ಮಂಗಳೂರು: ರಾಜ್ಯದ ಕರಾವಳಿಯಲ್ಲಿ ವರುಣ ಮತ್ತೆ ಅಬ್ಬರಿಸಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ವರ್ಷಧಾರೆಯಾಗುತ್ತಿದ್ದು, ಹಲವು ಅನಾಹುತಗಳು ಸಂಭವಿಸಿದೆ.
ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಕಡಬದ ಹೊಸ್ಮಠ ಸೇತುವೆ ಸತತ ಎಂಟನೇ ದಿನವೂ ಮುಳುಗಡೆಯಾಗುತ್ತಿದ್ದು, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ. ಕುಮಾರಧಾರೆಯೂ ತನ್ನ ಹರಿವನ್ನು ಹೆಚ್ಚಿಸಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟ ಎಂಟನೇ ದಿನಕ್ಕೆ ಮುಳುಗಡೆಯಾಗಿದೆ.
Advertisement
Advertisement
ಭಾನುವಾರ ರಾತ್ರಿ ಸುರಿದಂತಹ ಗಾಳಿ ಮಳೆಗೆ ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿರುವ ತಾತ್ಕಾಲಿಕ ಮಾರುಕಟ್ಟೆಯ ಅಂಗಡಿಗಳಿಗೆ ಹಾನಿಯಾಗಿದೆ. ತಗಡಿನ ಶೀಟ್ ಗಳು ಭಾರೀ ಗಾಳಿಗೆ ಹಾರಿ ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಮಂಗಳೂರು ನಗರದಲ್ಲೂ ಮಳೆ ಸುರಿಯುತ್ತಿದ್ದು, ಜನ ಕಿರಿಕಿರಿ ಅನುಭವಿಸುವಂತಾಗಿದೆ. ಘಟ್ಟ ಪ್ರದೇಶ ಸೇರಿದಂತೆ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ ಅಬ್ಬರಿಸುತ್ತಿದ್ದು, ಕಡಲ ತೀರದಲ್ಲಿ ಕಡಲ್ಕೊರೆತ ತೀವ್ರವಾಗಿದೆ.
Advertisement
ಮಂಗಳೂರಿನ ಉಳ್ಳಾಲ, ಸೋಮೇಶ್ವರ ಪ್ರದೇಶಗಳಲ್ಲಿ ಭಾರೀ ಕಡಲ್ಕೊರೆತಕ್ಕೆ ಹಲವು ಮನೆ, ಮರಗಳು ಕಡಲು ಪಾಲಾಗಿವೆ. ಮಳೆಯಿಂದಾಗಿ ವಿದ್ಯುತ್ ಕಂಬಗಳೂ ಧರಾಶಾಹಿಯಾಗಿದ್ದು, ಕಳೆದ ಒಂದು ವಾರದಿಂದ ವಿದ್ಯುತ್ ಇಲ್ಲದೆ ಜನ ಕಗ್ಗತ್ತಲಲ್ಲಿ ರಾತ್ರಿ ಕಳೆಯುವಂತಾಗಿದೆ.
Advertisement