ಚಿಕ್ಕೋಡಿ: ಮಹಾರಾಷ್ಟ್ರ ಸತಾರ ಜಿಲ್ಲೆಯ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿಯಾಗಿ 50 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದ್ದು, ನದಿ ಪಾತ್ರದ ಜನರು ಆತಂಕಕ್ಕೊಳಗಾಗಿದ್ದಾರೆ.
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಮಳೆಯಿಂದಾಗಿ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ ಸತಾರ ಜಿಲ್ಲೆಯ ಕೊಯ್ನಾ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದ 50 ಸಾವಿರ ಕ್ಯೂಸೆಕ್ ಹೆಚ್ಚುವರಿ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ 98 ಸಾವಿರ ಕ್ಯೂಸೆಕ್ ನಷ್ಟು ನೀರು ಹರಿದುಬರುತ್ತಿದೆ. ಇದರಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು-ಕಲ್ಲೋಳ, ಭೋಜ-ಕಾರದಗಾ, ಭೋಜವಾಡ-ಕುನ್ನೂರು ಹಾಗೂ ದತ್ತವಾಡ-ಮಲಿಕವಾಡ ಸೇತುವೆಗಳು ಮುಳುಗಿದೆ. ಹಲವು ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವುಂಟಾಗಿದೆ.
ಇಂದಿನಿಂದ ಪುನಃ ಹೆಚ್ಚುವರಿಯಾಗಿ 50 ಸಾವಿರ ಕ್ಯೂಸೆಕ್ ನೀರು ಬಂದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈಗಾಗಲೇ ಹಿಪ್ಪರಗಿ ಹಾಗೂ ಆಲಮಟ್ಟಿ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿ ಜಲಾಶಯಗಳು ಭರ್ತಿಯಾಗಿದೆ. ಹೀಗಾಗಿ ಅಧಿಕ ಪ್ರಮಾಣದ ನೀರನ್ನು ಜಲಾಶಯಗಳಿಂದ ಹೊರ ಹಾಕಲಾಗುತ್ತಿದೆ. ಇದರಿಂದಾಗಿ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv