ಟೊಮೆಟೋ ಬಳಿಕ ಬಾಳೆಹಣ್ಣಿಗೆ ಬಂಗಾರದ ಬೆಲೆ- 1 ಕೆಜಿ ಏಲಕ್ಕಿ ಬಾಳೆ 80 ರೂ.ಗೆ ಮಾರಾಟ

Public TV
3 Min Read
BANANA

ಕೋಲಾರ: ಇಷ್ಟು ದಿನಗಳ ಕಾಲ ಟೊಮೆಟೋ ಬೆಲೆ ಏರಿಕೆಯಿಂದ ಸದ್ದು ಮಾಡಿ ಈಗ ಟೊಮೆಟೋ ಬೆಲೆ ಇಳಿಕೆಯಾಗಿದೆ. ಶ್ರಾವಣ ಮಾಸದ ಆರಂಭವಾಗಿ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಈಗ ಟೊಮೆಟೋ ಸ್ಥಾನವನ್ನು ಬಾಳೆಹಣ್ಣು ತುಂಬಲಿದೆ. ಸದ್ಯ ಬಾಳೆಹಣ್ಣು (Banana) ಬೆಳೆದವರಿಗೆ ಜಾಕ್‍ಪಾಟ್ ಎನ್ನುವಂತಾಗಿದ್ದು ಬಾಳೆ ಬೆಳೆದ ರೈತನ (Farmer) ಬದುಕು ಬಂಗಾರವಾಗಿದೆ.

tomato

ಕೋಲಾರದಲ್ಲಿ ಕಳೆದ ಎರಡು ಮೂರು ತಿಂಗಳಿಂದ ಟೊಮೆಟೋ ಬೆಲೆ (Tomato Price) ಏರಿಕೆ ಸದ್ದು ಜೋರಾಗಿತ್ತು. ಆದರೆ ಟೊಮೆಟೋ ಬೆಲೆ ಈಗ ಕಡಿಮೆಯಾಗಿದೆ. ಆದರೆ ಟೊಮೆಟೋ ರೀತಿಯಲ್ಲಿ ಈಗ ಹೆಚ್ಚು ಸದ್ದು ಮಾಡುತ್ತಿರುವುದು ಬಾಳೆ ಹಣ್ಣು. ಇನ್ನೇನು ಶ್ರಾವಣ ಮಾಸ ಆರಂಭವಾಗಲಿದ್ದು, ವರಮಹಾಲಕ್ಷ್ಮಿ, ಗೌರಿ-ಗಣೇಶ ಹಬ್ಬ, ದಸರಾ ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳಿವೆ. ಈ ಹಿನ್ನೆಲೆಯಲ್ಲಿ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಬಾಳೆ ಹಣ್ಣು ಬೆಳೆದ ರೈತರಿಗೆ ಜಾಕ್‍ಪಾಟ್ ಬೆಲೆ ಸಿಗುತ್ತಿದೆ. ಏಲಕ್ಕಿ ಬಾಳೆಹಣ್ಣು ಬೆಳೆದಿರುವ ಕೋಲಾರ ಜಿಲ್ಲೆಯ ದೊಡ್ಡಕಾರಿ ಗ್ರಾಮದ ಪ್ರಭಾಕರ್ ಅವರಿಗೆ ಭರ್ಜರಿ ಬೆಲೆ ಸಿಕ್ಕಿದೆ. ಐದು ಲಕ್ಷ ರೂಪಾಯಿ ಬಂಡವಾಳ ಹಾಕಿ 15 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಪ್ರಭಾಕರ್ ತಮ್ಮ ಎರಡೂವರೆ ಎಕರೆ ಪ್ರದೇಶದಲ್ಲಿ ಬಾಳೆಹಣ್ಣು ಬೆಳೆದಿದ್ದು, ಉತ್ತಮ ಫಸಲು ಬಂದಿದೆ. ರೈತರು ತೋಟದಲ್ಲೇ ಒಂದು ಕೆ.ಜಿ. ಬಾಳೆಹಣ್ಣಿಗೆ 75-80 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ವಿವಿಧ ಕಂಪನಿಗಳು, ವಿವಿಧ ಮಾರುಕಟ್ಟೆಗಳಿಂದ ರೈತರ ತೋಟಕ್ಕೆ ಬಂದು ಬಾಳೆಹಣ್ಣು ಖರೀದಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಜಗತ್ತಿನ ಬೃಹತ್ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಹೆಚ್‍ಡಿಕೆ

ಇತ್ತೀಚೆಗೆ ಕೋಲಾರ (Kolara) ಜಿಲ್ಲೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಹೆಚ್ಚಾಗಿ ಟೊಮೆಟೋ ಸೇರಿದಂತೆ ಹೆಚ್ಚು ತರಕಾರಿ ಬೆಳೆಗಳನ್ನೇ ರೈತರು ಬೆಳೆದಿದ್ದರು. ಅದರಲ್ಲೂ ಬಹುತೇಕ ಬೆಳೆಗಳು ವೈರಸ್ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗಿ ಬೆಳೆ ನಷ್ಟವಾಗಿದೆ. ಈ ಹಿನ್ನೆಲೆ ಟೊಮೆಟೋಗೆ ಅತಿ ಹೆಚ್ಚಿನ ಬೆಲೆ ಬಂದಿತ್ತು. ಹಾಗಾಗಿ ಮತ್ತೆ ಬಹುತೇಕ ರೈತರು ಟೊಮೆಟೋ ಬೆಳೆಯನ್ನೇ ಬೆಳೆಯುತ್ತಿದ್ದಾರೆ. ಅದಕ್ಕೂ ಮುಖ್ಯವಾಗಿ ಬಾಳೆ ವಾರ್ಷಿಕ ಬೆಳೆ ಇದಕ್ಕಾಗಿ ಸರಾಸರಿ ಹನ್ನೊಂದು ತಿಂಗಳಿಂದ ಒಂದು ವರ್ಷ ಕಾಯಬೇಕು. ಆದರೆ ಟೊಮೆಟೋ ಅಥವಾ ತರಕಾರಿ ಬೆಳೆಗಳು ಮೂರು ತಿಂಗಳಲ್ಲೇ ಫಸಲು ಬರುತ್ತದೆ. ಹಾಗಾಗಿ ರೈತರು ದೀರ್ಘಕಾಲಿಕ ಬೆಳೆ ಬೆಳೆಯಲು ಮನಸ್ಸು ಮಾಡುತ್ತಿಲ್ಲ. ಕೆಲವೇ ಕೆಲವು ರೈತರು ಮಾತ್ರ ಬಾಳೆ ಬೆಳೆ ಬೆಳೆದಿದ್ದಾರೆ.

 BANANA 1

ಟೊಮೆಟೋ ಸೇರಿದಂತೆ ಇತರ ತರಕಾರಿ ಬೆಳೆಗಳಿಗೆ ಹೋಲಿಕೆ ಮಾಡಿದ್ರೆ ಬಾಳೆ ಬೆಳೆಗೆ ರೋಗಬಾಧೆ ಕಡಿಮೆ ಮತ್ತು ನಿರ್ವಹಣಾ ವೆಚ್ಚವೂ ಕಡಿಮೆ. ಹಾಗಾಗಿ ರೈತರು ಬೇರೆ ಬೇರೆ ಬೆಳೆಗಳನ್ನು ಬೆಳೆದರೆ ಉತ್ತಮ ಲಾಭ ಪಡೆಯಬಹುದು ಅನ್ನೋದು ಬಾಳೆ ಬೆಳೆದ ರೈತರ ಮಾತು. ಸದ್ಯ ಈಗಿನ ಪರಿಸ್ಥಿತಿಯನ್ನು ನೋಡಿದ್ರೆ, ಟೊಮೆಟೋ ರೀತಿ ಬಾಳೆ ಬೆಳೆದ ರೈತರೂ ಕೂಡಾ ಲಕ್ಷಾಧೀಶ್ವರರು ಹಾಗೂ ಕೋಟ್ಯಧೀಶ್ವರರಾಗಲಿದ್ದಾರೆ ಅನ್ನೋದು ರೈತರ ಅಭಿಪ್ರಾಯ. ಇನ್ನು ಮಾರುಕಟ್ಟೆಯಲ್ಲೂ ಕೂಡಾ ಸದ್ಯ ಕೆಜಿ ಬಾಳೆಹಣ್ಣಿಗೆ 100 ರೂಪಾಯಿ ಇದ್ದು ಹಬ್ಬಗಳ ಸಾಲು ಶುರುವಾದರೆ, ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇಷ್ಟು ದಿನ ಬೆಲೆ ಏರಿಕೆಯಿಂದ ಸದ್ದು ಮಾಡಿದ್ದ ಟೊಮೆಟೋ ಬೆಲೆ ಕಡಿಮೆಯಾಗಿದ್ದು, ಇನ್ನು ಮುಂದೆ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಬಾಳೆ ಹಣ್ಣಿನ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಈಗ ಕೇವಲ ಟೊಮೆಟೋ ಬೆಳೆದವರಷ್ಟೇ ಅಲ್ಲಾ ಬಾಳೆಹಣ್ಣು ಬೆಳೆದವರು ಕೂಡಾ ಕೋಟ್ಯಧಿಪತಿಗಳಾಗಿರೋದಂತೂ ಸುಳ್ಳಲ್ಲ.

Web Stories

Share This Article