ತೈಲ ಮತ್ತು ಆರ್ಥಿಕ ಉದ್ದೇಶಗಳಿಗಾಗಿ ವಿದೇಶಗಳ ಮೇಲೆ ಸುಂಕಾಸ್ತ್ರ ಪ್ರಯೋಗಿಸುತ್ತಿದ್ದ ಅಮೆರಿಕ (America) ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸೇನಾಸ್ತ್ರ ಪ್ರಯೋಗಿಸುತ್ತಿದೆ. ಇತಿಹಾಸದುದ್ದಕ್ಕೂ ವಿಶ್ವದ ದೊಡ್ಡಣ್ಣ ತನ್ನ ಸಾಮ್ರಾಜ್ಯಶಾಹಿ ಮನೋಭಾವವನ್ನು ಪ್ರದರ್ಶಿಸುತ್ತಲೇ ಬಂದಿದೆ. ಆಕ್ರಮಣಕಾರಿ ನೀತಿಗಳಿಂದ ವಿದೇಶಗಳ ಮೇಲೆ ಹಿಡಿತ ಸಾಧಿಸುತ್ತಿದೆ. ಇಡೀ ಜಗತ್ತೇ ತನ್ನ ಹಿಡಿತದಲ್ಲಿರಬೇಕು, ತನ್ನ ಆಣತಿಯಂತೆ ನಡೆಯಬೇಕೆನ್ನುವ ದರ್ಪದಲ್ಲಿ ಅಮೆರಿಕ ಇದೆ. ದಿಢೀರ್ ಬೆಳವಣಿಗೆ ಎಂಬಂತೆ, ವೆನೆಜುವೆಲಾದ ಮೇಲೆ ದಾಳಿ ನಡೆಸಿ ಅಲ್ಲಿನ ಅಧ್ಯಕ್ಷರನ್ನು ಅಪಹರಿಸಿ ಸೆರೆಯಲ್ಲಿಟ್ಟಿದ್ದಾರೆ ಡೊನಾಲ್ಡ್ ಟ್ರಂಪ್ (Donald Trump). ಸುಭದ್ರ ಸರ್ಕಾರ ಮತ್ತು ಡ್ರಗ್ಸ್ ವಿರುದ್ಧದ ಹೋರಾಟಕ್ಕೆ ಈ ಕ್ರಮಕೈಗೊಳ್ಳಲಾಗಿದೆ ಅಂತ ಟ್ರಂಪ್ ನೆಪವೊಡ್ಡಿದ್ದಾರೆ. ಆದರೆ, ಅಸಲಿ ಕಾರಣವೇ ಬೇರೆ ಎನ್ನಲಾಗುತ್ತಿದೆ. ವೆನೆಜುವೆಲಾ (Venezuela) ಬೆನ್ನಲ್ಲೇ ಅಮೆರಿಕದ ನೆರೆಯ ಪುಟ್ಟ ರಾಷ್ಟ್ರಗಳಲ್ಲಿ ಆತಂಕ ಮನೆ ಮಾಡಿದೆ. ಯಾವಾಗ ಬೇಕಾದರೂ ನಮ್ಮ ಮೇಲೆ ದಾಳಿ ಮಾಡಬಹುದೆಂಬ ಭೀತಿ ಇದೆ. ಹಾಗಾದ್ರೆ ಟ್ರಂಪ್ ಮುಂದಿನ ಟಾರ್ಗೆಟ್ ಯಾರು? ಯಾಕೆ ಅವರ ಮೇಲೆ ಕಣ್ಣಿಟ್ಟಿದ್ದಾರೆ? ಇದರ ಪರಿಣಾಮ ಏನಾಗಬಹುದು ಎಂಬ ಬಗ್ಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
ದೊಡ್ಡಣ್ಣ ವಾರ್ನಿಂಗ್ ಯಾರಿಗೆ?
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕಕ್ಕೆ ಅಕ್ರಮ ಮಾದಕವಸ್ತುಗಳು ಬರುವುದನ್ನು ತಪ್ಪಿಸದಿದ್ದರೆ ಇತರ ಎರಡು ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಾದ ಕೊಲಂಬಿಯಾ ಮತ್ತು ಮೆಕ್ಸಿಕೊಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ವೆನೆಜುವೆಲಾದ ಆಪ್ತ ಮಿತ್ರ ರಾಷ್ಟ್ರವಾದ ಕ್ಯೂಬಾ ಇದೇ ವಾರ್ನಿಂಗ್ ರವಾನಿಸಿದ್ದಾರೆ. ಆದರೆ, ಟ್ರಂಪ್ ನಡೆಗೆ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ. ವೆನೆಜುವೆಲಾ ಮೇಲಿನ ದಾಳಿಯನ್ನು ರಷ್ಯಾ, ಚೀನಾ, ಸ್ಪೇನ್, ಬ್ರೆಜಿಲ್, ಚಿಲಿ, ಕೊಲಂಬಿಯಾ, ಮೆಕ್ಸಿಕೊ, ಉರುಗ್ವೆ ಸರ್ಕಾರಗಳು ಖಂಡಿಸಿವೆ. ಅಮೆರಿಕದ ನಡೆ ಶಾಂತಿ ಮತ್ತು ಪ್ರಾದೇಶಿಕ ಭದ್ರತೆಗೆ ಅಪಾಯಕಾರಿಯಾಗಿದೆ ಎಂದು ಹೇಳಿವೆ. ಇದನ್ನೂ ಓದಿ: ವೆನೆಜುವೆಲಾದಿಂದ 50 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ನಮಗೆ ಸಿಗಲಿದೆ: ಟ್ರಂಪ್

ಇವರ ಮೇಲೆ ಟ್ರಂಪ್ ಕಣ್ಣಿಟ್ಟಿರೋದ್ಯಾಕೆ?
ಪಶ್ಚಿಮ ಗೋಳಾರ್ಧವನ್ನು ಅಮೆರಿಕದ ಪ್ರಭಾವದ ವಲಯವೆಂದು 19 ನೇ ಶತಮಾನದ ಮನ್ರೋ ಸಿದ್ಧಾಂತ ಪ್ರತಿಪಾದಿಸುತ್ತದೆ. ವಿದೇಶಗಳ ಮೇಲೆ ದಾಳಿ, ನಿರ್ಬಂಧಗಳ ಮೂಲಕ ಆ ದರ್ಪವನ್ನು ಅಮೆರಿಕ ತೋರುತ್ತಲೇ ಬಂದಿದೆ. ಇದರ ಜೊತೆಗೆ ಸೈದ್ಧಾಂತಿಕ ವಿಚಾರವಾಗಿಯೂ ವಿದೇಶಗಳನ್ನು ಅಮೆರಿಕ ಕೆಣಕಿದ್ದೂ ಇದೆ. ಅಮೆರಿಕಗೆ ಮಾದಕ ವಸ್ತುಗಳು, ಅಕ್ರಮ ವಲಸೆ ಮತ್ತು ಕಾರ್ಯತಂತ್ರದ ಪಾಲುದಾರಿಕೆ ಮೊದಲಾದ ವಿಚಾರಗಳು ಟ್ರಂಪ್ ಅವರ ಕೋಪಕ್ಕೆ ಪ್ರಮುಖ ಕಾರಣಗಳು ಎನ್ನಲಾಗಿದೆ. ಇದರ ಜೊತೆಗೆ, ತೈಲ ಮತ್ತು ಆರ್ಥಿಕ ಹಿತಾಸಕ್ತಿ ಕೂಡ ಅಮೆರಿಕದ ಈ ದಬ್ಬಾಳಿಕೆ ನಡವಳಿಕೆಗೆ ಕಾರಣ ಎಂಬ ಚರ್ಚೆಯೂ ಇದೆ.
ಕೊಲಂಬಿಯಾ
ಅಮೆರಿಕದ ಪ್ರಮುಖ ಸಾಂಪ್ರದಾಯಿಕ ಮಿತ್ರ ರಾಷ್ಟ್ರ ಕೊಲಂಬಿಯಾ. ಕಳೆದ 25 ವರ್ಷಗಳಿಂದ ದಕ್ಷಿಣ ಅಮೆರಿಕಾದಲ್ಲಿ ಅದರ ಹತ್ತಿರದ ಭದ್ರತಾ ಪಾಲುದಾರ. 2012 ರಲ್ಲಿ ಯುಎಸ್-ಕೊಲಂಬಿಯಾ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂಗೀಕರಿಸಿದಾಗಿನಿಂದ, ಯುಎಸ್ ಕೊಲಂಬಿಯಾದ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿದೆ. ದೇಶದ ಒಟ್ಟು ವ್ಯಾಪಾರದ 34% ರಷ್ಟಿದೆ. 2023 ರಲ್ಲಿ US ಕಚ್ಚಾ ತೈಲ ಆಮದುಗಳಲ್ಲಿ 16 ಬಿಲಿಯನ್ ಡಾಲರ್‌ನಲ್ಲಿ ಕೊಲಂಬಿಯಾ 5.4 ಬಿಲಿಯನ್ ಡಾಲರ್ ಅನ್ನು ಹೊಂದಿತ್ತು. ಕಾಫಿ ಮತ್ತು ಗುಲಾಬಿಗಳು ಸಹ ಕೊಲಂಬಿಯಾದ ಪ್ರಮುಖ ರಫ್ತುಗಳಾಗಿವೆ. ಆದಾಗ್ಯೂ, ಕೊಲಂಬಿಯಾ ಇಂದು ಅಕ್ರಮ ಮಾದಕವಸ್ತು ಕೊಕೇನ್ ಮತ್ತು ಅದನ್ನು ಉತ್ಪಾದಿಸುವ ಕೋಕಾ ಸಸ್ಯದ ಪ್ರಮುಖ ಜಾಗತಿಕ ಉತ್ಪಾದಕ ಎಂದು ಪ್ರಸಿದ್ಧವಾಗಿದೆ. ಇದು ಔಷಧ ಮತ್ತು ಸಸ್ಯದ ಒಟ್ಟು ಉತ್ಪಾದನೆಯ ಮೂರನೇ ಎರಡರಷ್ಟು ಭಾಗವನ್ನು ಹೊಂದಿದೆ. ಇದನ್ನೂ ಓದಿ: Venezuela | ವಿಶ್ವದ ಅತಿದೊಡ್ಡ ತೈಲ ನಿಕ್ಷೇಪದ ಮೇಲೆ ಟ್ರಂಪ್ ಕಣ್ಣಿಟ್ಟಿದ್ದೇಕೆ? ಭಾರತದ ಮೇಲೆ ಏನು ಪರಿಣಾಮ?
ಹಿಂದೆ, ಮಾದಕ ದ್ರವ್ಯಗಳ ವಿರುದ್ಧ ಹೋರಾಡಲು ಕೊಲಂಬಿಯಾಕ್ಕೆ ಅಮೆರಿಕ ಆರ್ಥಿಕ ಸಹಾಯ ಮಾಡಿದೆ. ಇದು ಮಿಶ್ರ ಯಶಸ್ಸನ್ನು ನೀಡಿದೆ. ರಾಜಕೀಯ ಹಿಂಸಾಚಾರದ ಘಟನೆಗಳು ಕಡಿಮೆಯಾಗಿವೆ. ಇದೇ ಹೊತ್ತಲ್ಲಿ, ದೇಶವು ಉಗ್ರಗಾಮಿ ಗುಂಪುಗಳನ್ನು ಸಜ್ಜುಗೊಳಿಸಲು ಸಾಧ್ಯವಾಗಿದೆ. 2013 ರಿಂದ ಕೋಕಾ ಮತ್ತು ಕೊಕೇನ್ ಉತ್ಪಾದನೆಯೂ ಹೆಚ್ಚಾಗಿದೆ. 2021 ರಲ್ಲಿ ಅಮೆರಿಕದಲ್ಲಿ ಕೊಲಂಬಿಯನ್ ಮೂಲದ 16 ಲಕ್ಷ ಜನರು ದಾಖಲಾಗಿದ್ದಾರೆ. ನಾಲ್ವರು ದಕ್ಷಿಣ ಅಮೆರಿಕಾದ ವಲಸಿಗರಲ್ಲಿ ಕೊಲಂಬಿಯಾದವರು ಒಬ್ಬರು ಇರುತ್ತಾರೆ. ಈ ಎಲ್ಲಾ ಬೆಳವಣಿಗೆಗಳ ಜೊತೆಗೆ, ಗುಸ್ಟಾವೊ ಪೆಟ್ರೋ ಕೊಲಂಬಿಯಾದ ಮೊದಲ ಎಡಪಂಥೀಯ ಅಧ್ಯಕ್ಷರಾದರು. ಅವರು ದೇಶವನ್ನು ಅಮೆರಿಕದಿಂದ ದೂರವಿಡಲು ಪ್ರಯತ್ನಿಸುತ್ತಿದ್ದಾರೆ. ಪರಿಣಾಮವಾಗಿ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿವೆ. 2022 ರಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಕೊಲಂಬಿಯಾವನ್ನು ನ್ಯಾಟೋ ಅಲ್ಲದ ಅಮೆರಿಕದ ಪ್ರಮುಖ ಮಿತ್ರ ರಾಷ್ಟ್ರವೆಂದು ಗುರುತಿಸಿದರು.

ಕಾಲಾನಂತರದಲ್ಲಿ, ಅಮೆರಿಕ ಬೆಂಬಲಿತ ಮಾದಕವಸ್ತು ನೀತಿಗಳೊಂದಿಗೆ ಸಹಕರಿಸಲು ಅಮೆರಿಕಗೆ ಇಷ್ಟವಿರಲಿಲ್ಲ. ಬ್ರಿಕ್ಸ್ + ಗುಂಪಿಗೆ ಸೇರಲು ಆಸಕ್ತಿಯನ್ನು ವ್ಯಕ್ತಪಡಿಸಿದರು. ಅಮೆರಿಕದ ಪ್ರಮುಖ ಮಿತ್ರ ರಾಷ್ಟ್ರವಾದ ಇಸ್ರೇಲ್ ಜೊತೆಗಿನ ಸಂಬಂಧವನ್ನು ಮುರಿಯಲು ನಿರ್ಧರಿಸಿದರು. ಟ್ರಂಪ್ ನೇತೃತ್ವದಲ್ಲಿ, ಈ ಸಂಬಂಧಗಳು ಮತ್ತಷ್ಟು ವಿಕೇಂದ್ರೀಕೃತವಾದವು. 2025ರ ಜನವರಿಯಲ್ಲಿ ಕೊಲಂಬಿಯಾದ ಗಡಿಪಾರುದಾರರನ್ನು ಹೊತ್ತೊಯ್ಯುವ ಯುಎಸ್ ಮಿಲಿಟರಿ ವಿಮಾನಗಳನ್ನು ಸ್ವೀಕರಿಸಲು ಆರಂಭದಲ್ಲಿ ನಿರಾಕರಿಸಿದರು. ಇದರಿಂದ ಕೆರಳಿದ ಅಮೆರಿಕವು ಕೊಲಂಬಿಯಾ ವಿರುದ್ಧ ಪ್ರಮುಖ ಪರಿಣಾಮಗಳನ್ನು ಬೀರುವ ಬೆದರಿಕೆ ಹಾಕಿತು. ಯುಎಸ್ ವಿದೇಶಿ ಸಹಾಯವನ್ನು ಕಡಿತಗೊಳಿಸುವ ಕ್ರಮವನ್ನು ಟ್ರಂಪ್ ಕೈಗೊಂಡರು. ಸುಂಕ ವಿಧಿಸಲಾಯಿತು. ಕೆರಿಬಿಯನ್ ಸಮುದ್ರದಲ್ಲಿ ಯುಎಸ್ ಮಿಲಿಟರಿ ನಿರ್ಮಾಣ ಕ್ರಮಕೈಗೊಂಡಿತು. ಈ ಬೆಳವಣಿಗೆಗಳು ಉಭಯ ದೇಶಗಳ ನಡುವಿನ ತಿಕ್ಕಾಟಕ್ಕೆ ಕಾರಣವಾದವು.
ಮೆಕ್ಸಿಕೋ
ಯುಎಸ್ ಮತ್ತು ಮೆಕ್ಸಿಕೋ ಶತಮಾನಗಳ ಇತಿಹಾಸವನ್ನು ಹಂಚಿಕೊಂಡಿವೆ. ಉತ್ತಮ ಆರ್ಥಿಕ ಸಂಬಂಧಗಳನ್ನು ಸಹ ಹೊಂದಿವೆ. 2023 ರಲ್ಲಿ ಮೆಕ್ಸಿಕೋ ಅಮೆರಿಕದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದ್ದು, ಒಟ್ಟು ಸರಕುಗಳಲ್ಲಿ 798.9 ಬಿಲಿಯನ್ ಡಾಲರ್ ಆಗಿತ್ತು. 2020 ರಲ್ಲಿ ಯುನೈಟೆಡ್ ಸ್ಟೇಟ್ಸ್-ಮೆಕ್ಸಿಕೋ-ಕೆನಡಾ ಒಪ್ಪಂದದ ಅನುಷ್ಠಾನವು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಸಹಾಯ ಮಾಡಿದೆ. ಆದಾಗ್ಯೂ, ಉಭಯ ದೇಶಗಳ 3,145 ಕಿ.ಮೀ. ಗಡಿಯು ಗಮನಾರ್ಹ ಸವಾಲುಗಳನ್ನು ಒಡ್ಡಿದೆ. ಮೆಕ್ಸಿಕೋ ಗಡಿ ಮೂಲಕ ದಾಖಲೆರಹಿತ ವಲಸಿಗರ ಪ್ರವೇಶ ಮತ್ತು ಅಕ್ರಮ ಮಾದಕ ದ್ರವ್ಯಗಳು ತನ್ನ ದೇಶಕ್ಕೆ ಬರುತ್ತಿರುವುದು ಅಮೆರಿಕಗೆ ತಲೆನೋವಾಗಿದೆ. ಸಂಶ್ಲೇಷಿತ ಔಷಧವಾದ ಫೆಂಟನಿಲ್‌ನ ಜಾಗತಿಕ ಉತ್ಪಾದನೆ ಮತ್ತು ಕಳ್ಳಸಾಗಣೆಯಲ್ಲಿ ಮೆಕ್ಸಿಕೋ ಮುಂಚೂಣಿಯಲ್ಲಿದೆ. ಇದು ಅಮೆರಿಕದಲ್ಲಿ ಮಾದಕವಸ್ತು ಮಿತಿಮೀರಿದ ಸೇವನೆಯ ಹೆಚ್ಚಳಕ್ಕೆ ಕಾರಣವಾಗಿದೆ.
ಟ್ರಂಪ್ ತಮ್ಮ ಮೊದಲ ಅವಧಿಯಲ್ಲೇ ಮೆಕ್ಸಿಕೋ ಗಡಿಯಲ್ಲಿ ದೊಡ್ಡ ಗೋಡೆ ನಿರ್ಮಿಸುವುದಾಗಿ ಹೇಳಿದ್ದರು. ನಂತರ ಅಕ್ರಮ ವಲಸೆ ತಡೆಯಲು ಎರಡೂ ದೇಶಗಳು ಒಪ್ಪಂದ ಮಾಡಿಕೊಂಡಿದ್ದರಿಂದ, ಗೋಡೆ ನಿರ್ಮಾಣ ಯೋಜನೆ ಕೈಬಿಡಲಾಯಿತು. ಮತ್ತೆ ಅಮೆರಿಕ ಅಧ್ಯಕ್ಷರಾದ ಟ್ರಂಪ್, ಗೋಡೆ ನಿರ್ಮಾಣ ಕುರಿತು ಮಾತನಾಡಿದ್ದಾರೆ. ಫೆಂಟನಿಲ್ ಕಳ್ಳಸಾಗಣೆಯನ್ನು ತಡೆಯುವಲ್ಲಿ ವಿಫಲವಾದ ಕೆನಡಾ, ಚೀನಾ ಮತ್ತು ಮೆಕ್ಸಿಕೊ ವಿರುದ್ಧ ದಂಡನಾತ್ಮಕ ಸುಂಕಗಳನ್ನು ಘೋಷಿಸಿದ್ದಾರೆ. ಎಂಟು ಲ್ಯಾಟಿನ್ ಅಮೆರಿಕನ್ ಕ್ರಿಮಿನಲ್ ಸಂಘಟನೆಗಳನ್ನು ವಿದೇಶಿ ಭಯೋತ್ಪಾದಕ ಸಂಘಟನೆಗಳೆಂದು ಕರೆದಿದ್ದಾರೆ. ಮಾದಕವಸ್ತು ಕಳ್ಳಸಾಗಣೆಯನ್ನು ತಡೆಗಟ್ಟಲು ಮೆಕ್ಸಿಕೊದ ಮೇಲೆ ಡ್ರೋನ್ ದಾಳಿಗಳನ್ನು ನಡೆಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಅಕ್ರಮ ವಲಸಿಗರು ಮತ್ತು ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಅಮೆರಿಕ ಸೇನಾಪಡೆಗಳನ್ನು ಮೆಕ್ಸಿಕೋಗೆ ಕಳುಹಿಸುತ್ತೇವೆ ಎಂದು ಟ್ರಂಪ್ ಹೇಳಿದ್ದರು. ಆದರೆ, ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೇನ್‌ಬಾಮ್ ಅದಕ್ಕೆ ಒಪ್ಪಲಿಲ್ಲ. ಇದು ಉಭಯ ರಾಷ್ಟ್ರಗಳ ನಾಯಕರ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ.

ಕ್ಯೂಬಾ
ಸುಮಾರು 60 ವರ್ಷಗಳಿಂದಲೂ ಅಮೆರಿಕಗೆ ಸೆಡ್ಡು ಹೊಡೆಯುತ್ತ ಬಂದಿರುವ ದೇಶ ಕ್ಯೂಬಾ. ಈ ರಾಷ್ಟ್ರ ತೈಲಕ್ಕಾಗಿ ವೆನೆಜುವೆಲಾದ ಮೇಲೆ ಅವಲಂಬಿತವಾಗಿದೆ. ಚೀನಾ ಮತ್ತು ರಷ್ಯಾದಿಂದ ದೊಡ್ಡ ಪ್ರಮಾಣದ ವಿದೇಶಿ ಹೂಡಿಕೆಯನ್ನು ಪಡೆದಿದೆ. ವೆನೆಜುವೆಲಾದ ಆರ್ಥಿಕತೆಯ ಭವಿಷ್ಯ ಅನಿಶ್ಚಿತತೆ ಕಾರಣಕ್ಕೆ ಕ್ಯೂಬಾ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದ ಮಿಲಿಟರಿ ಮತ್ತು ಆರ್ಥಿಕ ಸಹಕಾರಕ್ಕಾಗಿ ರಷ್ಯಾದ ಕಡೆಗೆ ತಿರುಗುವ ಸಾಧ್ಯತೆ ಇದೆ. ಕ್ಯೂಬಾವನ್ನು ನಿಯಂತ್ರಿಸಲು ಅಮೆರಿಕ ದಶಕಗಳಿಂದ ಪ್ರಯತ್ನಿಸುತ್ತಾ ಬಂದಿದೆ. ಆದರೆ, ಅದಕ್ಕೆಲ್ಲ ಬಗ್ಗದೇ ಕ್ಯೂಬಾ ಮುನ್ನಡೆಯುತ್ತಿದೆ. ಶೀತಲ ಸಮರದ ಸಮಯದಲ್ಲಿ ಫಿಡೆಲ್ ಕ್ಯಾಸ್ಟ್ರೋ ನೇತೃತ್ವದ ಕ್ರಾಂತಿಕಾರಿಗಳ ಗುಂಪು ರಾಜಧಾನಿ ಹವಾನದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಫುಲ್ಜೆನ್ಸಿಯೊ ಬಟಿಸ್ಟಾ ಅವರ ಯುಎಸ್ ಬೆಂಬಲಿತ ಸರ್ಕಾರವನ್ನು ಉರುಳಿಸಿತು. ಕ್ಯೂಬನ್ ಕ್ರಾಂತಿಯ ನಂತರ, ಹೊಸ ಆಡಳಿತವು ಯುಎಸ್‌ನಿಂದ ದೂರವಿರಲು ಪ್ರಯತ್ನಿಸಿತು. ಸೋವಿಯತ್ ಒಕ್ಕೂಟದೊಂದಿಗೆ ಸಂಬಂಧಗಳನ್ನು ಬಲಗೊಳಿಸಿತು. ಅಮೆರಿಕನ್ ಒಡೆತನದ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಿತು. ಯುಎಸ್ ಆಮದುಗಳ ಮೇಲೆ ಸುಂಕಗಳನ್ನು ವಿಧಿಸಿತು. ಇದನ್ನೂ ಓದಿ: ವೆನೆಜುವೆಲಾ ಅಧ್ಯಕ್ಷರ ಸೆರೆ ಬಳಿಕ ಕೊಲಂಬಿಯಾ ಅಧ್ಯಕ್ಷರಿಗೆ ಟ್ರಂಪ್ ವಾರ್ನಿಂಗ್
ಫಿಡೆಲ್ ಕ್ಯಾಸ್ಟ್ರೋ ಅವರನ್ನು ಹೊಸ ನಾಯಕ ಎಂದು ಕ್ಯೂಬಾ ಗುರುತಿಸಿತು. ಕ್ಯೂಬಾದಂತೆಯೇ ಅಮೆರಿಕವು ಆರ್ಥಿಕ ನಿರ್ಬಂಧಗಳು ಮತ್ತು ಕಠಿಣ ಪ್ರಯಾಣ ನಿರ್ಬಂಧಗಳನ್ನು ವಿಧಿಸಿತು. ಈ ಅವಧಿಯಲ್ಲಿ ಕುಖ್ಯಾತ ಬೇ ಆಫ್ ಪಿಗ್ಸ್ ಆಕ್ರಮಣದಲ್ಲಿ ಕ್ಯಾಸ್ಟ್ರೋ ಅವರನ್ನು ಪದಚ್ಯುತಗೊಳಿಸಲು ಅಮೆರಿಕ ಮುಂದಾಯಿತು. ಕ್ಯೂಬಾವನ್ನು ಆಕ್ರಮಿಸಲು ಪ್ರಯತ್ನಿಸಿತು. ಆದರೆ, ಈ ಆಪರೇಷನ್‌ನಲ್ಲಿ ವಿಫಲವಾಯಿತು. ಈ ಫಲಿತಾಂಶವು ಶೀತಲ ಸಮರದಲ್ಲಿ ನಿರ್ಣಾಯಕ ಘಟ್ಟವಾಗಿ ಸಾಬೀತಾಯಿತು. ಕ್ಯಾಸ್ಟ್ರೋ ಅವರನ್ನು ಸೋವಿಯತ್ ಒಕ್ಕೂಟ ಮತ್ತು ಅದರ ನಾಯಕಿ ನಿಕಿತಾ ಕ್ರುಶ್ಚೇವ್‌ಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡಿತು. ನಂತರದ US ಆಡಳಿತಗಳು ಅಮೆರಿಕದ ನಿರ್ಬಂಧಗಳು ಮತ್ತು ವ್ಯಾಪಾರ ನಿರ್ಬಂಧಗಳನ್ನು ಬಲಪಡಿಸಿದವು. US ಅಧ್ಯಕ್ಷ ರೊನಾಲ್ಡ್ ರೇಗನ್ 1982 ರಲ್ಲಿ ಕ್ಯೂಬಾವನ್ನು ಭಯೋತ್ಪಾದನೆಯ ಪ್ರಾಯೋಜಕ ರಾಷ್ಟ್ರ ಎಂದು ಕರೆದರು. ಇದರ ಪರಿಣಾಮವಾಗಿ 1989 ಮತ್ತು 1993 ರ ನಡುವೆ ಕ್ಯೂಬಾದ GDP 35% ರಷ್ಟು ಕುಸಿಯಿತು.
2008 ರಲ್ಲಿ ಯುಎಸ್-ಕ್ಯೂಬಾ ದ್ವಿಪಕ್ಷೀಯ ಸಂಬಂಧಗಳನ್ನು ಉತ್ತಮಗೊಳಿಸುವ ಪ್ರಯತ್ನಗಳು ನಡೆದವು. ಅಧ್ಯಕ್ಷ ಬರಾಕ್ ಒಬಾಮಾ ಅವರ ಅವಧಿಯಲ್ಲಿ ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಲಾಯಿತು. ಅಮೆರಿಕದಲ್ಲಿರುವ ಕ್ಯೂಬನ್ನರು ಮನೆಗೆ ಹಣ ಕಳುಹಿಸಲು ಅವಕಾಶ ಮಾಡಿಕೊಟ್ಟರು. 2014 ರಲ್ಲಿ ರಾಜತಾಂತ್ರಿಕ ಸಂಬಂಧಗಳ ಸಂಪೂರ್ಣ ಪುನಃಸ್ಥಾಪನೆಗೆ ಪ್ರಯತ್ನಿಸಲಾಯಿತು. ಕ್ಯೂಬಾದ ಭಯೋತ್ಪಾದನೆ ಪ್ರಾಯೋಜಕ ಎಂಬ ಅಪಖ್ಯಾತಿಯಿಂದ ತೆಗೆದುಹಾಕುವುದು. ಎರಡೂ ರಾಷ್ಟ್ರಗಳು ತಮ್ಮ ರಾಯಭಾರ ಕಚೇರಿಗಳನ್ನು ಮತ್ತೆ ತೆರೆದವು. ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದವು. ಆದರೆ, ಟ್ರಂಪ್ ಆಡಳಿತಕ್ಕೆ ಬರುತ್ತಿದ್ದಂತೆ ಎಲ್ಲವೂ ಉಲ್ಟಾ ಆಯಿತು. ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಸರಕುಗಳ ಮೇಲಿನ ನಿರ್ಬಂಧವನ್ನು ದ್ವಿಗುಣಗೊಳಿಸಿದರು. ಕ್ಯೂಬಾದ ಮೇಲೆ ಮತ್ತೆ ನಿರ್ಬಂಧಗಳನ್ನು ಹೇರಿದರು. ಮೊದಲ ಟ್ರಂಪ್ ಆಡಳಿತವು ವೆನೆಜುವೆಲಾದಿಂದ ಕ್ಯೂಬಾಗೆ ತೈಲ ರಫ್ತುಗಳನ್ನು ಮಿತಿಗೊಳಿಸಲು ಪ್ರಯತ್ನಿಸಿತು. ಕ್ಯೂಬಾದ ಅಧಿಕಾರಿಗಳು ಅಮೆರಿಕಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿತು. ತಮ್ಮ ಎರಡನೇ ಅವಧಿಯಲ್ಲಿ ಟ್ರಂಪ್, ಕ್ಯೂಬಾದ ಪ್ರವಾಸೋದ್ಯಮ ಉದ್ಯಮವನ್ನು ಗುರಿಯಾಗಿಸಿಕೊಂಡು ನಿರ್ಬಂಧಗಳನ್ನು ವಿಧಿಸಿದರು. 2020 ರಿಂದ, ಕ್ಯೂಬಾ ಆರ್ಥಿಕ ಹಿಂಜರಿತದಲ್ಲಿದೆ. ಅದರ GDP 1.1% ಮತ್ತು ಹಣದುಬ್ಬರವು 2024 ರಲ್ಲಿ 24% ರಷ್ಟಿದೆ. ಈ ಬಗ್ಗೆ ಮಾತನಾಡಿರುವ ಟ್ರಂಪ್, ಕ್ಯೂಬಾ ಮೇಲೆ ಸೇನಾ ಕಾರ್ಯಾಚರಣೆ ನಡೆಸುವ ಅಗತ್ಯವೇ ಇಲ್ಲ. ವೆನೆಜುವೆಲಾದ ಬೆಳವಣಿಗೆಗಳಿಂದ ಅದರ ಆದಾಯಕ್ಕೆ ಪೆಟ್ಟು ಬಿದ್ದಿದೆ. ಕ್ಯೂಬಾ ತಂತಾನೆ ಕುಸಿದು ಬೀಳುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಗ್ರೀನ್‌ಲ್ಯಾಂಡ್
