಿ ನೇಮಕಗೊಂಡಿದ್ದ. ಬಳಿಕ ಪಶ್ಚಿಮ ಬಂಗಾಳದಲ್ಲಿ ನಿಯೋಜನೆಗೊಂಡಿದ್ದ. ಎರಡು ತಿಂಗಳ ಹಿಂದೆ ರಜೆಯ ಮೇಲೆ ಪಂಜಾಬ್‌ನ ಫಾಜಿಲ್ಕಾಗೆ ಬಂದಿದ್ದ. ಆದರೆ ರಜೆಯ ಅವಧಿ ಮುಗಿದ ನಂತರ ಮತ್ತೆ ಕೆಲಸಕ್ಕೆ ಮರಳಿ ಹೋಗಿರಲಿಲ್ಲ.
ಆರೋಪಿಗಳು ವಾಹನ ದೋಚುವಿಕೆ ಮತ್ತು ಕಳ್ಳತನದ ಇತರ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಆರೋಪಿಗಳಿಂದ ಕಳ್ಳತನವಾದ ಸ್ಕೂಟರ್, ಬೈಕ್ ಮತ್ತು ಕಂಟ್ರಿಮೇಡ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜುಲೈ ತಿಂಗಳು ಸಂತೃಪ್ತಿಯಾಗಿದೆ – ಆಗಸ್ಟ್‌ನಲ್ಲಿ 45 ಟಿಎಂಸಿ ನೀರು ಹರಿಸುವಂತೆ ತಮಿಳುನಾಡು ಒತ್ತಾಯ