ಲಕ್ನೋ: ಹೈನುಗಾರಿಕಾ ವಲಯ ಅಭಿವೃದ್ಧಿಗಾಗಿ ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹೊಸ ಯೋಜನೆಗೆ ಕೈ ಹಾಕಿದ್ದಾರೆ. ಎಲ್ಲಾ ಸರ್ಕಾರಿ ಕಟ್ಟಡದ ಗೋಡೆಗಳಿಗೆ ಹಸು ಸಗಣಿ ಲೇಪಿಸಲು ಸೂಚನೆ ನೀಡಿದ್ದಾರೆ. ಸದ್ಯ ಇದು ರಾಜಕೀಯ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
ಯೋಗಿ ಆದಿತ್ಯನಾಥ್ ಆದೇಶದ ಬಗ್ಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಎಕ್ಸ್‌ನಲ್ಲಿ ಟೀಕೆ ಮಾಡಿದ್ದಾರೆ. ಗೋಬರ್‍ನಾಮ್ ಬಿಜೆಪಿ ಸರ್ಕಾರದ ಹೊಸ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ. ಅಖಿಲೇಶ್ ಯಾದವ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ, ಸಮಾಜವಾದಿ ಪಕ್ಷದ ಮುಖ್ಯಸ್ಥರಿಗೆ ಗೋಮಯ ಮತ್ತು ಜಾನುವಾರುಗಳ (Cow) ಬಗ್ಗೆ ದ್ವೇಷವಿದೆ ಎಂದು ಟೀಕಿಸಿದ್ದಾರೆ.
ಉತ್ತರ ಪ್ರದೇಶದಾದ್ಯಂತ ಸುಮಾರು 7,693 ಗೋಶಾಲೆಗಳಲ್ಲಿ ಇರಿಸಲಾಗಿರುವ 12 ಲಕ್ಷಕ್ಕೂ ಹೆಚ್ಚು ಬಿಡಾಡಿ ದನಗಳಿಂದ ಪ್ರತಿದಿನ ಬೃಹತ್ ಪ್ರಮಾಣದ ಹಸುವಿನ ಸಗಣಿ ಮತ್ತು ಮೂತ್ರ ದೊರೆಯುತ್ತದೆ. ಇದರಿಂದಾಗಿ ಗೋಶಾಲೆಗಳು ಸ್ವಾವಲಂಬಿಯಾಗಲು ಸಹಾಯ ಮಾಡಿದಂತಾಗುತ್ತದೆ. ನೈಸರ್ಗಿಕ ಸಂಪನ್ಮೂಲವನ್ನು ಬಳಸಲು ಹೆಚ್ಚಿನ ಮತ್ತು ಹೊಸ ಮಾರ್ಗಗಳನ್ನು ಕಂಡುಹಿಡಿಯಲು ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು ಬಿಡಾಡಿ ದನಗಳ ಮೇವಿಗೆ ವಾರ್ಷಿಕವಾಗಿ 2,000 ಕೋಟಿ ರೂ. ಹಣ ಖರ್ಚು ಮಾಡುತ್ತದೆ.