ನೈಸರ್ಗಿಕವಾಗಿ ಸಂಪದ್ಭರಿತ ದ್ವೀಪ ರಾಷ್ಟ್ರ ಗ್ರೀನ್‌ಲ್ಯಾಂಡ್. ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಟ್ರಂಪ್ ಕಣ್ಣು ಈ ದೇಶದ ಮೇಲೆ ನೆಟ್ಟಿದೆ. ನಮಗೆ ಗ್ರೀನ್‌ಲ್ಯಾಂಡ್‌ನ ನೈಸರ್ಗಿಕ ಸಂಪನ್ಮೂಲಗಳು ಬೇಡ. ಅಮೆರಿಕದ ಭದ್ರತೆ ದೃಷ್ಟಿಯಿಂದ ಈ ದ್ವೀಪ ಬೇಕು ಅಂತ ಟ್ರಂಪ್ ಹೇಳುತ್ತಿದ್ದಾರೆ. ಗ್ರೀನ್‌ಲ್ಯಾಂಡ್‌ನ ವಾಯುವ್ಯಕ್ಕಿರುವ ಪಿಟಿಫ್ಫಿಕ್ ನೆಲೆಯಲ್ಲಿ ಅಮೆರಿಕದ ಸೇನೆ ಇದೆ. ಅದನ್ನು ಮತ್ತಷ್ಟು ವಿಸ್ತರಿಸಲು ಯುಎಸ್ ಬಯಸಿದೆ. ಈ ಭಾಗದ ಸಾಗರದಲ್ಲಿ ರಷ್ಯಾ ಮತ್ತು ಚೀನಾ ಉಪಸ್ಥಿತಿ ಕೂಡ ಹೆಚ್ಚಾಗುತ್ತಿದೆ. ವಿರೋಧಿ ರಾಷ್ಟ್ರಗಳ ಚಲನವಲನಗಳ ಮೇಲೆ ಕಣ್ಣಿಡಲು ಅಮೆರಿಕ ಯೋಜಿಸಿದೆ. ಗ್ರೀನ್‌ಲ್ಯಾಂಡ್‌ನಲ್ಲಿ ಉದ್ಯಮಗಳಿಗೆ ಬೇಕಾಗುವ ಅಪರೂಪದ ಖನಿಜ ಲೋಹಗಳು, ಲಿಥಿಯಂ, ತೈಲ, ನೈಸರ್ಗಿಕ ಅನಿಲ ನಿಕ್ಷೇಪಗಳು ಯಥೇಚ್ಛವಾಗಿವೆ. ಬಾಯಿಮಾತಿಗೆ ಬೇಡವೆಂದರೂ ಟ್ರಂಪ್ ಅಲ್ಲಿನ ನೈಸರ್ಗಿಕ ಸಂಪನ್ಮೂಲದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳಿವೆ.
ಇರಾನ್
ದಶಕಗಳಿಂದಲೂ ಇರಾನ್ ಮತ್ತು ಅಮೆರಿಕ ಹಾವು-ಮುಂಗುಸಿಯಂತೆ. ಇರಾನ್ ಅಣ್ವಸ್ತ್ರ ಹೊಂದುವ ವಿಚಾರದಲ್ಲಿ ಅಮೆರಿಕ ಅಡ್ಡಗಾಲು ಹಾಕುತ್ತಿದೆ. ಹೀಗಾಗಿ, ಹಿಂದಿನಿಂದಲೂ ಅಮೆರಿಕವನ್ನು ಇರಾನ್ ಕಟುವಾಗಿ ಟೀಕಿಸುತ್ತಲೇ ಬಂದಿದೆ. ಆದರೆ, ಈಗ ಅಯತೊಲ್ಲಾ ಖಮೇನಿ ನಾಯಕತ್ವದ ಇರಾನ್ ಆಡಳಿತ ವಿರೋಧಿ ಅಲೆ ಎದ್ದಿದ್ದು, ದೇಶದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲ್ಲು ಆಡಳಿತ ಪ್ರಯತ್ನಿಸುತ್ತಿದೆ. ಆದರೆ, ಇದಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದೆ. ಇರಾನ್ ಜನರನ್ನು ಕೊಂದರೆ, ಅಮೆರಿಕದಿಂದ ಬಲವಾದ ಪೆಟ್ಟು ತಿನ್ನುತ್ತಾರೆಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್-ಇರಾನ್ ಸಂಘರ್ಷದ ವೇಳೆ ಇರಾನಿನ ಅಣ್ವಸ್ತ್ರ ಅಭಿವೃದ್ಧಿ ಘಟಕಗಳನ್ನು ಟಾರ್ಗೆಟ್ ಮಾಡಿ ಅಮೆರಿಕ ದಾಳಿ ನಡೆಸಿತ್ತು. ಈಗ ವೆನೆಜುವೆಲಾ ಮೇಲಿನ ಅಮೆರಿಕ ದಾಳಿಯನ್ನು ಇರಾನ್ ಖಂಡಿಸಿದೆ.

