Dakshina KannadaDistrictsKarnatakaKodaguLatestLeading NewsMain Post

ಕೊಡಗಿನಲ್ಲಿ ಮಧ್ಯರಾತ್ರಿ ಮತ್ತೆ ಭೂಕಂಪನ- ಆತಂಕಕ್ಕೀಡಾದ ಜನ

- ರಾಜ್ಯದ ಹಲವೆಡೆ ವರುಣಾರ್ಭಟ

Advertisements

– ಉಡುಪಿ, ಮಂಗಳೂರಲ್ಲಿ ಶಾಲಾ-ಕಾಲೇಜ್‍ಗೆ ರಜೆ

ಮಡಿಕೇರಿ/ಮಂಗಳೂರು: ಕೊಡಗಿನಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿರುವುದು ಬೆಳಕಿಗೆ ಬಂದಿದೆ. ಕೊಡಗಿನ ಗಡಿಯಲ್ಲಿ ಗುರುವಾರ ಮಧ್ಯರಾತ್ರಿ ಮತ್ತೆ 2 ಬಾರಿ ಭೂಮಿ ಕಂಪಿಸಿದೆ.

ಕಳೆದ ರಾತ್ರಿ 1 ಗಂಟೆಯಿಂದ 1.40 ಗಂಟೆ ಅವಧಿಯಲ್ಲಿ ಸಂಪಾಜೆ, ಪೆರಾಜೆ, ಗೂನಡ್ಕ, ಕರಿಕೆ ವ್ಯಾಪ್ತಿಯಲ್ಲಿ ಎರಡು ಬಾರಿ ಭೂಕಂಪನವಾಗಿದೆ. ಗ್ರಾಮದಲ್ಲಿ ದೊಡ್ಡ ಶಬ್ದ ಎರಡು ಬಾರಿಯೂ ಕೇಳಿ ಬಂದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಗುರುವಾರ ಸಂಪಾಜೆಯಲ್ಲಿ ರಿಕ್ಟರ್ ಮಾಪನ ಅಳವಡಿಸಲಾಗಿದ್ದು ಭೂಕಂಪನದ ಪ್ರಮಾಣ ಸ್ಪಷ್ಟವಾಗಿ ಇನ್ನಷ್ಟೇ ತಿಳಿಯಬೇಕಾಗಿದೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಹೆಚ್ಚಿದ ಆತಂಕ

ಇತ್ತ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗ್ತಿದೆ. ವರುಣಾರ್ಭಕ್ಕೆ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿ ಹೋಗಿದೆ. ಮಂಗಳೂರು ನಗರ ಭಾಗದಲ್ಲೇ ಅತಿ ಹೆಚ್ಚು ಮಳೆಯಾಗಿದೆ. ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದವು. ನಗರದ ಹೆದ್ದಾರಿಗಳಲ್ಲೂ ನೀರು ಹರಿದು ಹೋಗಲು ಸಾಧ್ಯವಾಗದೇ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು ಜನರು ಪರದಾಡುವಂತಾಗಿತ್ತು.  ಇದನ್ನೂ ಓದಿ: ಕೊಡಗಿನ ಕರಿಕೆ, ಸಂಪಾಜೆ, ಚೆಂಬು ಗ್ರಾಮದಲ್ಲಿ ಕಂಪಿಸಿದ ಭೂಮಿ

ಮಾಲೆಮಾರ್, ಕೊಟ್ಟಾರ, ಪಡೀಲ್ ಏರಿಯಾದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಇಂದು ಕೂಡ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರೋದ್ರಿಂದ ಅಂಗನವಾಡಿಯಿಂದ ಡಿಗ್ರಿ ಕಾಲೇಜಿನವರೆಗಿನ ಎಲ್ಲಾ ಶಾಲಾ-ಕಾಲೇಜ್‍ಗಳಿಗೂ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಉಡುಪಿ ಜಿಲ್ಲೆಯಾದ್ಯಂತ ಕಳೆದೆರಡು ದಿನದಿಂದ ನಿರಂತರ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಶಾಲಾ ಕಾಲೇಜ್‍ಗೆ ರಜೆ ನೀಡಿದ್ದಾರೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ. ಕಾರವಾರ, ಹೊನ್ನಾವರ, ಕುಮಟಾ ಅಂಕೋಲ, ಭಟ್ಕಳದಲ್ಲಿ ಹೆಚ್ಚಿನ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಇಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಕೊಪ್ಪಳದಲ್ಲೂ ವರುಣ ಅಬ್ಬರಿಸಿದ್ದಾನೆ. ಯಲಬುರ್ಗಾ ತಾಲೂಕಿನ ತೊಂಡಿಹಾಳ ಹಳ್ಳ ತುಂಬಿ ಹರಿದಿದೆ. ತೊಂಡಿಹಾಳ – ಬಂಡಿಹಾಳ ಸಂಪರ್ಕ ಕಡಿತವಾಗಿದೆ. ನರೇಗಲ್ ಪಟ್ಟಣಕ್ಕೆ ಹೋಗಿದ್ದ ಶಾಲಾ ಮಕ್ಕಳ ಪರದಾಡುವಂತಾಯ್ತು. ಪೋಷಕರು ಮಕ್ಕಳನ್ನು ಟ್ರ್ಯಾಕ್ಟರ್‍ನಲ್ಲಿ ಕರೆತಂದ್ರು.

Live Tv

Leave a Reply

Your email address will not be published.

Back to top button