ಬೆಂಗಳೂರು: ಖಡಕ್ ಐಎಎಸ್ ಅಧಿಕಾರಿ ವಿ.ರಶ್ಮಿ ಮಹೇಶ್ ಅವರನ್ನು ರಾಜ್ಯ ಸರ್ಕಾರ ಮತ್ತೆ ಎತ್ತಂಗಡಿ ಮಾಡಿದೆ. ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿಯಾಗಿದ್ದ ರಶ್ಮಿ ಮಹೇಶ್ ಅವರನ್ನು ಸಾರ್ವಜನಿಕ ಉದ್ದಿಮೆಗಳ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.
ನೇರ ನಿಷ್ಠುರ ಅಧಿಕಾರಿ ಎಂದೇ ಹೆಸರು ಗಳಿಸಿರುವ ರಶ್ಮಿ ಅವರನ್ನು ವರ್ಗಾವಣೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಉತ್ತಮ ಅಧಿಕಾರಿಯೊಬ್ಬರನ್ನು ಕೆಲಸಕ್ಕೆ ಬಾರದ ಇಲಾಖೆಗೆ ವರ್ಗಾಯಿಸಿ ಮೂಲೆಗುಂಪು ಮಾಡಲು ಹೊರಟಿರುವ ಸರ್ಕಾರದ ಕ್ರಮ ಅಧಿಕಾರಿಗಳ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
Advertisement
Advertisement
ಪಶುಸಂಗೋಪನಾ ಖಾತೆ ಸಚಿವ ಪ್ರಭುಚೌಹಾಣ್ ಅವರಿಗೆ ಅನುಕೂಲವಾಗುಂತೆ ನಡೆದುಕೊಂಡಿಲ್ಲ ಎನ್ನುವುದೇ ರಶ್ಮಿ ವರ್ಗಾವಣೆಗೆ ಕಾರಣ ಎನ್ನಲಾಗಿದೆ. ಇಲಾಖೆಯ ವಿಚಾರದಲ್ಲಿ ನಿಯಮಬಾಹಿರವಾಗಿ ನಿರ್ಧಾರ ತೆಗೆದುಕೊಳ್ಳಬೇಕೆಂಬ ಸಚಿವರ ಒತ್ತಡಕ್ಕೆ ರಶ್ಮಿ ಸಮ್ಮತಿಸಿಲ್ಲ ಎನ್ನಲಾಗಿದೆ. ಇದು ರಶ್ಮಿ ಎತ್ತಂಗಡಿಗೆ ಕಾರಣವಾಗಿದೆ ಎಂದು ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
Advertisement
ಹಿಂದಿನ ಸರ್ಕಾರದ ಅವಧಿಯಲ್ಲೂ ವಿವಿಧೆಡೆ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಕಟ್ಟುನಿಟ್ಟಿನ ಕ್ರಮಕೈಗೊಂಡು ಆಡಳಿತರೂಢರ ಕೆಂಗಣ್ಣಿಗೆ ಗುರಿಯಾಗಿ ರಶ್ಮಿ ಮಹೇಶ್ ಪದೇಪದೇ ವರ್ಗಾವಣೆಯ ಶಿಕ್ಷೆಗೆ ಒಳಗಾಗಿದ್ದರು.
Advertisement
ವೈದ್ಯಕೀಯ ಇಲಾಖೆ ಕಾರ್ಯದರ್ಶಿಯಾಗಿದ್ದಾಗ ವೈದ್ಯಕೀಯ ಕಾಲೇಜುಗಳ ಸೀಟ್ ಬ್ಲಾಕಿಂಗ್ ದಂಧೆ, ಅಕ್ರಮ ಶುಲ್ಕ ವಸೂಲಿ ಮತ್ತು ಅಡ್ಡದಾರಿಯಲ್ಲಿ ಸರ್ಕಾರಕ್ಕೆ ವಂಚಿಸುತ್ತಿದ್ದ ಕಾಲೇಜುಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದರು. ಖಾಸಗಿ ವೈದ್ಯಕೀಯ ಕಾಲೇಜುಗಳ ಲಾಬಿಗೆ ರಶ್ಮಿ ಎತ್ತಂಗಡಿಯಾಗಿತ್ತು.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿದ್ದಾಗ ಅಲ್ಲಿನ ಸಿಬ್ಬಂದಿ ಗುಂಪೊಂದು ರಶ್ಮಿಯವರ ಮೇಲೆ ಮಾಧ್ಯಮಗಳು ಮತ್ತು ಪೊಲೀಸರ ಮುಂದೆ ದೈಹಿಕ ಹಲ್ಲೆ ನಡೆಸಿತ್ತು. ಆ ಸಂದರ್ಭದಲ್ಲಿ ಅಧಿಕಾರಿಯ ಬಗ್ಗೆ ಅನುಕಂಪ ತೋರಿದ್ದ ಬಿಜೆಪಿ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಾಂಗ್ರೆಸ್ ನಾಯಕರನ್ನು ಟೀಕಿಸಿ ಕಾಂಗ್ರೆಸ್ ನಲ್ಲಿ ದಕ್ಷ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಅಂತ ಬೊಬ್ಬೆ ಹೊಡೆದಿದ್ದರು. ಈಗ ಕಾಂಗ್ರೆಸ್ ಹಾದಿಯನ್ನೇ ಹಿಡಿದಿರುವ ಬಿಜೆಪಿ ಸರ್ಕಾರ ದಕ್ಷ ಪ್ರಾಮಾಣಿಕ ಅಧಿಕಾರಿಗೆ ವರ್ಗಾವಣೆಯ ಶಿಕ್ಷೆ ನೀಡಿ ಮೂಲೆಗುಂಪು ಮಾಡಲು ಹೊರಟಿರುವುದು ವಿಪರ್ಯಾಸ.